ADVERTISEMENT

ರಾಯಚೂರು: ಹತ್ತಿ ಖರೀದಿಗೆ ಅಗತ್ಯ ಕ್ರಮ: ರಾಜಾ ಅಮರೇಶ್ವರ ನಾಯಕ

​ಪ್ರಜಾವಾಣಿ ವಾರ್ತೆ
Published 12 ಮೇ 2020, 16:09 IST
Last Updated 12 ಮೇ 2020, 16:09 IST
ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಅವರು ಬಾವಲ್‌ ಕಾಟನ್‌ ಮಿಲ್‌ಗೆ ಮಂಗಳವಾರ ಭೇಟಿ ನೀಡಿ ಮಾಹಿತಿ ಪಡೆದರು
ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಅವರು ಬಾವಲ್‌ ಕಾಟನ್‌ ಮಿಲ್‌ಗೆ ಮಂಗಳವಾರ ಭೇಟಿ ನೀಡಿ ಮಾಹಿತಿ ಪಡೆದರು   

ರಾಯಚೂರು: ರೈತರು ಬೆಳೆದಿರುವ ಹತ್ತಿ ಖರೀದಿಗೆ ಹತ್ತಿ ನಿಗಮದಿಂದ ಕ್ರಮ ಕೈಗೊಳ್ಳಲಾಗುತ್ತಿದೆ. ಲಾಕ್‌ಡೌನ್‌ನಿಂದಾಗಿ ಒಂದೂವರೆ ತಿಂಗಳು ಖರೀದಿ ಪ್ರಕ್ರಿಯೆ ನಡೆದಿರಲಿಲ್ಲ. ಮೇ 5 ರಿಂದ ಒಂದು ಕೇಂದ್ರದಲ್ಲಿ ಮಾತ್ರ ಪುನರಾರಂಭವಾಗಿದೆ. ಇನ್ನೊಂದು ಖರೀದಿ ಕೇಂದ್ರ ತೆರೆಯಲು ಸೂಚಿಸಲಾಗಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.

ಮಂಗಳವಾರ ಎಪಿಎಂಸಿ ಭೇಟಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ರೈತರಿಗೆ ನೆರವಾಗಲು ಸರ್ಕಾರ ಬದ್ಧವಾಗಿದೆ. ವೈಟಿಪಿಎಸ್ ಹತ್ತಿರದಲ್ಲಿರುವ ಬಾವಲ ಕಾಟನ್ ಇಂಡಸ್ಟ್ರೀಸ್‌ಗೆ ಭೇಟಿ ನೀಡಿ ರೈತರಿಂದ ಹತ್ತಿ ಖರೀದಿ ಪ್ರಕ್ರಿಯೆ ಪರಿಶೀಲನೆ ನಡೆಸಿದ್ದೇನೆ. ರೈತರಿಂದಲೂ ಮಾಹಿತಿ ಪಡೆದಿದ್ದೇನೆ ಎಂದರು.

ADVERTISEMENT

ಹತ್ತಿ ನಿಗಮವು ರೈತರಿಂದ ನೇರವಾಗಿ ಹತ್ತಿ ಖರೀದಿ ಮಾಡುವುದರಿಂದ ಪ್ರತಿಯೊಂದು ಕ್ವಿಂಟಾಲ್‌ಗೆ ₹800 ರಿಂದ ₹1 ಸಾವಿರ ವರೆಗೆ ಹೆಚ್ಚುವರಿ ಹಣ ದೊರೆಯಲಿದೆ. ಆದರೆ ರೈತರು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಬೇಕು ಎಂದು ಮನವಿ ಮಾಡುತ್ತಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹತ್ತಿ ಖರೀದಿಸಲಾಗುವುದು ಎಂದು ಭರವಸೆ ನೀಡಿದರು.

ಎಲ್ಲಾ ರೈತರಿಂದ ಹತ್ತಿ ಖರೀದಿ ಮಾಡಲಾಗುತ್ತಿದ್ದು, ರೈತರು ಯಾರೂ ಆತಂಕ ಪಡುವ ಅಗತ್ಯವಿಲ್ಲ. ಹತ್ತಿ ನಿಗಮ, ಎಪಿಎಂಸಿ ಮತ್ತು ಇನ್ನಿತರ ಸಂಘ-ಸಂಸ್ಥೆಗಳ ಮೂಲಕ ರೈತರಿಗೆ ಟೋಕನ್ ನೀಡಿ ಖರೀದಿ ಮಾಡಲಾಗುತ್ತದೆ ಎಂದು ತಿಳಿಸಿದರು.

ರಾಯಚೂರು ಎಪಿಎಂಸಿ ಕಾರ್ಯದರ್ಶಿ ರಂಗನಾಥ್ ದೇಸಾಯಿ, ಸಂಬಂಧಿಸಿದ ಅಧಿಕಾರಿಗಳು, ಹತ್ತಿ ಇಂಡಸ್ಟ್ರೀಸ್‌ನ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.