ADVERTISEMENT

ಮುಡಾದಿಂದ ನಿಯಮಾನುಸಾರ ಭೂಪರಿವರ್ತನೆ

ಸಂಸದ ಜಿ.ಕುಮಾರ ನಾಯಕ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 23:23 IST
Last Updated 24 ಅಕ್ಟೋಬರ್ 2024, 23:23 IST
ಜಿ.ಕುಮಾರ ನಾಯಕ
ಜಿ.ಕುಮಾರ ನಾಯಕ   

ರಾಯಚೂರು: ‘ಮುಡಾ ಪ್ರಕರಣದ ವಿವಾದಿತ ಜಮೀನು ಪರಿವರ್ತನೆ ನಿಯಮಾನುಸಾರ ಮಾಡಲಾಗಿದ್ದು, ಲೋಕಾಯುಕ್ತರಿಗೂ ಈ ಬಗ್ಗೆ ಸಂಪೂರ್ಣ ಮಾಹಿತಿ ಕೊಡಲಾಗಿದೆ’ ಎಂದು ಸಂಸದ ಜಿ.ಕುಮಾರ ನಾಯಕ ತಿಳಿಸಿದರು.

‘ಮುಡಾ ವಿವಾದಿತ ಜಮೀನು ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಒಂದು ಗಂಟೆಗೂ ಹೆಚ್ಚು ಸಮಯ ಲೋಕಾಯುಕ್ತ ಪೊಲೀಸರು ನನ್ನನ್ನು ವಿಚಾರಣೆಗೆ ಒಳಪಡಿಸಿ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ’ ಎಂದು ಗುರುವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು.

‘2002ರಿಂದ 2005ರವರೆಗೆ ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದೆ. 1998ರಲ್ಲಿ ಭೂ ಅಧಿಸೂಚನೆ ಹೊರಡಿಸಲಾಗಿದೆ. ಅಂತಿಮ ನೋಟಿಫಿಕೇಷನ್ ಆದ 45 ದಿನಗಳ ಬಳಿಕ ಡಿನೋಟಿಫಿಕೇಷನ್ ಆಗಿದೆ. ಆರು ವರ್ಷಗಳ ನಂತರ ಜಿಲ್ಲಾಧಿಕಾರಿಯಿಂದ ಲೋಪವಾಗಿದೆ ಎನ್ನುವ ಆರೋಪದಲ್ಲಿ ಹುರುಳಿಲ್ಲ’ ಎಂದರು.

ADVERTISEMENT

‘ಲೋಕಾಯುಕ್ತರ ವಿಚಾರಣೆ ವೇಳೆ ಎಲ್ಲ ಮಾಹಿತಿ ನೀಡಿದ್ದೇನೆ. ನನ್ನ ಅಧಿಕಾರ ಅವಧಿಯಲ್ಲಿ ಕಡತಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದ್ದೇನೆ’ ಎಂದು ತಿಳಿಸಿದರು.

‘ರಾಯಚೂರು ವಿಮಾನ ನಿಲ್ದಾಣ ಕಾಮಗಾರಿಯ ವೇಗ ಹೆಚ್ಚಿಸಲು ಸೈಟ್ ಕ್ಲಿಯರೆನ್ಸ್ ಸಹಕಾರಿಯಾಗಿದೆ. ಕೆಕೆಆರ್‌ಡಿಬಿ ಹಾಗೂ ರಾಜ್ಯ ಸರ್ಕಾರದ ವಿವಿಧ ಅನುದಾನದಡಿ ವಿಮಾನ ನಿಲ್ದಾಣ ಕಾಮಗಾರಿ ಪ್ರಕ್ರಿಯೆ ನಡೆಯಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.