ADVERTISEMENT

ಮುದಗಲ್: ಮಳಿಗೆಗಳ ಹರಾಜಿಗೆ ಪುರಸಭೆ ನಿರ್ಲಕ್ಷ್ಯ

ಡಾ.ಶರಣಪ್ಪ ಆನೆಹೊಸೂರು
Published 7 ಅಕ್ಟೋಬರ್ 2024, 4:46 IST
Last Updated 7 ಅಕ್ಟೋಬರ್ 2024, 4:46 IST
ಮುದಗಲ್ ಬಸ್ ನಿಲ್ದಾಣ ಮುಂದೆ ಇರುವ ಹರಾಜು ಆಗದೆ ಉಳಿದ ಪುರಸಭೆಯ ವಾಣಿಜ್ಯ ಮಳಿಗೆಗಳು
ಮುದಗಲ್ ಬಸ್ ನಿಲ್ದಾಣ ಮುಂದೆ ಇರುವ ಹರಾಜು ಆಗದೆ ಉಳಿದ ಪುರಸಭೆಯ ವಾಣಿಜ್ಯ ಮಳಿಗೆಗಳು   

ಮುದಗಲ್: ಪಟ್ಟಣದಲ್ಲಿರುವ ಪುರಸಭೆಯ ವಾಣಿಜ್ಯ ಮಳಿಗೆಗಳ ಹರಾಜಿಗೆ ಪುರಸಭೆ ಆಡಳಿತ ಮಂಡಳಿ ಮೀನಮೇಷ ಎಣಿಸುತ್ತಿದೆ.

ಪುರಸಭೆಗೆ ಆದಾಯ ತಂದುಕೊಡುವ ಬಸ್ ನಿಲ್ದಾಣದ ಮುಂದಿನ ಮೊದಲ ಅಂತಸ್ತಿನ 10 ಮಳಿಗೆಗಳು ಹಾಗೂ ಮಟನ್ ಮಾರುಕಟ್ಟೆಯ 18 ಮಳಿಗೆಗೆಳನ್ನು ಹರಾಜು ಮಾಡುವ ಗೋಜಿಗೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಹೋಗಿಲ್ಲ. ಈ ಮಳಿಗೆಗಳು ಉದ್ಘಾಟನೆಗೊಂಡು ಅನೇಕ ವರ್ಷ ಕಳೆದರು ಹರಾಜು ಮಾಡುತ್ತಿಲ್ಲ. ಪುರಸಭೆಗೆ ಜಮಾ ಆಗುವ ಲಕ್ಷಾಂತರ ರೂಪಾಯಿ ಆದಾಯಕ್ಕೆ ಕತ್ತರಿ ಬಿದ್ದಿದೆ.

‘ಪಟ್ಟಣದ ಯುವಜನತೆ ಉದ್ಯೋಗವಿಲ್ಲದೇ ಸಮಸ್ಯೆಯ ಸೂಳಿಯಲ್ಲಿದ್ದಾರೆ. ಮಳಿಗೆ ತೆರೆದರೆ ಕೆಲ ಜನರು ವ್ಯಾಪಾರ ವ್ಯವಹಾರದತ್ತ ಮುಖ ಮಾಡುತ್ತಾರೆ. ಪುರಸಭೆಗೂ ಆದಾಯ ಸಿಗುತ್ತದೆ. ಆದಾಯ ತಂದುಕೊಡುವ ಈ ಮಳಿಗೆಗಳ ಹರಾಜು ಹಾಕುವ ಪ್ರಕ್ರಿಯೆಗೆ ಮೀನಮೇಷ ಎಣಿಸುತ್ತಿದ್ದಾರೆ. ಮಳಿಗೆಗಾಗಿ ಅರ್ಜಿ ಸಲ್ಲಿಸಿದವರು ಚಾತಕ ಪಕ್ಷಿಯಂತೆ ಕಾಯುತ್ತಿದ್ದರೆ’ ಎಂದು ಡಿ.ಎಸ್.ಎಸ್. ಮುಖಂಡ ಶರಣಪ್ಪ ಕಟ್ಟಿಮನಿ ಆರೋಪಿಸಿದರು.

ADVERTISEMENT

ಆಗಿನ ಮುಖ್ಯಾಧಿಕಾರಿ ನರಸಿಂಹಮೂರ್ತಿ ಇದ್ದ ವೇಳೆ ಮಳಿಗೆ ಹರಾಜು ಪ್ರಕ್ರಿಯೆ ನಡೆಸಲು ಸಿದ್ಧತೆ ನಡೆದಿತ್ತು. ಆದರೆ, ಏಕಾಏಕಿ ಅದನ್ನು ಕೈಬಿಡಲಾಗಿದೆ. ಚುನಾಯಿತಿ ಪ್ರತಿನಿಧಿಗಳು ಈ ಮಳಿಗೆ ಹರಾಜು ಪ್ರಕ್ರಿಯೆ ನಡೆಸಲು ಮನಸ್ಸು ಮಾಡುತ್ತಿಲ್ಲ. ಮಳಿಗೆ ಹರಾಜು ಮಾಡುವ ವಿಷಯ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಪ್ರಸ್ಥಾಪ ಮಾಡಿದರೆ, ಸದಸ್ಯರು ವಿವಿಧ ಕಾರಣಗಳು ಹೇಳಿ, ಹರಾಜು ಮಾಡುವ ಪ್ರಕ್ರಿಯೆನ್ನು ತಡೆ ಹಿಡಿಯುತ್ತಿದ್ದಾರೆ.

ಮಟನ್ ಮಾರುಕಟ್ಟೆ ಹರಾಜು ಮಾಡಬೇಡಿ. ಇದ್ದ ವ್ಯಾಪಾರಸ್ಥರಿಗೆ ಮಳಿಗೆ ನೀಡಿ ಎಂದು ಆಗಿನ ಮುಖ್ಯಾಧಿಕಾರಿ ನರಸಿಂಹಮೂರ್ತಿಗೆ ವ್ಯಾಪಾರಸ್ಥರು ಮನವಿ ಮಾಡಿದ್ದರು. ಮಳಿಗೆಗಳು ಹರಾಜು ಮಾಡದೇ ಬಾಡಿಗೆಗೆ ಕೊಡುವುದಕ್ಕೆ ಬರುವುದಿಲ್ಲ. ಹರಾಜಿನಲ್ಲಿ ಭಾಗವಹಿಸಿ ಪಡೆದುಕೊಳ್ಳಿ ಎಂದು ಹೇಳಿದ್ದರು. ಆದರೆ, ಹರಾಜು ಪ್ರಕ್ರಿಯ ನಡೆಯಲಿಲ್ಲ. ಮಳಿಗೆ ಮುಂದೆ ಮೆಟ್ಟಿಲು ಸ್ಥಳದಲ್ಲಿಯೇ ಮಟನ್, ಚಿಕನ್ ಮಾರಾಟ ಮಾಡುತ್ತಿದ್ದಾರೆ. ಇಂದರಿಂದ ನೂತನ ಮಳಿಗೆಗಳು ಹಳೆ ಮಳಿಗೆಯಂತೆ ಕಾಣುತ್ತಿವೆ.

’ಪಟ್ಟಣದಲ್ಲಿರುವ ಪುರಸಭೆಯ 30ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು ಸರ್ಕಾರ ನಿಯಮ ಅನುಸಾರ ಹರಾಜು ಪ್ರಕ್ರಿಯ ಆಗಿಲ್ಲ. ಕಾಲಕಾಲಕ್ಕೆ ಹರಾಜು ಮಾಡದೇ ಬಾಡಿಗೆಯನ್ನು ಮುಂದುವರಿಸಲಾಗಿದೆ. 15 ವರ್ಷದ ಹಿಂದೆ ₹3000 ರಿಂದ ₹3500 ಬಾಡಿಗೆ ನಿಗದಿಪಡಿಸಿದೆ. ಸದ್ಯ ಮಾರುಕಟ್ಟೆಯಲ್ಲಿ ಮಳಿಗೆಯೊಂದಕ್ಕೆ ಕನಿಷ್ಠ ₹5000 ರಿಂದ ₹6000 ಬಾಡಿಗೆ ಇದೆ. ಮಳಿಗೆ ಹರಾಜಿನಲ್ಲಿ ಮೀಸಲಾತಿ ಬಳಕೆಯಾಗಿಲ್ಲ. ಸ್ಥಳೀಯರು ಮಳಿಗೆ ಪಡೆದು ಅಕ್ರಮವಾಗಿ ಮತ್ತೂಬ್ಬರಿಗೆ ದುಪ್ಪಟ್ಟು ಬೆಲೆಗೆ ಬಾಡಿಗೆ ನೀಡಿ, ಹಣ ಜೇಬಿಗಿಳಿಸುತ್ತಿದ್ದಾರೆ’ ಎಂದು ಭಾರತೀಯ ದಲಿತ ಪ್ಯಾಂತರ ಮುದಗಲ್ ಘಟಕ ಅಧ್ಯಕ್ಷ ಕೃಷ್ಣ ಚಲುವಾದಿ ಆರೋಪಿಸಿದರು.

’ಮಳಿಗೆ ಹರಾಜು ಪಡೆದ ವ್ಯಾಪಾರಸ್ಥರೇ ಅಂಗಡಿ ನಡೆಸಬೇಕು ಎಂಬ ನಿಯಮ ಮಾಡಿದ್ದರೂ ಸಮರ್ಪಕವಾಗಿ ಜಾರಿಗೆ ಬರುತ್ತಿಲ್ಲ. ಹರಾಜು ಅವಧಿ ಮುಗಿದರೂ ಹರಾಜು ಮಾಡಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಪುರಸಭೆ ಅಧಿಕಾರಿಗಳು ಕಂಡೂ, ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ’ ಎಂದು ಮಂಜುನಾಥ ಆರೋಪಿಸಿದರು.

ಪುರಸಭೆ ಆದಾಯ ನೀಡುವ ಮಳಿಗೆ ಹರಾಜು ಹಾಕಬೇಕು. ಹರಾಜು ಪ್ರಕ್ರಿಯೆಗೆ ಪುರಸಭೆ ಅಧ್ಯಕ್ಷರು ದಿನಾಂಕ ನಿಗದಿ ಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಪುರಸಭೆ ಆದಾಯ ತಂದುಕೊಡುವ ಮಳಿಗೆಗಳ ಹರಾಜು ತುರ್ತಾಗಿ ಆಗಬೇಕಿದೆ. ಈ ಪ್ರಕ್ರಿಯೆ ನಡೆಸಲು ಅಧ್ಯಕ್ಷರು ಮುಂದಾಗಬೇಕು ಎನ್ನುತ್ತಾರೆ ಸಾರ್ವಜನಿಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.