ADVERTISEMENT

ಕವಿತಾಳ: ಫಕೀರ ವೇಷ ಧರಿಸಿ ಮೊಹರಂ ಹರಕೆ

ಮಂಜುನಾಥ ಎನ್ ಬಳ್ಳಾರಿ
Published 15 ಜುಲೈ 2024, 6:01 IST
Last Updated 15 ಜುಲೈ 2024, 6:01 IST
ಕವಿತಾಳದಲ್ಲಿ ಮೊಹರಂ ನಿಮಿತ್ತ ಫಕೀರ ವೇಷ ಧರಿಸಿದ ಮಕ್ಕಳು ಅಂಗಡಿ ಎದುರು ಭಿಕ್ಷೆ ಬೇಡುತ್ತಿರುವುದು.
ಕವಿತಾಳದಲ್ಲಿ ಮೊಹರಂ ನಿಮಿತ್ತ ಫಕೀರ ವೇಷ ಧರಿಸಿದ ಮಕ್ಕಳು ಅಂಗಡಿ ಎದುರು ಭಿಕ್ಷೆ ಬೇಡುತ್ತಿರುವುದು.   

ಕವಿತಾಳ: ಮೊಹರಂ ಹಬ್ಬದ ಅಂಗವಾಗಿ ಅಲೆಮಾರಿ ಸಮುದಾಯದ ಹುಡುಗರು ಫಕೀರ ವೇಷ ಧರಿಸಿ ಮನೆ ಮತ್ತು ಅಂಗಡಿಗಳಿಗೆ ಹೋಗಿ ಭಿಕ್ಷೆ ಬೇಡುವ ಮೂಲಕ ಹರಕೆ ತೀರಿಸುತ್ತಿರುವ ದೃಶ್ಯ ಪಟ್ಟಣ ಸೇರಿದಂತೆ ವಿವಿಧೆಡೆ ಕಂಡು ಬರುತ್ತಿದೆ.

ಮುಖ, ಮೈ ಮೇಲೆಲ್ಲಾ ಕರಿ ಬಣ್ಣ, ತಲೆಗೆ ಬಣ್ಣದ ಕಾಗದಿಂದ ತಯಾರಿಸಿದ ಉದ್ದನೆ ಟೋಪಿ, ಕಾಲಲ್ಲಿ ಗೆಜ್ಜೆ, ಕೊರಳಲ್ಲಿ ಎತ್ತಿನ ಕುತ್ತಿಗೆಗೆ ಕಟ್ಟುವ ಘಂಟೆ ಮತ್ತು ಲಾಡಿ , ಕೈಯಲ್ಲಿ ಟವೆಲ್‌ ಸುತ್ತಿ ಮಾಡಿದ ಲಡ್ಡು ಹಿಡಿದು ಘಂಟೆ, ಗೆಜ್ಜೆ ಶಬ್ದ ಮಾಡುತ್ತಾ ಓಣಿಗಳಲ್ಲಿ ಬರುತ್ತಿದ್ದರೆ ಚಿಕ್ಕ ಮಕ್ಕಳು ಹೆದರಿ ಓಡಿ ಹೋಗುತ್ತಾರೆ. ಅಳ್ಳಳ್ಳಿ ಬುಕ್ಕ ಮತ್ತು ಅಳ್ಳಳ್ಳಿ ಬಚ್ಚಾ ಎಂದು ಕರೆಯಿಸಿಕೊಳ್ಳುವ ಈ ಹುಡುಗರು ಸಣ್ಣ ಮಕ್ಕಳಿಗೆ ಟವೆಲ್‌ನಿಂದ ಬೆನ್ನಿಗೆ ಹೊಡೆಯುವ ಮೂಲಕ ಅಂಗಳದಲ್ಲಿ ಹೆಜ್ಜೆ ಹಾಕಿ ಸಾರ್ವಜನಿಕರನ್ನು ರಂಜಿಸುತ್ತಾರೆ.

ಮೊಹರಂ ಹಬ್ಬದ ಅವಧಿಯಲ್ಲಿ ಬೊಂಬಲೆ ರಾಯ್ಮುದ್ದೀನ್‌ ಎಂದು ಕೂಗುವ ಮೂಲಕ ಮನೆ ಮನೆಗೆ ತೆರಳಿ ಭಿಕ್ಷೆ ಪಡೆಯುವ ಈ ಸಂಪ್ರದಾಯದ ಬಗ್ಗೆ ಈಗಲೂ ನಂಬಿಕೆ ಹೊಂದಿರುವ ಇಲ್ಲಿನ ಅಲೆಮಾರಿ ಜನಾಂಗದಲ್ಲಿ ಮಕ್ಕಳು ಮತ್ತು ಕೆಲವು ವಯಸ್ಕರು ಫಕೀರ ವೇಷ ಧರಿಸಿ ಹರಕೆ ತೀರಿಸುತ್ತಾರೆ.

ADVERTISEMENT

‘ಮಕ್ಕಳಿಗೆ ಅನಾರೋಗ್ಯ ಮತ್ತಿತರ ಸಮಸ್ಯೆ ಉಂಟಾದಾಗ ಮೊಹರಂ ದೇವರಲ್ಲಿ ಹರಕೆ ಕಟ್ಟಿಕೊಂಡಿರುತ್ತಾರೆ. ಅದರಂತೆ ಹಬ್ಬದ ದಿನಗಳಲ್ಲಿ ಮೂರು ದಿವಸ ಮತ್ತು ಐದು ದಿನ ಭಿಕ್ಷೆ ಬೇಡುವ ಮೂಲಕ ಹರಕೆ ತೀರುಸುವುದು ವಾಡಿಕೆ. ಹೀಗೆ ಮೂರು ಅಥವಾ ಐದು ವರ್ಷ ವ್ರತ ಆಚರಿಸಲಾಗುವುದು’ ಎಂದು ಅಲೆಮಾರಿ ಸಮಾಜದ ಮುಖಂಡ ದುರುಗೇಶ ಯಡವಲ್‌ ಹೇಳಿದರು.

‘ಅಲೆಮಾರಿ ಜನಾಂಗದಲ್ಲಿ ಮಕ್ಕಳು ಮತ್ತು ವಯಸ್ಕರು ಫಕೀರ ವೇಷ ಧರಿಸುವುದು ತಲೆಮಾರುಗಳಿಂದ ನಡೆದುಕೊಂಡು ಬಂದಿದೆ. ವಯಸ್ಕರು ಅತ್ಯಂತ ಕಟ್ಟುನಿಟ್ಟಾಗಿ ವ್ರತಾಚರಣೆ ಮಾಡುತ್ತಾರೆ. ಬೆಳಿಗ್ಗೆ ವೇಷ ಧರಿಸಿದ ನಂತರ ಸಂಜೆ ವೇಷ ಕಳಚುವವರೆಗೆ ಮೌನಾಚರಣೆ ಜತೆ ಉಪವಾಸ ಮಾಡುತ್ತಾರೆ. ನೀರು ಕುಡಿಯಬೇಕಿದ್ದರೂ ಟೋಪಿ ತೆಗೆದು ನೀರು ಕುಡಿಯಬೇಕು ಮಕ್ಕಳ ವಿಚಾರದಲ್ಲಿ ಸ್ವಲ್ಪ ವ್ರತಕ್ಕೆ ವಿನಾಯಿತಿ ಇದೆʼ ಎಂದು ಸಮಾಜದ ಹಿರಿಯ ನಾಗಪ್ಪ ಯಡವಲ್‌ ತಿಳಿಸಿದರು.

‘ಹುಸೇನಭಾಷಾ ದೇವರಿಗೆ ಒಂದು ದಿನ, ಮೌಲಾಲಿಗೆ ಮೂರು ದಿನ ಹಸೇನ್ ಮತ್ತು ಹುಸೇನಿಗೆ ಹರಕೆ ಹೊತ್ತರೆ ಐದು ದಿನ ಹರಕೆ ಹೊರುವುದು ವಾಡಿಕೆ‌. ಮೊಹರಂ ಕೊನೆಯ ದಿನ ಮಸೀದಿಗೆ ತೆರಳಿ ಸಕ್ಕರೆ ಮತ್ತು ಲಾಡಿ ಸಮರ್ಪಿಸಿ ವ್ರತ ಬಿಡಲಾಗುವುದುʼ ಎಂದು ಮಹೇಶಾ ಯಡವಲ್‌ ಹೇಳಿದರು.

ಕವಿತಾಳದಲ್ಲಿ ಮೊಹರಂ ನಿಮಿತ್ತ ಫಕೀರ ವೇಷ ಧರಿಸಿದ ಮಕ್ಕಳು ಅಂಗಡಿ ಎದುರು ಭಿಕ್ಷೆ ಬೇಡುತ್ತಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.