ADVERTISEMENT

ರಾಯಚೂರು | ಅಧ್ಯಕ್ಷರಿಲ್ಲದ ನಗರಸಭೆ: ಅಭಿವೃದ್ಧಿ ಕಾರ್ಯಗಳಿಗೆ ಗರ 

ಅಧಿಕಾರಿಗಳು ನಮ್ಮ ಮಾತನ್ನೇ ಕೇಳುತ್ತಿಲ್ಲ; ಸದಸ್ಯರ ಅಸಮಾಧಾನ

ಬಾವಸಲಿ
Published 2 ಜುಲೈ 2024, 4:32 IST
Last Updated 2 ಜುಲೈ 2024, 4:32 IST
ರಾಯಚೂರು ನಗರಸಭೆ
ರಾಯಚೂರು ನಗರಸಭೆ   

ರಾಯಚೂರು: ಇಲ್ಲಿನ ನಗರಸಭೆಗೆ ಕಳೆದ ಒಂದು ವರ್ಷದಿಂದ ಅಧ್ಯಕ್ಷರ ನೇಮಕವಾಗದ ಕಾರಣ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಿದೆ.

ಅಧ್ಯಕ್ಷರಾಗಿದ್ದ ಕಾಂಗ್ರೆಸ್‌ನ ಇ.ವಿನಯಕುಮಾರ ರಾಜೀನಾಮೆ ನೀಡಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಬಳಿಕ ನಗರ ಶಾಸಕ ಡಾ.ಶಿವರಾಜ ಪಾಟೀಲರ ಬೆಂಬಲದಿಂದ ಬಿಜೆಪಿಯ ಲಲಿತಾ ಕಡಗೋಲ ಅವರು ಅಧ್ಯಕ್ಷರಾಗಿ 11 ತಿಂಗಳು ಆಡಳಿತ ನಡೆಸಿದ್ದರು. ಅವರ ಅವಧಿಯೂ ಮುಗಿದಿದ್ದು, ಹೊಸ ಮೀಸಲಾತಿ ಪ್ರಕಟವಾಗಬೇಕಿದೆ.

ನಗರದ ಬಡಾವಣೆಗಳಲ್ಲಿ ಸಿಸಿ ರಸ್ತೆ, ಒಳ ಚರಂಡಿ, ಸಮರ್ಪಕ ಕಸ ವಿಲೇವಾರಿ, ವಿದ್ಯುತ್ ದೀಪಗಳಿಲ್ಲದೇ ಜನರು ನಗರಸಭೆಯ ಸದಸ್ಯರ ಮುಂದೆ ಅಳಲು ತೋಡಿಕೊಳ್ಳುತ್ತಿದ್ದಾರೆ. ಆದರೆ ಸದಸ್ಯರು, ‘ಅಧಿಕಾರಿಗಳು ತಮ್ಮ ಮಾತನ್ನೇ ಕೇಳುತ್ತಿಲ್ಲ. ನಾವು ಚುನಾಯಿತ ಪ್ರತಿನಿಧಿಗಳಾದರೂ ನಗರಸಭೆಯಲ್ಲಿ ನಮಗೆ ಬೆಲೆಯೇ ಇಲ್ಲದಂತಗಾಗಿದೆ’ ಎಂದು ಅಸಮಾಧಾನ ಹೊರ ಹಾಕುತ್ತಿದ್ದಾರೆ.

ADVERTISEMENT

‘ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೀರ್ಘಾವಧಿಗೆ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಇಲ್ಲಿನ ಪೌರಾಯುಕ್ತ ಗುರುಸಿದ್ದಯ್ಯ ಅವರಿಗೆ ರಿಮ್ಸ್ ಕಾರ್ಯನಿರ್ವಾಹಕ ಅಧಿಕಾರಿಯಾಗಿ ವರ್ಗಾವಣೆ ಮಾಡಲಾಗಿತ್ತು. ಅನೇಕ ತಿಂಗಳ ಕಾಲ ಇ–ಖಾತೆ , ಜನನ, ಮರಣ ಪತ್ರ, ಮೊಟೇಶನ್  ಸೇರಿದಂತೆ ಇತರೆ ಕೆಲಸಗಳು ಸ್ಥಗಿತವಾಗಿತ್ತು. ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಯಾದರೂ ನಗರಸಭೆ ಅಧ್ಯಕ್ಷರ ಆಯ್ಕೆ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ‘ ಎಂದು ಎಲ್‌ಬಿಎಸ್ ನಗರದ ಮಹಮ್ಮದ್ ಸಾದೀಕ್ ಬೇಸರ ವ್ಯಕ್ತಪಡಿಸುತ್ತಾರೆ.

ನಗರಸಭೆಗೆ ಒಂದು ವರ್ಷದಿಂದ ಅಧ್ಯಕ್ಷರಿಲ್ಲದೇ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಅನೇಕ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲು ವಿಳಂಬವಾಗುತ್ತಿದೆ. ತಕ್ಷಣ ಸಾಮಾನ್ಯ ಸಭೆ ಕರೆಯಬೇಕು ಎಂದು ನಗರಸಭೆಯ ಸದಸ್ಯರು ಈಚೆಗೆ ನಗರಸಭೆಯ ಆಡಳಿತ ಅಧಿಕಾರಿ ಆಗಿರುವ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಅವರಿಗೆ ಮನವಿ ಸಲ್ಲಿಸಲು ತೆರಳಿದ್ದರು. ಆದರೆ ಅವರು ಕಳೆದ ಕೆಲ ದಿನಗಳಿಂದ ರಜೆಯಲ್ಲಿರುವ ಕಾರಣ ಪ್ರಭಾರಿ ಜಿಲ್ಲಾಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಅವರಿಗೆ ಮನವಿ ಸಲ್ಲಿಸಿದ್ದರು.

‘ನಗರಸಭೆಗೆ ಅಧ್ಯಕ್ಷರಿಲ್ಲದ ಕಾರಣ 15 ತಿಂಗಳಿನಿಂದ ಸಾಮಾನ್ಯ ಸಭೆ ನಡೆದಿಲ್ಲ. ನಗರಸಭೆ ಸದಸ್ಯರ ಕುಂದುಕೊರತೆ ಕೇಳುವವರಿಲ್ಲವಾಗಿದ್ದಾರೆ. ಆಡಳಿತ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ತಕ್ಷಣ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು‘ ಎಂದು ನಗರಸಭೆ ಸದಸ್ಯ ಇ.ಶಶಿರಾಜ್ ಮನವಿ ಮಾಡಿದ್ದಾರೆ.

ನಗರಕ್ಕೆ ಅಶುದ್ಧ ನೀರು ಪೂರೈಕೆ: ನಗರಸಭೆಯಿಂದ ಶುದ್ಧ ಕುಡಿಯುವ ನೀರು ವಿತರಣೆ ಇದುವರೆಗೆ ಸಾಧ್ಯವಾಗುತ್ತಿಲ್ಲ. ಕುಡಿಯುವ ನೀರು ಶುದ್ದೀಕರಣಗೊಳಿಸಲು ತಂತ್ರಜ್ಞರೇ ಇಲ್ಲ ಎಂದು ಈಚೆಗೆ ಜಿಲ್ಲಾ ಉಸ್ತುವಾರಿ  ಸಚಿವ ಡಾ.ಶರಣಪ್ರಕಾಶ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ವತಃ ಪೌರಾಯುಕ್ತ ಗುರುಸಿದ್ದಯ್ಯ ಅವರು ಅಸಹಾಯಕತೆ ವ್ಯಕ್ತಪಡಿಸಿದ್ದರು.

ಎರಡು ವರ್ಷಗಳ ಹಿಂದೆ ಕಲುಷಿತ ನೀರು ಸೇವಿಸಿ ಅನೇಕ ಜನ ಅಸ್ವಸ್ಥಗೊಂಡಿದ್ದರು. ಆದರೂ ಸರ್ಕಾರ ಎಚ್ಚೆತ್ತುಗೊಂಡಿಲ್ಲ.

ನಗರದಲ್ಲಿ ನಿತ್ಯ ಸಮರ್ಪಕ ಕಸ ವಿಲೇವಾರಿಯಾಗುತ್ತಿಲ್ಲ. ಸ್ವಚ್ಛತೆ ಎನ್ನುವುದು ಮರೀಚಿಕೆಯಾಗಿದೆ.ಹಲವೆಡೆ ಕಸದ ರಾಶಿ ಕಾಣಸಿಗುತ್ತದೆ. ರಸ್ತೆಗಳಲ್ಲಿ ಅಲ್ಲಿಲ್ಲಿ ಬಾಯ್ತೆರೆದ ಒಳ ಚರಂಡಿ ಗುಂಡಿಗಳಿಂದ ಸಂಚಾರಕ್ಕೆ ಸಮಸ್ಯೆಯಾಗಿದೆ.

‘ನಗರಸಭೆ ವ್ಯಾಪ್ತಿಯ ಯಕ್ಲಾಸಪುರು ಬಡಾವಣೆಯಲ್ಲಿರುವ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕೆಲ ಕಾಮಗಾರಿಗೆ ಟೆಂಡರ್ ನೀಡಿದ್ದು ಸ್ಥಗಿತವಾಗಿದೆ. ನಗರದ ವಿವಿಧೆಡೆ ಸುಮಾರು ₹12 ಕೋಟಿಯ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಬೇಕಿದೆ. ಜಿಲ್ಲಾಧಿಕಾರಿ ರಜೆಯಿಂದ ಬಂದ ಮೇಲೆ ಅನುಮೋದನೆ ಕೊಡುವ ವಿಶ್ವಾಸವಿದೆ’ ಎಂದು ನಗರಸಭೆಯ ಹಿರಿಯ ಸದಸ್ಯ ಜಯಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.