ಸಿಂಧನೂರು: ಬೊಮ್ಮನಾಳ (ಯು) ಗ್ರಾಮದಲ್ಲಿ ಕುರಿಗಳಿಗೆ ಸಂಬಂಧಿಸಿದ ವೈಷಮ್ಯ ನಂತರ ಸಾವಿನಲ್ಲಿ ಪರ್ಯಾಯವಸನಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ನ್ಯಾಯಾಧೀಶ ಬಿ.ಬಿ.ಜಕಾತೆ ಶನಿವಾರ ಬಿಡುಗಡೆಗೊಳಿಸಿ ಆದೇಶಿಸಿದ್ದಾರೆ.
2019 ರಲ್ಲಿ ಸಿಂಧನೂರು ತಾಲ್ಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಕುರಿಗಳಿಗೆ ಸಂಬಂಧಿಸಿದ ವೈಷಮ್ಯದ ಪ್ರಕರಣ ನಂತರ ಮಹಿಲೆಯೊಬ್ಬರ ಸಾವಿನ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ಎಂದು ತುರ್ವಿಹಾಳ ಪೋಲಿಸ್ ಠಾಣೆಯಲ್ಲಿ ದಾಖಲಾಗಿತ್ತು.
ಘಟನೆಯ ವಿವರ
ಶಿವಮೊಗ್ಗ ಜಿಲ್ಲೆಯ ಪುರಪ್ಪನ ಮನೆಯ ವೀರಭದ್ರಪ್ಪ ಅವರಿಗೆ ಸಿಂಧನೂರು ತಾಲ್ಲೂಕಿನ ಬೊಮ್ಮನಾಳ ಗ್ರಾಮದ ದುರ್ಗಮ್ಮ ಎಂಬ ಅಕ್ಕ ಇದ್ದರು. ದುರಗಮ್ಮಳ ಮಗ ಗಂಗಾಧರ ಈ ಪ್ರಕರಣದಲ್ಲಿ ಆರೋಪಿ.
ವೀರಭದ್ರಪ್ಪ ತನ್ನ ಕುರಿಗಳನ್ನು ಆರೋಪಿಯ ಹತ್ತಿರ ಸಾಕಲು ಬಿಟ್ಟಿದ್ದರು. ಕೆಲವು ವರ್ಷಗಳ ನಂತರ ಆರೋಪಿ ತನ್ನ ದುಶ್ಚಟಗಳು ಹಾಗೂ ಕುಡಿತಕ್ಕಾಗಿ ಕೆಲ ಕುರಿಗಳನ್ನು ಮಾರಾಟ ಮಾಡಿದ್ದನು. ಈ ವಿಚಾರ ತಿಳಿದು 2019ರ ಏಪ್ರಿಲ್ 7 ರಂದು ರಾತ್ರಿ 9.15ಕ್ಕೆ ಆರೋಪಿ ಮನೆಗೆ ವೀರಭದ್ರಪ್ಪ ವಿಚಾರಿಸಲು ಬಂದಿದ್ದರು. ಆಗ ವಾದ ವಿವಾದಗಳು ವಿಕೋಪಕ್ಕೆ ಹೋಗಿ ಆರೋಪಿ ಗಂಗಾಧರ ವೀರಭದ್ರಪ್ಪನಿಗೆ ಕಲ್ಲಿನಿಂದ ಬಲವಾಗಿ ಹೊಡೆದನು.
ಆ ಸಮಯದಲ್ಲಿ ತನ್ನ ಸಹೋದರನನ್ನು ಬಿಡಿಸಿಕೊಳ್ಳಲು ಆರೋಪಿತನ ತಾಯಿ ದುರಗಮ್ಮ ಬಂದಳು. ಆರೋಪಿ ಆಕೆಗೂ ಕಲ್ಲಿನಿಂದ ತಲೆಗೆ ಜೋರಾಗಿ ಹೊಡೆದು ತೀವ್ರ ಸ್ವರೂಪದ ಗಾಯಗೊಳಿಸಿದ್ದನು. ನಂತರ ಅವರಿರ್ವರು ತುರ್ವಿಹಾಳ ಪ್ರಾಥಮಿಕ ಆರೊಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದರು. ವೈದ್ಯರ ಸಲಹೆಯ ಮೇರೆಗೆ ಸಿಂಧನೂರು ಆಸ್ಪತ್ರೆಗೆ ಕರೆತರಲಾಯಿತು. ನಂತರ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಯಿತು. ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಏಪ್ರಿಲ್ 10 ರಂದು ತುರ್ವಿಹಾಳ ಪೋಲಿಸ್ ಠಾಣೆಯಲ್ಲಿ ವೀರಭದ್ರಪ್ಪ ಅವರು ಗಂಗಾಧರನ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ದುರಗಮ್ಮಳು ಏಪ್ರಿಲ್ 11 ರಂದು ಬಳ್ಳಾರಿಯ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದರಿಂದ ಈ ಪ್ರಕರಣ ಕೊಲೆ ಪ್ರಕರಣವೆಂದು ದಾಖಲಿಸಲಾಯಿತು.
ನಂತರ ತನಿಖೆ ಮಾಡಿ ತನಿಖಾಧಿಕಾರಿಗಳು ದೋಷಾರೋಪಣ ಪತ್ರ ಸಲ್ಲಿಸಿದರು. ನಂತರ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ.ಜಕಾತೆ ಅವರ ಮುಂದೆ ಸರ್ಕಾರಿ ಅಭಿಯೋಜಕರು 25 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದರು. ನಂತರ ಸುದೀರ್ಘ ವಾದ-ವಿವಾದ ಕೇಳಿ ಆರೋಪಿಯನ್ನು ನಿರ್ದೋಷಿ ಎಂದು ತೀರ್ಮಾನಿಸಿ ಶನಿವಾರ ಆದೇಶ ಹೊರಡಿಸಿದ್ದಾರೆ. ಆರೋಪಿಯ ಪರವಾಗಿ ಹಿರಿಯ ವಕೀಲ ಶಶಿಧರಗೌಡ ಕೆಲ್ಲೂರ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.