ಮಸ್ಕಿ: ಕಾಮಗಾರಿಯ ಮೂರನೇ ಗುಣಮಟ್ಟ ತಪಾಸಣೆ (ಥರ್ಡ್ ಪಾರ್ಟಿ) ವರದಿಗೆ ಸರ್ಕಾರ ನಿಗದಿಪಡಿಸಿದ ತಂಡ ಬಾರದ ಕಾರಣ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಯ ವಿವಿಧೆಡೆ ನಗರೋತ್ಥಾನ ಯೋಜನೆಯಲ್ಲಿ ಕೈಗೊಂಡಿರುವ ಕೋಟ್ಯಾಂತರ ರೂಪಾಯಿಗಳ ಕಾಮಗಾರಿಗಳು ನನೆಗುದಿಗೆ ಬಿದ್ದಿದ್ದು ಗುತ್ತಿಗೆದಾರರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸ್ಥಳೀಯ ಪುರಸಭೆ ಹಾಗೂ ತಾಲ್ಲೂಕಿನ ಬಳಗಾನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆ ಮೂಲಕ ವಿವಿಧ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿತ್ತು. 2022-23 ಸಾಲಿನಲ್ಲಿ ನಗರೋತ್ಥಾನ ಇಲಾಖೆಯಿಂದ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಕಟ್ಟಡ, ರಸ್ತೆ, ಚರಂಡಿ ಸೇರಿದಂತೆ ವಿವಿಧ ಕಾಮಗಾರಿಗಳು ಮೂರನೇ ಗುಣಮಟ್ಟ ತಪಾಸಣೆ ತಂಡದ ಏಜನ್ಸಿ ಪಡೆದವರು ತಪಾಸಣೆಗೆ ಬಾರದ ಕಾರಣ ನೆನೆಗುದಿಗೆ ಬಿದ್ದಿವೆ.
ವರ್ಷದಿಂದ ಪಾವತಿಯಾಗದ ಬಾಕಿ ಹಣ: ನಗರೋತ್ಥಾನ ಯೋಜನೆ ಅಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಗುಣಮಟ್ಟದ ಮೂರನೇ ಪರಿಶೀಲನಾ ವರದಿಗೆ ಸರ್ಕಾರದಿಂದ ನಿಯೋಜನೆಗೊಂಡ ಖಾಸಗಿ ಏಜನ್ಸಿಗೆ ಕಳೆದ ಒಂದು ವರ್ಷದಿಂದ ಸರ್ಕಾರ ಹಣ ಪಾವತಿ ಮಾಡಿಲ್ಲ. ಇದರಿಂದ ನಾವು ಯಾವುದೇ ಗುಣಮಟ್ಟದ ತಪಾಸಣೆ ಮಾಡುವುದಿಲ್ಲ ಎಂದು ಖಾಸಗಿ ಏಜನ್ಸಿಯೊಂದು ಹೇಳಿದೆ. ಇದರಿಂದ ವರ್ಷದಿಂದ ಆರಂಭಗೊಂಡ ಕಾಮಗಾರಿಗಳು ವೇಗ ಪಡೆಯದೆ ನೆನೆಗುದಿಗೆ ಬಿದ್ದಿದ್ದು ಗುತ್ತಿಗೆದಾರರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ.
ಮೂರನೇ ತಂಡ ತಪಾಸಣೆ ವರದಿ ಇಲ್ಲದೇ ಗುತ್ತಿಗೆದಾರರು ಏನು ಮಾಡುವಂತಿಲ್ಲ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಸರ್ಕಾರದಿಂದ ನಿಯೋಜನೆಗೊಂಡ ಖಾಸಗಿ ಏಜೆನ್ಸಿಯವರು ಗುಣಮಟ್ಟ ತಪಾಸಣೆಗೆ ಮುಂದೆ ಬರುತ್ತಿಲ್ಲ. ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಿ ಗುಣಮಟ್ಟ ತಪಾಸಣೆಗೆ ಮುಂದಾಗಬೇಕು ಎಂದು ಗುತ್ತಿಗೆದಾರರು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.
ನಗರೋತ್ಥಾನ ಯೋಜನೆಯ ಕಾಮಗಾರಿಗಳ ಗುಣಮಟ್ಟ ತಪಾಸಣೆಗೆ ನಿಯೋಜನೆಗೊಂಡ ಖಾಸಗಿ ಏಜನ್ಸಿಗೆ ವರ್ಷದಿಂದ ಹಣ ಪಾವತಿಯಾಗದ ಕಾರಣ ಅವರು ಮುಂದೆ ಬರುತ್ತಿಲ್ಲ. ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಶೀಘ್ರ ಸಮಸ್ಯೆ ಬಗೆ ಹರಿಯಲಿದೆ ಎಂಬ ವಿಶ್ವಾಸ ಇದೆಶಂಕರನಾಯಕ ಇಇ ಲೋಕೋಪಯೋಗಿ ಇಲಾಖೆ ರಾಯಚೂರು
ಕಾಮಗಾರಿಯ ಗುಣಮಟ್ಟದ ಮೂರನೇ ತಂಡದ ತಪಾಸಣೆಗೆ ಸರ್ಕಾರದಿಂದ ಟೆಂಡರ್ ಆಗಿ ಏಜನ್ಸಿಯೊಂದಿಗೆ ಒಪ್ಪಂದ ಆಗಿತ್ತದೆ. ಹಣ ಪಾವತಿಯಾಗಿಲ್ಲ ಎಂಬ ನೆಪಮಾಡಿ ತಪಾಸಣೆ ಮಾಡದೇ ಇರುವುದು ತಪ್ಪು ಸರ್ಕಾರ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಸಮಸ್ಯೆ ಇತ್ಯಾರ್ಥ ಪಡಿಸಲಿಬಲವಂತರಾಯ ವಟಗಲ್ ಅಧ್ಯಕ್ಷ ತಾಲ್ಲೂಕು ಗುತ್ತಿಗೆದಾರರ ಸಂಘ ಮಸ್ಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.