ಮಸ್ಕಿ: ಆಮಂತ್ರಣವಿಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರು ಬಿರಿಯಾನಿ ತಿನ್ನಲು ಪಾಕಿಸ್ತಾನಕ್ಕೆ ಹೋಗಿರಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ವ್ಯಂಗವಾಡಿದರು.
ಪಟ್ಟಣದ ಗ್ರಿನ್ ಸಿಟಿಯಲ್ಲಿ ಭಾನುವಾರ ನಡೆದ ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಪರವಾಗಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯು ಹಿಂದೂ ಮುಸ್ಲಿಮರ ನಡುವೆ ಜಗಳ ಹಚ್ಚಿ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ. ಅಧಿಕಾರಕ್ಕೆ ಬಂದ ಮೂರು ತಿಂಗಳಲ್ಲಿ ಯುವಕರಿಗೆ ಉದ್ಯೋಗ ಕೊಡುವ ಭರವಸೆ ನೀಡಿದ್ದರು. ಮೋದಿ ಮೋದಿ ಎಂದು ಕೂಗುವ ಯುವಕರಿಗೆ ಕಪಾಳಕ್ಕೆ ಹೊಡೆಯಿರಿ ಎಂದಿದ್ದೆ. ಇದನ್ನೆ ಮಾದ್ಯಮಗಳು ದೊಡ್ಡ ಸುದ್ದಿ ಮಾಡಿದವು ಎಂದರು.
ಸತ್ಯ ಮತ್ತು ಸುಳ್ಖಿನ ನಡುವೆ ಚುನಾವಣೆ ನಡೆಯುತ್ತಿದೆ. ಮೂರನೇ ಬಾರಿ ಸುಳ್ಳು ಗೆಲ್ಲಲ್ಲ ಎಂದರು.
ಯೋಗ ಮಾಡುವುದು ನಾವು ಹೆಸರು ಮಾತ್ರ ಮೋದಿಗೆ. ಚುನಾವಣೆ ಬಂದ್ರೆ ಸಾಕು ಮೋದಿ ಕಲರ್ ಕಲರ್ ಡ್ರೆಸ್ ಹಾಕಿಕೊಂಡು. ಟಿವಿಗಳಲ್ಲಿ ಪೋಸ್ ಕೋಡುತ್ತಾರೆ. ಅಯೋಧ್ಯೆಯಲ್ಲಿ ರಾಮಮಂದಿರದ ಬಾಗಿಲು ತೆರೆಸಿದ್ದು ಕಾಂಗ್ರೆಸ್. ಈಗ ಮೋದಿ ಅವರು ರಾಮನೊಂದಿಗೆ ಲಕ್ಷ್ಮಣ, ಸೀತೆ, ಆಂಜನೇಯನ್ನು ಪ್ರತಿಷ್ಠಾಪನೆ ಮಾಡದೆ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ ಎಂದು ವ್ಯಂಗ ಮಾಡಿದರು.
ಸಮುದ್ರದ ಕೆಳಗೆ ಹೋಗುವುದು, ನವಿಲು ಗೇರೆ ತಿರುಗಿಸುವುದು ಪ್ರಧಾನಿಯ ಲಕ್ಷಣವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸಬೇಕು ಎಂದು ಕರೆ ನೀಡಿದರು.
ಶಾಸಕರಾದ ಆರ್. ಬಸನಗೌಡ ತುರುವಿಹಾಳ, ಹಂಪನಗೌಡ ಬಾದರ್ಲಿ, ವಿಧಾನಪರಿಷತ್ತಿನ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪೂರು, ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ, ಅಭ್ಯರ್ಥಿ ರಾಜಶೇಖರ ಹಿಟ್ನಾಳ ಮಾತನಾಡಿದರು.
ಶಾಸಕ ರಾಘವೇಂದ್ರ ಹಿಟ್ನಾಳ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ, ಎಚ್. ಬಿ. ಮುರಾರಿ, ಹನುಮಂತಪ್ಪ ಮುದ್ದಾಪೂರ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.