ಮಸ್ಕಿ: '12 ವರ್ಷಗಳಿಂದ ನಾರಾಯಣಪುರ ಬಲದಂಡೆ 5 (ಎ) ಕಾಲುವೆ ಯೋಜನೆ ಜಾರಿಗಾಗಿ ಹೋರಾಟ ನಡೆಯುತ್ತಿದ್ದರೂ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಪ್ರತಾಪಗೌಡ ಪಾಟೀಲ ಯೋಜನೆ ಬಗ್ಗೆ ನಿರ್ಲಕ್ಷ್ಯ ಧೋರಣೆ ಮಾಡಿದ್ದನ್ನು ಖಂಡಿಸಿ ಶನಿವಾರದಿಂದ ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಜನಾಂದೋಲನ ಹಮ್ಮಿಕೊಳ್ಳಲಾಗಿದೆ' ಎಂದು ಹೋರಾಟ ಸಮಿತಿ ಗೌರವಾಧ್ಯಕ್ಷ ತಿಮ್ಮನಗೌಡ ಚಿಲ್ಕರಾಗಿ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯೋಜನೆ ಜಾರಿಗಾಗಿ 141 ದಿನಗಳ ನಿರಂತರ ಹೋರಾಟ ನಡೆಸಲಾಗುತ್ತಿದೆ. ಆದರೆ, ಸರ್ಕಾರ ಈ ಬಗ್ಗೆ ಚಕಾರವೆತ್ತಿಲ್ಲ. ಅದರ ಬದಲು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಯೋಜನೆ ಜಾರಿ ಅಸಾದ್ಯ ಎಂದು ಹೇಳುವ ಮೂಲಕ ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ ಅವರಿಗೆ ಯೋಜನೆ ಗಾಳಿ ಗಂಧ ಗೊತ್ತಿಲ್ಲ. ಈ ಹೋರಾಟವನ್ನು ಕಾಂಗ್ರೆಸ್ ಪ್ರೇರಿತ ಹೋರಾಟ ಎನ್ನುವ ಮೂಲಕ ಹೋರಾಟದ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಯೋಜನೆ ಜಾರಿಗೊಳಿಸಲು ಆಗದ ಪ್ರತಾಪಗೌಡ ಪಾಟೀಲ ಹಾಗೂ ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ರೈತರಲ್ಲಿ ಮನವಿ ಮಾಡಲಾಗುವುದು ಎಂದರು.
ಹೋರಾಟ ಸಮಿತಿ ಅಧ್ಯಕ್ಷ ಬಸವರಾಜಪ್ಪ ಹರ್ವಾಪೂರ, ಕಾರ್ಯದರ್ಶಿ ನಾಗಿರೆಡ್ಡಿ ದೇವರಮನಿ, ಎನ್.ಶಿವನಗೌಡ ವಟಗಲ್, ಮಲ್ಲಿಕಾರ್ಜುನ ಹೋವಿನಭಾವಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.