ADVERTISEMENT

ನಾರಾಯಣಪುರ ಬಲದಂಡೆ ಕಾಲುವೆ ಒಡೆದು ಬೆಳೆ ನಷ್ಟ: 4 ವರ್ಷ ಕಳೆದರೂ ಸಿಗದ ಪರಿಹಾರ

ಬಾವಸಲಿ
Published 30 ಅಕ್ಟೋಬರ್ 2024, 4:31 IST
Last Updated 30 ಅಕ್ಟೋಬರ್ 2024, 4:31 IST
ನಾರಾಯಣಪುರ ಬಲದಂಡೆ ಕಾಲುವೆ ಒಡೆದು ನೀರು ಹೊಲಕ್ಕೆ ನುಗ್ಗಿರುವುದು
ನಾರಾಯಣಪುರ ಬಲದಂಡೆ ಕಾಲುವೆ ಒಡೆದು ನೀರು ಹೊಲಕ್ಕೆ ನುಗ್ಗಿರುವುದು   

ರಾಯಚೂರು: ತಾಲ್ಲೂಕಿನ ಸಗಮಕುಂಟಾ ಪಂಚಾಯಿತಿ ವ್ಯಾಪ್ತಿಯ ಯರಗುಂಟಾ ಗ್ರಾಮದಲ್ಲಿ ನಾರಾಯಣಪುರ ಬಲದಂಡೆ ಕಾಲುವೆ (ಎನ್‌ಆರ್‌ಬಿಸಿ) ಒಡೆದು ಬೆಳೆ ಹಾಳಾಗಿ ಪರಿಹಾರಕ್ಕೆ ಸರ್ಕಾರಿ ಕಚೇರಿಗೆ ಅಲೆದಾಡಿ ನಾಲ್ಕು ವರ್ಷಗಳಾದರೂ ರೈತರಿಗೆ ಇನ್ನೂ ಬೆಳೆ ನಷ್ಟ ಪರಿಹಾರ ದೊರಕುತ್ತಿಲ್ಲ.

ಯರಗುಂಟಾ ಗ್ರಾಮದ ಸರ್ವೆ ನಂಬರ್ 76ರ 3.26 ಎಕರೆ ಜಮೀನಿನಲ್ಲಿ ಕೃಷ್ಣಯ್ಯ ನರಸಪ್ಪ ಭತ್ತ ಹಾಗೂ ಮೆಣಸಿನಕಾಯಿ ಬೆಳೆದಿದ್ದರು. 2020ರ ಆಗಸ್ಟ್‌ನಲ್ಲಿ ಮಳೆಗೆ ಎನ್‌ಆರ್‌ಬಿಸಿ ಕಾಲುವೆ ಒಡೆದು ಕೃಷ್ಣಯ್ಯನವರ ಜಮೀನಿಗೆ ನೀರು ನುಗ್ಗಿ ಮೆಣಸಿನಕಾಯಿ ಬೆಳೆ ನಾಶವಾಗಿತ್ತು. ₹1.50 ಲಕ್ಷ ಮೊತ್ತದ ಬೆಳೆ ನೀರು ಪಾಲಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು.

ಘಟನೆಯ ಬಳಿಕ ಸಂತ್ರಸ್ತ ಕೃಷ್ಣಯ್ಯ ಅವರು ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಿ ಇಲಾಖೆ ಅಧಿಕಾರಿಗಳಾದ ಎಇಇ, ಇಇ ಹಾಗೂ ವ್ಯವಸ್ಥಾಪಕ ನಿರ್ದೇಶಕರಿಗೆ ನಷ್ಟ ಪರಿಹಾರಕ್ಕೆ ಮನವಿ ಸಲ್ಲಿಸಿದರೂ ನಯಾ ಪೈಸೆ ನೀಡಿಲ್ಲ. ಹೊಲದಲ್ಲಿ ನೀರು ಸೀಳುಕೊಂಡು ಹೋದ ಕಾರಣ ಭೂಮಿ ಹಾಳಾಗಿದೆ. ಆದರೆ, ನಮ್ಮ ಸಂಕಷ್ಟ ಕೇಳುವವರೇ ಇಲ್ಲ ಎಂದು ಸಂತ್ರಸ್ತರು ದೂರಿದ್ದಾರೆ.

ADVERTISEMENT

‘ಎನ್‌ಆರ್‌ಬಿಸಿ ಕಾಲುವೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದರಿಂದ ಕಾಲುವೆ ಒಡೆದು ಈಗಲೂ ಹೊಲದಲ್ಲಿ ನೀರು ಹರಿಯುತ್ತಿರುವ ಕಾರಣ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ನೀಲನಕ್ಷೆಯಂತೆ ಕಾಲುವೆ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಸಂತ್ರಸ್ತ ಕೃಷ್ಣಯ್ಯ ಮನವಿ ಮಾಡಿದ್ದಾರೆ. 

ರಾಯಚೂರು ತಾಲ್ಲೂಕಿನ ಯರಗುಂಟಾ ಗ್ರಾಮದಲ್ಲಿ ನಾರಾಯಣಪುರ ಬಲದಂಡೆ ಕಾಲುವೆ ಒಡೆದು ಹೊಲಕ್ಕೆ ನೀರು ನುಗ್ಗಿದೆ  ಸಂಗ್ರಹ ಚಿತ್ರ

ಕೃಷ್ಣ ಭಾಗ್ಯ ಜಲ ನಿಗಮದ (ಕೆಬಿಜೆಎನ್‌ಎಲ್) ಕಾರ್ಯನಿರ್ವಾಹಕ ಎಂಜಿನಿಯರ್, ನಾರಾಯಣಪುರ ಬಲದಂಡೆ ಕಾಲುವೆ ವಿಭಾಗ –6 ಚಿಕ್ಕಹೊನ್ನಕುಣಿ ಅವರ ವ್ಯಾಪ್ತಿಯೊಳಗೆ ಬರುವ ಕಾರಣ ಸಂತ್ರಸ್ತ ಕುಟುಂಬಕ್ಕೆ ನಷ್ಟ ಪರಿಹಾರ ನೀಡುವಂತೆ ಜಿಲ್ಲಾಡಳಿತ ಕೆಬಿಜೆಎನ್‌ಎಲ್‌ಗೆ 2022ರ ಫೆಬ್ರುವರಿ 14ರಂದು ಪತ್ರ ಬರೆದಿದೆ. ಆದರೂ ಕೆಬಿಜೆಎನ್‌ಎಲ್ ಸ್ಪಂದಿಸುತ್ತಿಲ್ಲ.

‘ಬೆಳೆ ನಷ್ಟ ಪರಿಹಾರ ನೀಡುವ ಅಧಿಕಾರ ಕೆಬಿಜೆಎನ್‌ಎಲ್‌ಗೆ ಇಲ್ಲ. ಕಂದಾಯ ಇಲಾಖೆ ಈ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕು. ಈಗಾಗಲೇ ನಮ್ಮ ಇಲಾಖೆಯಿಂದ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಾಗಿದೆ’ ಎಂದು ಕೆಬಿಜೆಎನ್‌ಎಲ್‌ ಎಇಇ ಅನಿಲ್ ರಾಜ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.