ADVERTISEMENT

‘ಮಾರ್ಚ್ 3ರಿಂದ ಮೂರು ದಿನ ರಾಷ್ಟ್ರೀಯ ಸಮ್ಮೇಳನ’

ಪಕ್ಷದ ರಾಜ್ಯ ಕಾರ್ಯದರ್ಶಿ ಡಿ.ಎಚ್.ಪೂಜಾರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 7:12 IST
Last Updated 24 ಫೆಬ್ರುವರಿ 2024, 7:12 IST
ಡಿ.ಎಚ್.ಪೂಜಾರ
ಡಿ.ಎಚ್.ಪೂಜಾರ   

ರಾಯಚೂರು: ‘ಕೇಂದ್ರ ಸರ್ಕಾರ ಜನ ವಿರೋಧಿ ನೀತಿಯ ವಿರುದ್ಧ ಜಾಗೃತಿ ಮೂಡಿಸಲು ಸಿ‍ಪಿಐ(ಎಂಎಲ್) ಮಾಸ್ ಲೈನ್ ಕರ್ನಾಟಕ ರಾಜ್ಯ ಸಮಿತಿಯಿಂದ ಮಾರ್ಚ್ 3ರಿಂದ 5ರ ವರೆಗೆ ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ‘ರಾಷ್ಟ್ರೀಯ ಐಕ್ಯತಾ ಸಮ್ಮೇಳನ’ ಆಯೋಜಿಸಲಾಗಿದೆ’ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಡಿ.ಎಚ್.ಪೂಜಾರ ತಿಳಿಸಿದರು.

‘ಕೇಂದ್ರ ಸರ್ಕಾರವು ಬಡ, ಮಧ್ಯಮ ವರ್ಗದ ಹಿತ ಮರೆತು ಕಾರ್ಪೊರೇಟ್ ಪರ ಆಡಳಿತ ನಡೆಸುತ್ತಿದೆ. ಕೇಂದ್ರದ ದಮನಕಾರಿ ನೀತಿಗಳಿಂದ ಎಚ್ಚರಿಸುವ ದಿಸೆಯಲ್ಲಿ ಸಮ್ಮೇಳನ ಏರ್ಪಡಿಸಲಾಗಿದೆ’ ಎಂದು ಶುಕ್ರವಾರ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.

‘ದೇಶದ ಆರ್ಥಿಕ, ಸಾಮಾಜಿಕ ಸ್ಥಿತಿಗತಿಯ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ನಡೆಯಲಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದೇಶದ ಸಾಲ ಮತ್ತಷ್ಟು ಹೆಚ್ಚಾಗಿದೆ. ಹಸಿವಿನ ಸೂಚ್ಯಂಕದಲ್ಲಿ ಭಾರತ 107ನೇ ಸ್ಥಾನದಲ್ಲಿದೆ. 10 ವರ್ಷದಲ್ಲಿ ₹25 ಕೋಟಿ ಜನರು ಬಡತನ ರೇಖೆಯಿಂದ ಮೇಲಕ್ಕೆ ಹೋಗಿದ್ದಾರೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸುಳ್ಳು ಮಾಹಿತಿ ನೀಡಿದ್ದಾರೆ’ ಎಂದು ಟೀಕಿಸಿದ್ದಾರೆ.

ADVERTISEMENT

‘ಸಿಬಿಐ, ಇ.ಡಿ, ಐಟಿ ಹಾಗೂ ಇತರೆ ಸಂಸ್ಥೆಗಳನ್ನು ದುರುಪಯೋಗಿಸಿಕೊಂಡು ವಿರೋಧ ಪಕ್ಷಗಳನ್ನು ಬಗ್ಗು ಬಡಿಯಲು ಮುಂದಾಗಿದೆ. ದಕ್ಷಿಣ ಭಾರತದ ರಾಜ್ಯಗಳ ಜನರ ಭಾವನಾತ್ಮಕ ವಿಷಯಗಳಿಗೆ ಹೆಚ್ಚಿನ ಮಣ್ಣನೆ ನೀಡದೇ ರಾಜ್ಯಗಳ ಮೇಲೆ ಆರ್ಥಿಕ ಸರ್ವಾಧಿಕಾರ ನಡೆಸುತ್ತಿದೆ. ಕನಿಷ್ಠ ಬೆಂಬಲ ದರ (ಎಂಎಸ್‌ಪಿ) ಜಾರಿ ಮಾಡಬೇಕು ಎಂದು ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟವನ್ನು ಸಹಿಸದೇ ಪೊಲೀಸರಿಂದ ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ’ ಎಂದು ಆರೋಪಿಸಿದರು.

‘ಕೇಂದ್ರ ಸರ್ಕಾರ ಸಂವಿಧಾನ, ಪ್ರಜಾತಂತ್ರ್ಯ ವಿರೋಧಿ ನೀತಿ  ಅನುಸರಿಸುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸಲು ಸಿಪಿಐಎಂಎಲ್ ಪ್ರಜಾತಂತ್ರ, ಸಿಪಿಐಎಂಎಲ್ ಆರ್‌ಐ, ಪಿಸಿಸಿ–ಸಿಪಿಐಎಂಎಲ್ ಸಂಘಟನೆಗಳ ಒಕ್ಕೂಟದಿಂದ ‘ಕಾರ್ಪೊರೇಟ್ ಕೋಮುವಾದಿ ಪ್ಯಾಸಿಸಂ ವಿರುದ್ಧ ಹೋರಾಡಲು ಸಜ್ಜಾಗಿದೆ. ದೇಶದ ಸಂವಿಧಾನ, ಪ್ರಜಾಪ್ರಭುತ್ವ, ಸಮಾಜವಾದಿ ಆಶಯಗಳನ್ನು ರಕ್ಷಿಸಲು ಹೋರಾಟ ಮುಂದುವರಿಸಲಿದೆ’ ಎಂದು ತಿಳಿಸಿದರು.

ಮುಖಂಡರಾದ ಬಸವರಾಜ ಯರದಿಹಾಳ, ರಮೇಶ ಪಾಟೀಲ, ಅಶೋಕ ನಿಲಗಲ್, ಬಸವರಾಜ ಸಿಂಧನೂರು, ಸ್ವಾಮಿ ದಾಸ್ ಕುರ್ಡಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.