ADVERTISEMENT

‘ಡಿಜಿಟಲ್‌ ಹಾವಳಿಯಿಂದ ಮುದ್ರಣ ಮಾಧ್ಯಮಕ್ಕೆ ಆತಂಕ’

ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ಸಂವಿಧಾನ ಸಮರ್ಪಣಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 14:20 IST
Last Updated 26 ನವೆಂಬರ್ 2022, 14:20 IST
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ಸಂವಿಧಾನ ಓದು ದಿನಾಚರಣೆ ಕಾರ್ಯಕ್ರಮವನ್ನು ರಾಷ್ಟ್ರೀಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಬಿ.ಮಲ್ಲಿಕಾರ್ಜುನಯ್ಯ ಅವರು ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿದರು.
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ಸಂವಿಧಾನ ಓದು ದಿನಾಚರಣೆ ಕಾರ್ಯಕ್ರಮವನ್ನು ರಾಷ್ಟ್ರೀಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಬಿ.ಮಲ್ಲಿಕಾರ್ಜುನಯ್ಯ ಅವರು ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿದರು.   

ರಾಯಚೂರು: ಇತ್ತೀಚೆಗೆ ಡಿಜಿಟಲ್‌ ಮಾಧ್ಯಮಗಳ ಪ್ರಭಾವ ಹೆಚ್ಚಾಗಿದ್ದು, ಮುದ್ರಣ ಮಾಧ್ಯಮಗಳು ಆತಂಕ ಎದುರಿಸುವಂತಾಗಿದೆ ಎಂದು ರಾಷ್ಟ್ರೀಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಬಿ.ಮಲ್ಲಿಕಾರ್ಜುನಯ್ಯ ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಸಣ್ಣ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘ ಹಾಗೂ ರಾಯಚೂರು ರಿಪೋರ್ಟರ್ಸ್‌ ಗಿಲ್ಡ್‌ನಿಂದ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ಸಂವಿಧಾನ ಓದು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರೆಸ್‌ ಕೌನ್ಸಿಲ್‌ ಆಫ್‌ ಇಂಡಿಯಾ (ಪಿಸಿಐ) ಸಂಸ್ಥಾಪನೆ ದಿನವನ್ನು ರಾಷ್ಟ್ರೀಯ ಪತ್ರಿಕಾ ದಿನ ಎಂದು ಆಚರಿಸಲಾಗುತ್ತಿದೆ. ಈ ನಿಮಿತ್ತ ಪತ್ರಿಕೋದ್ಯಮದಲ್ಲಿ ನಾವು ಎಲ್ಲಿದ್ದೇವೆ ಎಂಬುದರ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದರು.

ADVERTISEMENT

ಏನು ಕೆಲಸ ಇಲ್ಲದವರು, ಒಂದು ಪತ್ರಿಕೆ ಸ್ಥಾಪಿಸೋಣ ಎಂದು ಅರ್ಜಿ ಸಲ್ಲಿಸುವುದು ಇತ್ತೀಚೆಗೆ ಹೆಚ್ಚಾಗಿದೆ. ಇದನ್ನು ನಿಯಂತ್ರಿಸುವ ಕೆಲಸ ಮಾಡಬೇಕಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲ ಮಾಹಿತಿ ಸಿಗುತ್ತದೆ. ಆದರೆ ಯಾವುದು ಸತ್ಯ, ಯಾವುದು ಮಿಥ್ಯ ಎಂದು‌ ನಿರ್ಧರಿಸುವುದು ಕಷ್ಟವಾಗಿದೆ ಎಂದು ಹೇಳಿದರು.

ಯಾವುದೇ ಮಾಧ್ಯಮವಾದರೂ ಸಮಾಜಕ್ಕೆ ಕಳಂಕ ತರುವ ಕೆಲಸ ಮಾಡಬಾರದು. ಬರೀ ಸುದ್ದಿಗಳನ್ನು ಜನರಿಗೆ ತಿಳಿಸುವ ಕಾಲ ಇದಲ್ಲ. ಕಾರ್ಯಕ್ರಮಗಳನ್ನು ನೇರವಾಗಿ ನೋಡುವ ಅಥವಾ ಇತರೆ ಡಿಜಿಟಲ್‌ ಮಾಧ್ಯಮಗಳಲ್ಲಿ ವೀಕ್ಷಿಸಲು ಸಾಧ್ಯವಾಗುತ್ತಿದೆ. ಅದನ್ನೇ ನಾವು ಸುದ್ದಿ ಬರೆದು ಕೊಡುತ್ತೇವೆ ಎಂಬುದನ್ನು ಜನರು ಒಪ್ಪುವುದಿಲ್ಲ. ಭಿನ್ನವಾದ ಮತ್ತು‌ ವಿಮರ್ಶಾತ್ಮಕವಾಗಿ ಸುದ್ದಿಗಳನ್ನು‌ ಕೊಡಬೇಕಿದೆ ಎಂದು ತಿಳಿಸಿದರು.

ಮೊಬೈಲ್‌ ತಂತ್ರಜ್ಞಾನವು ಮುಂದಿನ ದಿನಗಳಲ್ಲಿ ದೇಶಕ್ಕೆ ಅಪಾಯ ತಂದೊಡ್ಡಲಿದೆ. ಯಾವ ಮೊಬೈಲ್‌ನಲ್ಲಿ ಎಂತಹ ಚಿಪ್‌ ಅಳವಡಿಸಿದ್ದಾರೆ ಎನ್ನುವ ಮಾಹಿತಿಯೇ ತಿಳಿಯುವುದಿಲ್ಲ. ಈ ಮೂಲಕ ಬೇರೆ ದೇಶಗಳು ಬೇಹುಗಾರಿಕೆ ಮಾಡುತ್ತಿರಬಹುದು ಎಂಬುದನ್ನು ನಮಗೆ ಸದ್ಯ ಗೊತ್ತಾಗುತ್ತಿಲ್ಲ. ಮುಂಬರುವ ದಿನಗಳಲ್ಲಿ ತಿಳಿಯುವ ಸಾಧ್ಯತೆ ಇದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ್ ನಾಯಕ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಪರಿಗಣಿಸುವ ಪತ್ರಿಕಾ ಕ್ಷೇತ್ರಕ್ಕೂ ತನ್ನದೇ ಆದ ಜವಾಬ್ದಾರಿ ಇದೆ. ಜನರ ಸಮಸ್ಯೆಗಳನ್ನು ಆಡಳಿತ ವರ್ಗಕ್ಕೆ ತೋರಿಸುವ, ವಿಮರ್ಶಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿದ್ದು, ಅದನ್ನು ಹಾಗೇ ಮುಂದುವರಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್‌ ಬಿ. ಮಾತನಾಡಿ, ಪೊಲೀಸ್ ಹಾಗೂ ಮಾಧ್ಯದವರದ್ದು ಸಾಮ್ಯತೆಯ ಕೆಲಸ. ಇಬ್ಬರ ನಡುವೆ ಅನುಬಂಧ ಹೀಗೆ ಮುಂದುವರಿಸಬೇಕು. ಸಮಾಜ ನೀಡಿರುವ ಜವಾಬ್ದಾರಿ ಯಶಸ್ವಿಯಾಗಿ ನಿಭಾಯಿಸೋಣ. ಯಾವುದೇ ಒತ್ತಡದಲ್ಲಿ ಕೆಲಸ ಮಾಡಿದರೂ ಆರೋಗ್ಯದ ಕಡೆಗೆ ಕಾಳಜಿ‌ ವಹಿಸಬೇಕು ಎಂದು ತಿಳಿಸಿದರು.

ರಾಯಚೂರು ರಿಪೋರ್ಟರ್ಸ್‌ ಗಿಲ್ಡ್‌ ಅಧ್ಯಕ್ಷ ಚನ್ನಬಸವಣ್ಣ ಮಾತನಾಡಿ, ರಾಯಚೂರಿನಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನು ಕಳೆದ ಮೂರು ವರ್ಷಗಳಿಂದ ವಿಭಿನ್ನವಾಗಿ ಆಚರಿಸುತ್ತಿದ್ದೇವೆ. ಈ ಮೂಲಕ ಎಲ್ಲ ಪತ್ರಕರ್ತರು ಸಕ್ರಿಯತೆ ಮತ್ತು ಕ್ರಿಯಾಶೀಲತೆಯಿಂದ ಇದ್ದಾರೆ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್‌.ಗುರುನಾಥ ಮಾತನಾಡಿ, ಸರ್ಕಾರಗಳು ಸಣ್ಣ ಹಾಗೂ ಪ್ರಾದೇಶಿಕ ಪತ್ರಿಕೆಗಳತ್ತ ಗಮನ ಹರಿಸಬೇಕು. ಗ್ರಾಮೀಣ ಮಟ್ಟದ ಪತ್ರಕರ್ತರಿಗೆ ಬಸ್‌ಬಸ್‌ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರಾಷ್ಟ್ರೀಯ ಪತ್ರಿಕಾ ದಿನಾಚರಣೆ ನಿಮಿತ್ತ ಹಿರಿಯ ಪತ್ರಕರ್ತ ಕಿಶನರಾವ್‌ ಹಾಗೂ ಛಾಯಾ ಕಿಶನ್‌ರಾವ್‌ ದಂಪತಿಯನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಸಂವಿಧಾನದ ಪೀಠಿಕೆ ಓದುವ ಮೂಲಕ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಜಿಲ್ಲಾ ಸಣ್ಣ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ವೀರಾರೆಡ್ಡಿ, ರಾಜ್ಯ ಸಮಿತಿ ಸದಸ್ಯ ಅರವಿಂದ ಕುಲಕರ್ಣಿ ಇದ್ದರು.

ರಾಯಚೂರು ರಿಪೋರ್ಟರ್ಸ್‌ ಗಿಲ್ಡ್‌ ಪ್ರಧಾನಕಾರ್ಯದರ್ಶಿ ವಿಜಯ ಜಾಗಟಗಲ್‌ ಸ್ವಾಗತಿಸಿದರು. ಪ್ರತಿಭಾ ಗೋನಾಳ, ಶರಣಪ್ಪ ಗೋನಾಳ ಪ್ರಾರ್ಥಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ವೆಂಕಟೇಶ ಹೂಗಾರ ನಿರೂಪಿಸಿದರು. ಪತ್ರಕರ್ತ ಸಿದ್ದಯ್ಯಸ್ವಾಮಿ ಹಿರೇಮಠ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.