ರಾಯಚೂರು: ಪ್ರಖರ ಬಿಸಿಲಿನಿಂದಾಗಿ ದಿನವಿಡೀ ಧಗೆ ಮೂಡಿಸಿದರೂ ಸಂಜೆಯ ವೇಳೆಗೆ ವಾತಾವರಣ ತಣ್ಣಗಾಗಿತ್ತು. ಪಡುವಣ ದಿಕ್ಕಿನಲ್ಲಿ ಸೂರ್ಯದೇವ ಬಾನಿನಿಂದ ಜಾರುತ್ತಲೇ ಇಲ್ಲಿ ಬಣ್ಣದ ಬೆಳಿಕಿನ ದೀಪಗಳು ಬೆಳಕು ಚೆಲ್ಲಿದವು. ಕತ್ತಲಾಗುತ್ತಲೇ ತಾರಾಲೋಕ ಸೃಷ್ಟಿಯಾಗಿ ‘ನಿತ್ಯೋತ್ಸವ’ ಕಲಾಪ್ರೇಮಿಗಳ ಕಣ್ಮನ ತಣಿಸಿತು.
ಅಮಿತಾಬ್, ರವಿಚಂದ್ರನ್, ಉಪೇಂದ್ರ, ಗಾಯಕಿ ರೆಮೊ ಕಲಾಲೋಕಕ್ಕೆ ಬಂದಿಳಿದರು. ಈ ಕ್ಷಣಕ್ಕಾಗಿ ತಾಸುಗಟ್ಟಲೆ ಕಾಯುತ್ತ ಕುಳಿತಿದ್ದ ಅಭಿಮಾನಿಗಳ ಹಾಗೂ ಕಲಾ ಪ್ರೇಮಿಗಳು ಕಲಾವಿದರನ್ನು ಕಣ್ಣೆದುರು ನೋಡುತ್ತಲೇ ಯುವ ಸಮೂಹ ಶಿಳ್ಳೆ, ಕೇಕೆ ಹಾಕುವ ಜತೆಗೆ ಘೋಷಣೆಗಳನ್ನು ಮೊಳಗಿಸಿತು. ಹಿರಿಯರು ಸಹ ಕರಾಡತಾಡನ ಮೂಲಕ ಕಲಾವಿದರನ್ನು ಅದ್ಧೂರಿಯಾಗಿ ಸ್ವಾಗತಿಸಿದರು.
ಹೌದು! ಇಲ್ಲಿಯ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ರಾಜ್ಯೋತ್ಸವದ ಪ್ರಯುಕ್ತ ಓಂಕಾರ್ ಫಿಲಂಸ್ ವತಿಯಿಂದ ಆಯೋಜಿಸಿದ್ದ ‘ನಿತ್ಯೋತ್ಸವ’ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯವಿದು.
ರಂಗ ಮಂದಿರದಲ್ಲಿ ಸೇರಿದವರೆಲ್ಲರೂ ಅಮಿತಾಬ್ ಬಚ್ಚನ್, ರವಿಚಂದ್ರನ್, ಉಪೇಂದ್ರ ಅವರ ಅಭಿಮಾನಿಗಳೇ ಆಗಿದ್ದರು. ಒರಿಜಿನಲ್ ಚಲನಚಿತ್ರ ತಾರೆಯರನ್ನು ಪ್ರತ್ಯಕ್ಷವಾಗಿ ನೋಡಲು ಸಾಧ್ಯವಾಗದಿದ್ದರೂ ತದ್ರುಪಿ ತಲಾವಿದರನ್ನು ಕಣ್ಣಾರೆ ಕಂಡು ಖುಷಿ ಪಟ್ಟರು. ಈ ಕಲಾವಿದರೂ ಸಹ ಮೂಲ ಚಲನಚಿತ್ರಗಳ ತಾರೆಯರ ಹಾಡು ಹಾಗೂ ನೃತ್ಯಗಳಿಗೆ ಹೆಜ್ಜೆ ಹಾಕಿ ಪ್ರೇಕ್ಷಕರ ಮನ ತಣಿಸಿದರು.
ಪ್ರೇಕ್ಷಕರಲ್ಲಿ ಹುಚ್ಚೆಬ್ಬಿಸಿದ ಶೆಹೆನ್‌ಶಾ: ಶೆಹೆನ್‌ಶಾ ಹಿಂದಿ ಚಲನಚಿತ್ರದಲ್ಲಿ ಅಮಿತಾ ಬಚ್ಚನ್ ಧರಿಸಿದ ಪೋಷಾಕದ ಮಾದರಿಯಲ್ಲೇ ವೇಷಭೂಷಣ ಮಾಡಿಕೊಂಡು ಬಂದಿದ್ದ ಮುಂಬೈನ್ ಕಲಾವಿದ ಗುಲ್ಶನ್ ಅವರು ಪ್ರೇಕ್ಷಕರ ಮಧ್ಯದಿಂದ ರಂಗ ಮಂದಿರ ಪ್ರವೇಶಿಸಿದರು.
‘ಅಂಧೇರಿ ರಾತೋಮೆ... ಸುನ್ಸಾನ್ ರಾಹೋಪರ್...’ ಹಾಡನ್ನು ಹಾಡುತ್ತ ವೇದಿಕೆ ಮುಂಭಾಗಕ್ಕೆ ಬಂದು ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಅವರಿಗೆ ಹಸ್ತಲಾಘವ ನೀಡಿ ವೇದಿಕೆ ಮೇಲೆ ಬಂದರು. ನಂತರ ಅಮಿತಾ ಬಚ್ಚನ್ ಅವರು ಸುಪ್ರಸಿದ್ಧ ಚಲನಚಿತ್ರಗಳಲ್ಲಿನ ಡೈಲಾಗ್‌ಗಳನ್ನು ಹೇಳಿ ಪ್ರೇಕ್ಷಕರ ಮನ ರಂಜಿಸಿದರು.
ಜ್ಯೂ.ರವಿಚಂದ್ರನ್ ಗದಗಿನ ವಾಸುದೇವ ಅವರು ಕನ್ನಡ ಧ್ವಜ ಹಿಡಿದು ವೇದಿಕೆಗೆ ಆಗಮಿಸಿ ಕಲಾ ಪ್ರದರ್ಶನ ನೀಡಿದರು. ಜ್ಯೂನಿಯರ್ ಉಪೇಂದ್ರ ಬಾಗಲಕೋಟೆಯ ಆರ್.ಡಿ.ಬಾಬು ಅವರು ಸಿಗಾರ ಸೇದಿ ಹೊಗೆ ಎಬ್ಬಿಸುತ್ತ ಹಿಂಬಾಲಿನಿಂದ ಪ್ರೇಕ್ಷಕರ ಮಧ್ಯೆ ಬಂದು ಗಮನ ಸೆಳೆದರು. ವಿಭಿನ್ನ ಪೋಷಾಕುಗಳನ್ನು ಧರಿಸಿದ್ದ ಅವರು ಚಲನಚಿತ್ರಗಳ ಡೈಲಾಗ್ ಹೇಳುತ್ತ, ಕ್ಷಣಾರ್ಧದಲ್ಲಿ ವೇಷ ಬದಲಿಸಿ ಇನ್ನೊಂದು ಡೈಲಾಗ್ ನುಡಿಯುತ್ತಿದ್ದದ್ದು ಜನರ ಮೆಚ್ಚುಗೆಗೆ ಪಾತ್ರವಾಯಿತು. ಸಹ ಕಲಾವಿದೆ ಚೈತ್ರಾ ಬಾಗಲಕೋಟೆ ನೃತ್ಯದ ಮೂಲಕ ಸಾಥ್ ನೀಡಿದ್ದು, ಆಕರ್ಷಣೀಯವಾಗಿತ್ತು.
ಕುಡುಕನ ಪಾತ್ರದಲ್ಲಿ ಹಾಸ್ಯ ಚಟಾಕಿ
ಹಾಸ್ಯ ಕಲಾವಿದ ರಾಜು ತಾಳಿಕೋಟೆ ಅವರು ಕುಡುಕನ ಪಾತ್ರದಲ್ಲಿ ಹಾಸ್ಯ ಚಟಾಕಿ ಹಾರಿಸಿದರೆ, ಗಾಯಕಿ ರೆಮೊ ಹಲವು ಹಾಡುಗಳನ್ನು ಹಾಡುವ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡಿದರು. ರಾಯಚೂರಿನ ಗಾಯಕ ಮಹಾಲಕ್ಷ್ಮಿ ಅವರು ರೆಮೊ ಅವರೊಂದಿಗೆ ಒಂದು ಹಾಡು ಹಾಡಿದರು.
ಕಲಾವಿದರ ಅಬ್ಬರ, ಹಾಡು ಹಾಗೂ ನೃತ್ಯದಿಂದ ಉತ್ಸುಕರಾದ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ಮಕ್ಕಳು ವೇದಿಕೆಯಲ್ಲಿ ನುಗ್ಗಿ ಅವರೊಂದಿಗೆ ಕುಣಿದು ಸಂಭ್ರಮಿಸಿದ್ದು ವಿಶೇಷವಾಗಿತ್ತು.
ಹಾಸ್ಯ ಗಾಯನಕ್ಕೆ ನೀತಾ ಮಹೀಂದ್ರಗಿ ಹೆಜ್ಜೆ ಹಾಕಿ ಪ್ರೇಕ್ಷಕರನ್ನು ರಂಜಿಸಿದರು. ‘ನೀ ಬರೆದ ಕಾದಂಬರಿ’ ಕಿರು ನಾಟಕದಲ್ಲಿ ಚಲನಚಿತ್ರ ನಿರ್ಮಾಪಕ ಸಿದ್ಧೇಶ ವಿರಕ್ತಮಠ ಅವರೊಂದಿಗೆ ಪವಿತ್ರಾ ಮಹೀಂದ್ರಗಿ ನೃತ್ಯ ಮಾಡಿದರು.
ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಕಾರ್ಯಕ್ರಮ ಉದ್ಘಾಟಿಸಿದರು. ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ನಿರ್ಮಾಪಕ ಸಿದ್ಧೇಶ ವಿರಕ್ತಮಠ, ಸಾಯಿಕಿರಣ ಆದೋನಿ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಶೈಲೇಶ್ ಅಮರಖೇಡ್, ಜಿ.ಮುರುಘೇಂದ್ರ, ನರಸಪ್ಪ ದೇವಸೂಗೂರು, ಮರಿಲಿಂಗಪ್ಪ ಮಡಿವಾಳ, ಶಂಕರ ಬೇವಿನಬೆಂಚಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.