ADVERTISEMENT

ಮುದಗಲ್: ಸೌಲಭ್ಯಗಳ ನಿರೀಕ್ಷೆಯಲ್ಲಿ ಹಳೇ ಪಿಕಳಿಹಾಳ

ಕಲ್ಲು ಬಂಡೆ ಮೇಲಿನ ಚಿತ್ರ, ಕುರುಹುಗಳು, ವಸ್ತುಗಳಿಗಿಲ್ಲ ರಕ್ಷಣೆ; ಮರೆಯಾಗುವ ಆತಂಕ

ಡಾ.ಶರಣಪ್ಪ ಆನೆಹೊಸೂರು
Published 29 ಸೆಪ್ಟೆಂಬರ್ 2024, 6:21 IST
Last Updated 29 ಸೆಪ್ಟೆಂಬರ್ 2024, 6:21 IST
ಮುದಗಲ್ ಸಮೀಪದ ಪಿಕಳಿಹಾಳ ಗ್ರಾಮದ ಹೊರವಲಯದ ನವಶಿಲಾಯುಗದ ಅವಶೇಷಗಳು ಇರುವ ಸ್ಥಳಕ್ಕೆ ಹೋಗವ ರಸ್ತೆಯ ದುಸ್ಥಿತಿ
ಮುದಗಲ್ ಸಮೀಪದ ಪಿಕಳಿಹಾಳ ಗ್ರಾಮದ ಹೊರವಲಯದ ನವಶಿಲಾಯುಗದ ಅವಶೇಷಗಳು ಇರುವ ಸ್ಥಳಕ್ಕೆ ಹೋಗವ ರಸ್ತೆಯ ದುಸ್ಥಿತಿ   

ಮುದಗಲ್: ಸಮೀಪದ ಹಳೇ ಪಿಕಳಿಹಾಳ ಶಿಲಾಯುಗದ ಇತಿಹಾಸ ಸಾರುವ ತಾಣ. ಪ್ರವಾಸಿ ತಾಣವಾಗಬಲ್ಲ ಸಾಮರ್ಥ್ಯವಿರುವ ಈ ತಾಣವು ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ.

ಇದರ ಸಂರಕ್ಷಣೆಗೆ ಮುಂದಾಗಬೇಕಿದ್ದ ‍ಪ್ರಾಚ್ಯ ವಸ್ತು ಇಲಾಖೆಯೂ ಇದರತ್ತ ನಿರ್ಲಕ್ಷ್ಯ ತೋರುತ್ತಿದೆ. ಈ ಸ್ಥಳಕ್ಕೆ ಹೋಗಲು ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲ. ರಸ್ತೆ ಸೌಲಭ್ಯ ಕಲ್ಪಿಸಬೇಕಾದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ನರೇಗಾ ಯೋಜನೆಯಡಿ ಏನೇನೋ ಕೆಲಸ ಮಾಡುತ್ತಾರೆ. ಅದೇ ಹಣದ ಬಳಸಿಕೊಂಡು ಈ ಪ್ರದೇಶ ಅಭಿವೃದ್ಧಿಪಡಿಸಿದರೆ ಪ್ರವಾಸಿ ತಾಣವಾಗಬಲ್ಲದು ಎನ್ನುತ್ತಾರೆ ಶರಣಪ್ಪ ಕಟ್ಟಿಮನಿ.

ಭಾರತದ ಪ್ರಾಚೀನ ಇತಿಹಾಸ ಸಂಶೋಧನೆಯ ಕ್ಷೇತ್ರಗಳಲ್ಲಿ ಒಂದಾದ ಪಿಕಳಿಹಾಳನ್ನು ಡಾ.ಅಲ್ಟಿನ್ ಅವರು ಸಂಶೋಧಿಸಿ, ಇಲ್ಲಿ ನವಶಿಲಾಯುಗದ ಅವಶೇಷಗಳಿವೆ ಎಂದು ಗುರುತಿಸಿದ್ದರು. ಹಳೇ ಪಿಕಳಿಹಾಳ ಎಂದು ಕರೆಯಲಾಗುವ ಈ ‍ಪ್ರದೇಶವು ಪ್ರಾಚೀನ ಯುಗದ ಪಳೆಯುಳಿಕೆ ಸ್ಥಳವಾಗಿದೆ. ಕ್ರಿ.ಪೂ.1,300ದಿಂದ 800 ವರ್ಷಗಳ ನಡುವಣ ಕಾಲಘಟ್ಟದಲ್ಲಿ ಇಲ್ಲಿ ಮಾನವರು ಬದುಕಿ ಬಾಳಿದ್ದರು ಎಂಬುದನ್ನು ಇಲ್ಲಿನ ವಸ್ತುಗಳು ಪುಷ್ಟೀಕರಿಸುತ್ತವೆ.

ADVERTISEMENT

ನಿಜಾಮ ಆಡಳಿತ ಅವಧಿಯಲ್ಲಿ ಈ ಸ್ಥಳದಲ್ಲಿ ವಿದೇಶಿ ಸಂಶೋಧಕರು ಬಂದು ಉತ್ಖನನ ನಡೆಸಿದ್ದರು. ನಂತರ ಉತ್ಖನನ ಕಾರ್ಯ ನಡೆದಿಲ್ಲ. ಈ ಸ್ಥಳದ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತಾಳಿದ್ದು, ಇಲ್ಲಿನ ಚಿತ್ರ, ಕುರುಹುಗಳು, ವಸ್ತುಗಳಿಗೆ ರಕ್ಷಣೆ ಇಲ್ಲದೇ ಅವು ಕಣ್ಮರೆಯಾಗುವ ಅಪಾಯವಿದೆ ಎಂಬುದು ಸ್ಥಳೀಯರ ಕಳವಳ.

ಇಲ್ಲಿ ಏನೇನಿದೆ?

ಇಲ್ಲಿ ಕಲ್ಲು ಬಂಡೆಯ ಮೇಲೆ ಮನುಷ್ಯ ಜಿಂಕೆ ಕೊಡಲಿ ಸೇರಿ ಇನ್ನಿತರ ಚಿತ್ರಗಳಿವೆ. ನೆಲದಲ್ಲಿ ಮಣ್ಣಿನ ಮಡಕೆ ಕಲ್ಲಿನ ಬಾಚಿ ಉಳಿ ಸುತ್ತಿಗೆ ಸೇರಿದಂತೆ ಇನ್ನಿತರ ಶಿಲಾಯುಗದ ವಸ್ತುಗಳು ದೊರೆತಿವೆ.

‘ಈ ಸ್ಥಳದಲ್ಲಿ ನಿಧಿ ಹುದುಗಿದೆ ಎಂಬ ಕಲ್ಪನೆಯಿಂದ ನಿಧಿಗಳ್ಳರು ರಾತ್ರಿ ನಿಧಿಶೋಧಕ್ಕೆ ಪ್ರಯತ್ನಿಸುತ್ತಲೇ ಇರುತ್ತಾರೆ’ ಎಂಬುದು ಗ್ರಾಮಸ್ಥರ ದೂರು.

ನಿಧಿಗಳ್ಳರು ಮಣ್ಣು ತೆಗೆಯುವಾಗ ಮಣ್ಣಲ್ಲಿದ್ದ ಮಾನವನ ಎಲುಬಿನ ಚೂರುಗಳು ಜನರು ಬಳಸುತ್ತಿದ್ದ ಕಲ್ಲು ಡೋಣೆ ಒರಳು ಶಿಲಾ ಆಯುಧ ಗುಂಡು ಮಡಕೆ ಚೂರುಗಳನ್ನು ಹೊರಗೆ ಕಿತ್ತೆಸೆದಿದ್ದಾರೆ. ಚಿರತೆ ಬೇಟೆಯಾಡುವ ಕಲ್ಲಿನ ಬೋರ್ (ಬಲೆ) ಇಲ್ಲಿ ಕಂಡು ಬರುತ್ತಿದೆ.

ಮುದಗಲ್ ಸಮೀಪದ ಪಿಕಳಿಹಾಳ ಗ್ರಾಮದ ಹೊರ ವಲಯದಲ್ಲಿರುವ ನವಶಿಲಾಯುಗದ ಅವಶೇಷಗಳ ಚಿತ್ರ
ಮುದಗಲ್ ಸಮೀಪದ ಪಿಕಳಿಹಾಳ ಗ್ರಾಮದ ಹೊರ ವಲಯದಲ್ಲಿರುವ ನವಶಿಲಾಯುಗದ ಅವಶೇಷಗಳ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.