ADVERTISEMENT

2 ಸಾವಿರ ಪವರ್‌ಮನ್‌ ನೇಮಕಕ್ಕೆ 15 ದಿನಗಳಲ್ಲಿ ಅಧಿಸೂಚನೆ: ಕೆ.ಜೆ. ಜಾರ್ಜ್‌

ಇಂಧನ ಸಚಿವ ಕೆ.ಜೆ. ಜಾರ್ಜ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 16:10 IST
Last Updated 10 ಜುಲೈ 2024, 16:10 IST
ಸಚಿವ ಕೆ.ಜೆ ಜಾರ್ಜ್
ಸಚಿವ ಕೆ.ಜೆ ಜಾರ್ಜ್   

ರಾಯಚೂರು: ‘ಇಂಧನ ಇಲಾಖೆಯಿಂದ 2 ಸಾವಿರ ಪವರ್‌ಮೆನ್‌ಗಳ (ಲೈನ್‌ಮನ್‌) ನೇಮಕ ಮಾಡಲು 15 ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು’ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಹೇಳಿದರು. 

‘ಪವರ್‌ಮನ್‌ಗಳ ಹುದ್ದೆಗೆ ರಾಜ್ಯದಾದ್ಯಂತ ಒಂದೇ ದಿನ ನೇಮಕ ಪ್ರಕ್ರಿಯೆ ನಡೆಯಲಿದ್ದು, ಪಾರದರ್ಶಕತೆಗೆ ಒತ್ತು ನೀಡಲಾಗುವುದು’ ಎಂದು ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು.

‘ವೈಟಿಪಿಎಸ್ ಹುದ್ದೆಗಳನ್ನು ಭರ್ತಿ ಮಾಡುವಾಗ ಸ್ಥಳೀಯರಿಗೆ ಆದ್ಯತೆ ನೀಡಬೇಕು. 371(ಜೆ) ಅನ್ವಯ ಮೀಸಲು ನೀಡಬೇಕು. ಆದರೆ, ನುರಿತ ಕೆಲಸಗಾರರು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಸ್ಥಳೀಯರ ನೇಮಕ ಆಗುತ್ತಿಲ್ಲ ಎಂಬ ಮಾತು ಕೇಳಿಬಂದಿದೆ. ಆದ್ದರಿಂದ ಎಷ್ಟು ಜನ ಬೇಕು ಎಂದು ನಿರ್ಧರಿಸಿ, ಅವರಿಗೆ ಕೆಪಿಸಿಎಲ್‌ನಿಂದ ತರಬೇತಿ ಕೊಡಿಸಲು ಅಗತ್ಯ ಕ್ರಮ ವಹಿಸಲಾಗುವುದು‌’ ಎಂದರು.

ADVERTISEMENT

‘ರಾಜ್ಯದ ಯುವ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಜತೆಗೆ, ಆ ಉದ್ಯೋಗಕ್ಕೆ ಪೂರಕವಾದ ಕೌಶಲ ತರಬೇತಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದ್ಯತೆ ನೀಡುತ್ತಿದ್ದಾರೆ’ ಎಂದು ತಿಳಿಸಿದರು.

ದಾಖಲೆ ಉತ್ಪಾದನೆ:

‘ಈ ಬಾರಿ ಆರ್‌ಟಿಪಿಎಸ್, ವೈಟಿಪಿಎಸ್, ಬಿಟಿಪಿಎಸ್ ಉಷ್ಣ ಸ್ಥಾವರಗಳಲ್ಲಿ ದಾಖಲೆ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆ ಮಾಡಿದ್ದರಿಂದ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿದೆ. ಅಧಿಕಾರಿಗಳ ಶ್ರಮ ಪ್ರಶಂಸನೀಯ. ಅವರೆಲ್ಲನ್ನೂ ಅಭಿನಂದಿಸಲೆಂದೇ ರಾಯಚೂರಿಗೆ ಬಂದಿದ್ದೇನೆ’ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ತಿಳಿಸಿದರು.

‘ಕಳೆದ ಜನವರಿಯಿಂದ ಮೇ ಅಂತ್ಯದವರೆಗೆ ಪ್ರತಿನಿತ್ಯ ಸರಾಸರಿ 2000 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಏಪ್ರಿಲ್‌ನಲ್ಲಿ 2,400 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಿದ್ದು, ದಾಖಲೆಯಾಗಿದೆ’ ಎಂದು ಹೇಳಿದರು.

‘ಆರ್‌ಟಿಪಿಎಸ್‌ ವಿದ್ಯುತ್‌ ಘಟಕಗಳಿಂದ ನಿಗದಿತ ಗುರಿ ಮೀರಿ ಹೆಚ್ಚಿನ ವಿದ್ಯುತ್‌ ಉತ್ಪಾದನೆ ಆಗಿದೆ. ದಿನಕ್ಕೆ 210 ಮೆಗಾವ್ಯಾಟ್‌ ಸಾಮರ್ಥ್ಯದ 3ನೇ ವಿದ್ಯುತ್‌ ಘಟಕದಲ್ಲಿ ಏಪ್ರಿಲ್‌ 4ರಂದು 216 ಮೆಗಾವ್ಯಾಟ್‌ ಉತ್ಪಾದನೆ ಮಾಡಲಾಗಿದೆ. ಆ ಮೂಲಕ ಇತಿಹಾಸ ಬರೆಯಲಾಗಿದೆ. ತಾಂತ್ರಿಕ ಸಮಸ್ಯೆಗಳ ನಡುವೆಯೂ ಆರ್‌ಟಿಪಿಎಸ್‌ನ 7 ವಿದ್ಯುತ್‌ ಘಟಕಗಳು ಸೇರಿ ಶೇಕಡ 85ರಷ್ಟು ವಿದ್ಯುತ್‌ ಉತ್ಪಾದಿಸಿವೆ’ ಎಂದು ವಿವರಿಸಿದರು.

ಯರಮರಸ್‌ ಶಾಖೋತ್ಪನ್ನ ವಿದ್ಯುತ್‌ ಕೇಂದ್ರ (ವೈಟಿಪಿಎಸ್‌) 2023–24 ಹಣಕಾಸು ವರ್ಷದಲ್ಲಿ 6229.250 ಮಿಲಿಯನ್‌ ಯೂನಿಟ್‌ ಉತ್ಪಾದಿಸಿದೆ. ಇದು ಈವರೆಗಿನ ಗರಿಷ್ಠ ಉತ್ಪಾದನೆ. ಕೇಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರದ 6000 ಮಿಲಿಯನ್‌ ಯೂನಿಟ್‌ ಗುರಿಯನ್ನು ವೈಟಿಪಿಎಸ್‌ ಮೀರಿದೆ. ಇನ್ನು ಬಳ್ಳಾರಿ ಉಷ್ಣ ವಿದ್ಯುತ್‌ ಸ್ಥಾವರ 8208.476 ಮಿಲಿಯನ್‌ ಯೂನಿಟ್‌ ವಿದ್ಯುತ್‌ ಉತ್ಪಾದಿಸಿದೆ. ಸ್ಥಾವರ ಕಾರ್ಯಾರಂಭ ಮಾಡಿದ ನಂತರ ಸಾಧಿಸಿದ ಅತ್ಯಧಿಕ ಉತ್ಪಾದನೆಯ ದಾಖಲೆ ಇದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.