ADVERTISEMENT

ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ

ಜಿಲ್ಲಾಮಟ್ಟದ ಮಾದಕವ್ಯಸನ ನಿಯಂತ್ರಣ ಸಭೆಯಲ್ಲಿ ಡಿಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2022, 13:35 IST
Last Updated 8 ಡಿಸೆಂಬರ್ 2022, 13:35 IST
ರಾಯಚೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ್‌ ನಾಯಕ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಮಾದಕವ್ಯಸನ ನಿಯಂತ್ರಣ ಸಭೆ ಗುರುವಾರ ನಡೆಯಿತು.
ರಾಯಚೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ್‌ ನಾಯಕ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಮಾದಕವ್ಯಸನ ನಿಯಂತ್ರಣ ಸಭೆ ಗುರುವಾರ ನಡೆಯಿತು.   

ರಾಯಚೂರು: ಜಿಲ್ಲೆಯಲ್ಲಿ ಗುಪ್ತವಾಗಿ ಮಾದಕ ವಸ್ತುಗಳ ಸಾಗಣೆ ಮತ್ತು ಮಾರಾಟ ನಡೆಯುವ ಸಾಧ್ಯತೆ ಇರುವುದರಿಂದ, ಇದನ್ನು ತಡೆಯುವುದಕ್ಕಾಗಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ್‌ ನಾಯಕ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಮಾದಕವ್ಯಸನ ನಿಯಂತ್ರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್‌ ಬಿ. ಮಾತನಾಡಿ, ಅರಣ್ಯ ಇಲಾಖೆಗಳ ವ್ಯಾಪ್ತಿಯಲ್ಲಿ ಗಾಂಜಾ ಬೆಳೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಗುಡ್ಡಗಾಡುಗಳಲ್ಲಿರುವ ಪಟ್ಟಾ ಜಮೀನು, ಬಗರಹುಕಂ ಜಮೀನುಗಳತ್ತ ನಿಗಾ ವಹಿಸಬೇಕು. ಅರಣ್ಯ ಇಲಾಖೆಯ ಸಿಬ್ಬಂದಿ ಈ ಬಗ್ಗೆ ಮಾಹಿತಿ ಸಂಗ್ರಹಿಸಬೇಕು ಎಂದು ತಿಳಿಸಿದರು.

ADVERTISEMENT

ಇದಲ್ಲದೆ ಬೆಳೆ ಸಮೀಕ್ಷೆ ನಡೆಸುವ ಕೃಷಿ ಇಲಾಖೆಯ ಅಧಿಕಾರಿಗಳು ಕೂಡಾ ಈ ಬಗ್ಗೆ ನಿಗಾ ವಹಿಸಬೇಕು. ಗಾಂಜಾ ಬೆಳೆಯುತ್ತಿರುವವರ ಬಗ್ಗೆ ಸುಳಿವು ಸಿಕ್ಕರೆ, ಕೂಡಲೇ ತಿಳಿಸಿ ಎಂದರು.

ಶಾಲಾ ಕಾಲೇಜುಗಳ ಆವರಣದಲ್ಲಿ ಮಾದಕ ವ್ಯಸನ ನಿಯಂತ್ರಣಕ್ಕೆ ಸಂಬಂಧಿಸಿದ ಫಲಕಗಳನ್ನು ಆಳವಡಿಸುವುದಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿಗಳು ಸೂಚನೆ ನೀಡಬೇಕು. ಔಷಧಿ ಅಂಗಡಿಗಳ ಮೂಲಕ ಮಾದಕ ಔಷಧಿ ಮಾರಾಟ ನಿಯಂತ್ರಿಸಬೇಕು. ಕಿರಾಣಿ, ಪಾನ್‌ಶಾಪ್‌ಗಳಲ್ಲಿ ಮಾದಕ ಚಾಕೋಲೆಟ್‌ ಮಾರಾಟದ ಬಗ್ಗೆಯೂ ನಿಗಾ ವಹಿಸಬೇಕು. ದೇವದುರ್ಗ, ಸಿಂಧನೂರು ಹಾಗೂ ಲಿಂಗಸುಗೂರುಗಳಲ್ಲಿ ಗಾಂಜಾ ಬೆಳೆಯುತ್ತಿರುವ ಪ್ರಕರಣಗಳು ಕಂಡುಬಂದಿವೆ ಎಂದು ತಿಳಿಸಿದರು.

ಹತ್ತಿ, ಮೆಣಸಿನಕಾಯಿ ಬೆಳೆಗಳಲ್ಲಿ ಗಾಂಜಾ ಗಿಡಗಳನ್ನು ಬೆಳೆಸುತ್ತಿರುವ ಬಗ್ಗೆ ದೂರುಗಳಿವೆ. ಈ ಬಗ್ಗೆ ವಿವಿಧ ಇಲಾಖೆಗಳು ನಿಗಾ ವಹಿಸಬೇಕು ಎಂದರು.

ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.