ADVERTISEMENT

ಮನರಂಜನೆಯೊಂದಿಗೆ ಇಂಧನ ಮಿತವ್ಯಯ ಪಾಠ!

ಬಸವಶ್ರೀ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 11:10 IST
Last Updated 13 ಫೆಬ್ರುವರಿ 2020, 11:10 IST
ರಾಯಚೂರಿನ ಬಸವಶ್ರೀ ಪ್ರೌಢಶಾಲೆಯಲ್ಲಿ ಪಿಸಿಆರ್‌ಎ ಮತ್ತು ಐಒಸಿಎಲ್‌ನಿಂದ ಗುರುವಾರ ಏರ್ಪಡಿಸಿದ್ದ ಪ್ರತಿಭಾ ಪ್ರದರ್ಶನ ಹಾಗೂ ಇಂಧನ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮಿಜೋರಾಂನ ಚಾರ್ವಾ ನೃತ್ಯ ಪ್ರದರ್ಶಿಸಿದರು
ರಾಯಚೂರಿನ ಬಸವಶ್ರೀ ಪ್ರೌಢಶಾಲೆಯಲ್ಲಿ ಪಿಸಿಆರ್‌ಎ ಮತ್ತು ಐಒಸಿಎಲ್‌ನಿಂದ ಗುರುವಾರ ಏರ್ಪಡಿಸಿದ್ದ ಪ್ರತಿಭಾ ಪ್ರದರ್ಶನ ಹಾಗೂ ಇಂಧನ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮಿಜೋರಾಂನ ಚಾರ್ವಾ ನೃತ್ಯ ಪ್ರದರ್ಶಿಸಿದರು   

ರಾಯಚೂರು: ನಗರದ ಬಸವಶ್ರೀ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ನೃತ್ಯ, ಹಾಡು ಹಾಗೂ ಏಕಾಭಿನಯ ಪ್ರತಿಭಾ ಪ್ರದರ್ಶನ ಮಾಡಿ ಗಮನ ಸೆಳೆದರು. ಸಾಂಸ್ಕೃತಿಕ ಮನರಂಜನೆ ಮಧ್ಯೆದಲ್ಲೇ ಪೆಟ್ರೊಲಿಯಂ ಇಂಧನದ ಮಿತಬಳಕೆ, ಪರ್ಯಾಯ ಇಂಧನ ಮೂಲಗಳು ಹಾಗೂ ಅತೀ ಇಂಧನ ಬಳಕೆಯಿಂದಾಗುವ ದುಷ್ಪರಿಣಾಮದ ಪಾಠವನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಲಾಯಿತು.

ಕೇಂದ್ರ ಪೆಟ್ರೊಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ನೇತೃತ್ವದ ‘ಪೆಟ್ರೊಲಿಯಂ ಕನ್ಸರ್ವೇಷನ್‌ ರಿಸರ್ಚ್‌ ಅಸೋಸಿಯೇಷನ್‌ (ಪಿಸಿಆರ್‌ಎ) ಹಾಗೂ ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಲಿಮಿಟೆಡ್‌ (ಐಒಸಿಎಲ್‌) ವತಿಯಿಂದ ‘ಸಂರಕ್ಷಣ ಕ್ಷಮತಾ ಮಹೋತ್ಸವ–ಸಕ್ಷಮ್’ ಯೋಜನೆಯಿಂದ ‘ಇಂಧನ ಉಳಿತಾಯ ಮತ್ತು ಪರ್ಯಾಯ ಇಂಧನ ಬಳಕೆ’ ಕುರಿತು ಗುರುವಾರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿ ಅಶೋಕಕುಮಾರ್‌ ಪಾಟೀಲ ಅವರು, ಟಿವಿ ಪರಧೆಯಲ್ಲಿ ಪ್ರಾತ್ಯಕ್ಷಿಕೆ (ಪವರ್‌ ಪ್ರಜೆಂಟೇಷನ್‌) ಮೂಲಕ ಇಂಧನ ಮಿತವ್ಯಯ, ಪರ್ಯಾಯ ಇಂಧನ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿ ವಿಷಯ ಮನವರಿಕೆ ಮಾಡಿದರು.

ADVERTISEMENT

ಮಿತವ್ಯಯ ಇಂಧನ ಬಳಕೆಗೆ ಇನ್ನು ಮುಂದೆ ಜಾಗೃತಿ ವಹಿಸಲಾಗುವುದು ಹಾಗೂ ಕುಟುಂಬದಲ್ಲಿರುವ ಹಿರಿಯರಿಗೂ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರೆಲ್ಲರೂ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಆನಂತರ, ಪ್ರಾತ್ಯಕ್ಷಿಕೆಯಲ್ಲಿ ವಿಶ್ಲೇಷಣೆ ಮಾಡಿದ ವಿಷಯಾಧಾರಿತವಾಗಿ ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಲಾಯಿತು.

ಪಿಸಿಆರ್‌ಎ ವಿಸ್ತರಣೆ ಏನು? ಸಕ್ಷಮ್‌ ಎಂದರೆ ಏನು? ಕೇಂದ್ರ ಪೆಟ್ರೊಲಿಯಂ ಸಚಿವರು ಯಾರು? ಸಿಗ್ನಲ್‌ನಲ್ಲಿ ಕನಿಷ್ಠ ಎಷ್ಟು ಸೆಕೆಂಡುಗಿಂತಲೂ ಹೆಚ್ಚು ಕಾಯುವಂತಿದ್ದರೆ ವಾಹನ ಎಂಜಿನ್‌ ಸ್ಥಗಿತ ಮಾಡಬೇಕು? ಪರ್ಯಾಯ ಇಂಧನ ಮೂಲಗಳು ಯಾವವವು? ಸೇರಿದಂತೆ ಹತ್ತಾರು ಪ್ರಶ್ನೆಗಳನ್ನು ಸಂಪನ್ಮೂಲ ವ್ಯಕ್ತಿ ಕೇಳಿದರು.

ಉತ್ಸಾಹದಿಂದ ಪ್ರಶ್ನೆಗಳನ್ನು ಆಲಿಸಿದ ವಿದ್ಯಾರ್ಥಿಗಳು ಉತ್ತರಿಸುವುದಕ್ಕೆ ಕೈ ಎತ್ತಿ ಹಿಡಿದಿದ್ದರು. ವಿದ್ಯಾರ್ಥಿಗಳಾದ ಜಗದೀಶ್ವರರೆಡ್ಡಿ, ಅನುಷಾ, ಮಲ್ಲಿಕಾರ್ಜುನ, ಅಫ್ಜಲ್‌, ಅಜೇಯ, ಭವಾನಿ, ಭುವನೇಶ್ವರಿ, ವಿದ್ಯಾಶ್ರೀ ಅವರು ಸರಿಯಾಗಿ ಉತ್ತರಿಸಿ ತಲಾ ಒಂದೊಂದು ಬಹುಮಾನ ಪಡೆದರು. ಬೋಧಕ ಸಮೂಹಕ್ಕೆ ಕೇಳಿದ ಕೊನೆಯ ಪ್ರಶ್ನೆಗೆ ಶಿಕ್ಷಕಿ ಸರೋಜಾ ಅವರು ಉತ್ತರಿಸಿ ಬಹುಮಾನ ಪಡೆದರು.

ಅಧ್ಯಕ್ಷತೆ ವಹಿಸಿದ್ದ ಸುಗುಣ ಶಿಕ್ಷಣ ಸಂಸ್ಥೆಯ ಬವಶ್ರೀ ಪ್ರೌಢಶಾಲೆಯ ಸಂಸ್ಥಾಪಕಿ ಲಲಿತಾ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಆನಂತರ ಮಾತನಾಡಿ, ‘ಪರಿಸರ ಪ್ರದೂಷಣೆ ಹಾಗೂ ಇಂಧನಗಳ ಅತಿಯಾದ ಬಳಕೆಯಿಂದಾಗುವ ಮಾಹಿತಿಯನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಮನವರಿಕೆ ಮಾಡುವುದಕ್ಕೆ ಈ ಕಾರ್ಯಕ್ರಮದಿಂದ ಅವಕಾಶವಾಯಿತು. ಪಿಸಿಆರ್‌ಎ ಕಾರ್ಯಕ್ರಮದಿಂದಾಗಿ ವಿದ್ಯಾರ್ಥಿಗಳು ಪ್ರತಿಭೆ ಪ್ರದರ್ಶಿಸಲು ವೇದಿಕೆ ನಿರ್ಮಾಣವಾದಂತಾಯಿತು. ಇಂತಹ ಕಾರ್ಯಕ್ರಮಗಳನ್ನು ಶಿಕ್ಷಣ ಸಂಸ್ಥೆಯಿಂದ ಸದಾ ಪ್ರೋತ್ಸಾಹಿಸುತ್ತಾ ಬಂದಿದ್ದೇವೆ’ ಎಂದರು.

ಶಿಕ್ಷಕಿ ವಿಜಯಲಕ್ಷ್ಮೀ ಅವರು ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.