ರಾಯಚೂರು: ಗೃಹಿಣಿಯರು, ಹೋಟೆಲ್, ಖಾನಾವಳಿ ಹಾಗೂ ರೆಸ್ಟೋರಂಟ್‌ಗಳ ಮಾಲೀಕರು ಈರುಳ್ಳಿ ಹಾಗೂ ಬೆಳ್ಳುಳ್ಳಿಯ ಮೇಲೆಯೇ ನಿಗಾ ಇಟ್ಟಿದ್ದಾರೆ. ಬರುವ ವಾರ ಕಡಿಮೆಯಾದರೆ ಒಂದಿಷ್ಟು ಹೆಚ್ಚಿಗೆ ಖರೀದಿ ಮಾಡುವ ತಯಾರಿಯಲ್ಲಿದ್ದ ಅನೇಕರಿಗೆ ನಿರಾಶೆಯಾಗಿದೆ. ಕಾರಣ ಈರುಳ್ಳಿ ಹಾಗೂ ಬೆಳ್ಳುಳ್ಳಿ ಬೆಲೆ ಇಳಿದಿಲ್ಲ. ಹಬ್ಬದ ಸಂದರ್ಭದಲ್ಲೇ ಬೆಲೆ ಹೆಚ್ಚಿಸಿಕೊಂಡು ಕಣ್ಣೀರು ಹಾಕಿಸಿದರೆ ಕಷ್ಟ ಎನ್ನುವ ಆತಂಕದಲ್ಲಿ ಗ್ರಾಹಕರು ಇದ್ದಾರೆ.
ಈರುಳ್ಳಿ, ಆಲೂಗಡ್ಡೆ, ನುಗ್ಗೆಕಾಯಿ ಹಾಗೂ ಕರಿಬೇವು ಬೆಲೆ ಸ್ಥಿರವಾಗಿದೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ಕಡಿಮೆ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿದೆ. ಆವಕ ಕಡಿಮೆ ಇರುವ ಕಾರಣ ಈರುಳ್ಳಿ ಬೆಲೆ ಸ್ಥಿರವಾಗಿದೆ. ಹೊರ ದೇಶಗಳಿಂದ ಆಮದು ಆದರೆ ಮಾತ್ರ ಈರುಳ್ಳಿ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ. ಇಲ್ಲದೇ ಹೋದರೆ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ತುಪ್ಪದ ಹಿರೇಕಾಯಿ ಮೊದಲ ಬಾರಿಗೆ ಪ್ರತಿ ಕ್ವಿಂಟಲ್‌ಗೆ ₹ 2 ಸಾವಿರ ಹೆಚ್ಚಾಗಿದೆ. ಮೆಣಸಿನಕಾಯಿ, ಎಲೆಕೋಸು, ಹೂಕೋಸು, ಬೀಟ್‌ರೂಟ್, ಬೀನ್ಸ್, ಬದನೆಕಾಯಿ, ಬೆಂಡೆಕಾಯಿ, ಹಿರೇಕಾಯಿ, ಡೊಣಮೆಣಸಿನಕಾಯಿ ದರ ಪ್ರತಿ ಕ್ವಿಂಟಲ್‌ಗೆ ₹ 1 ಸಾವಿರ ಹೆಚ್ಚಾಗಿದೆ. ನುಗ್ಗೆಕಾಯಿ ಬೆಲೆ ಮಾರುಕಟ್ಟೆಯಲ್ಲಿ ಶತಕ ಬಾರಿಸಿದೆ.
ಕಳೆದ ವಾರ ಪ್ರತಿ ಕ್ವಿಂಟಲ್‌ಗೆ ₹28,000 ಮಾರಾಟವಾಗಿದ್ದ ಬೆಳ್ಳುಳ್ಳಿ ಈ ವಾರ ₹35 ಸಾವಿರಕ್ಕೆ ಜಿಗಿದಿದೆ. ಪ್ರತಿ ಕ್ವಿಂಟಲ್‌ಗೆ ₹7 ಸಾವಿರ ಹೆಚ್ಚಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲೂ ಬೆಲೆ ಹೆಚ್ಚಳವಾಗಿದ್ದು, ಗಣೇಶ ಚೌತಿ ಹಬ್ಬ ಮುಗಿಯುವವರೆಗೂ ಕಡಿಮೆ ಆಗುವ ಸಾಧ್ಯತೆ ಕಡಿಮೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ಗಜ್ಜರಿ, ತೊಂಡೆಕಾಯಿ ಪ್ರತಿ ಕ್ವಿಂಟಲ್‌ಗೆ ₹1 ಸಾವಿರ, ಟೊಮೆಟೊ ₹500 ಇದ್ದು, ದರ ಕಡಿಮೆಯಾಗಿದೆ. ಸಬ್ಬಸಗಿ, ಮೆಂತೆ ಹಾಗೂ ಪಾಲಕ ಸೊಪ್ಪಿನ ಬೆಲೆ ದುಪ್ಪಟ್ಟಾಗಿದೆ ಕೊತ್ತಂಬರಿ, ಕರಿಬೇವು ಸ್ವಲ್ಪ ಕಡಿಮೆಯಾಗಿದೆ.
ಮಹಾರಾಷ್ಟ್ರದಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ. ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ, ಕೊತ್ತಂಬರಿ, ಪಾಲಕ, ಮೆಂತೆ ಸೊಪ್ಪು ಇಲ್ಲಿಯ ತರಕಾರಿ ಸಗಟು ಮಾರುಕಟ್ಟೆಗೆ ಆವಕವಾಗಿದೆ. ಹಿರೇಕಾಯಿ, ಗಜ್ಜರಿ, ಅವರೆಕಾಯಿ, ಸೋರೆಕಾಯಿ, ಸೌತೆಕಾಯಿ, ಎಲೆಕೋಸು, ಹೂಕೋಸು ಆಂಧ್ರಪ್ರದೇಶ ಹಾಗೂ ತೆಲಂಗಾಣದ ಜಿಲ್ಲೆಗಳಿಂದ ಬಂದಿದೆ.
‘ಈ ವಾರ ಕೆಲ ತರಕಾರಿಗಳ ದರದಲ್ಲಿ ಹೆಚ್ಚಳವಾಗಿದೆ. ಮುಂದಿನ ವಾರ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಗಣೇಶ ಹಬ್ಬದ ಕಾರಣ ಸೊಪ್ಪಿನ ಬೆಲೆ ನಿರೀಕ್ಷೆಗಿಂತಲೂ ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ತರಕಾರಿ ವ್ಯಾಪಾರಿ ಕೆ.ಶಶಿಕುಮಾರ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.