ADVERTISEMENT

ಕವಿತಾಳ: 196 ವಿದ್ಯಾರ್ಥಿಗಳಲ್ಲಿ 164 ಯುವತಿಯರು

ಕವಿತಾಳದ ಸರ್ಕಾರಿ ಪಿಯು ಕಾಲೇಜು ಇನ್ಮುಂದೆ ಕರ್ನಾಟಕ ಪಬ್ಲಿಕ್‌ ಸ್ಕೂಲ್‌

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 5:20 IST
Last Updated 19 ಜೂನ್ 2024, 5:20 IST
ಕವಿತಾಳ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿರುವುದು
ಕವಿತಾಳ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿರುವುದು   

ಕವಿತಾಳ: ಗುಣಮಟ್ಟದ ಶಿಕ್ಷಣ ನೀಡಲು ಪ್ರಸಕ್ತ ವರ್ಷದಿಂದ ರಾಜ್ಯದ 176 ಪದವಿ ಪೂರ್ವ ಕಾಲೇಜುಗಳಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ತೆರೆಯಲು ಶಿಕ್ಷಣ ಇಲಾಖೆ ಆದೇಶ ನೀಡಿದ್ದು ಅದರಲ್ಲಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಬಾಲಕರ ಸರ್ಕಾರಿ ಪ್ರೌಢಶಾಲೆ ಆಯ್ಕೆಯಾಗಿದೆ.

ಒಂದೇ ಸೂರಿನಡಿ ಪ್ರಾಥಮಿಕ ಹಂತದಿಂದ ಪ್ರೌಢ ಶಿಕ್ಷಣದ ವರೆಗೆ ಗುಣಮಟ್ಟದ ಶಿಕ್ಷಣ ನೀಡಲು ಇಲಾಖೆ ಮುಂದಾಗಿದ್ದು ಇಲಾಖೆ ಗುರುತಿಸಿದ ಕಾಲೇಜಿನಲ್ಲಿ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಬಾಲಕರ ಸರ್ಕಾರಿ ಪ್ರೌಢಶಾಲೆ ಸೇರಿದ್ದು ಮಹತ್ವಾಕಾಂಕ್ಷಿಯ ಈ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸಿದ್ಧತೆ ಕೈಗೊಳ್ಳಲು ಇಲಾಖೆ ಸೂಚಿಸಿದೆ.

ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳ ಪಾಲಿಗೆ ಮೆಚ್ಚಿನ ಕಾಲೇಜು ಎನಿಸಿರುವ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗಗಳಿದ್ದು ಪ್ರಸಕ್ತ ವರ್ಷ ಹತ್ತನೇ ತರಗತಿ ಫಲಿತಾಂಶ ಕುಸಿತ ಕಂಡಿದ್ದರೂ ಕಾಲೇಜಿಗೆ ದಾಖಲೆ ಸಂಖ್ಯೆಯ 90 ಮಕ್ಕಳು ಪ್ರಥಮ ವರ್ಷದ ಪಿಯು ತರಗತಿಗೆ ಈಗಾಗಲೇ ಪ್ರವೇಶ ಪಡೆದಿದ್ದಾರೆ.

ADVERTISEMENT

ಪಿಯುಸಿ ಪ್ರಥಮ ವರ್ಷದ ಕಲಾ ವಿಭಾಗದಲ್ಲಿ 64, ವಾಣಿಜ್ಯ ವಿಭಾಗದಲ್ಲಿ 26 ಹಾಗೂ ದ್ವೀತಿಯ ವರ್ಷದ ಕಲಾ ವಿಭಾಗದಲ್ಲಿ 68 ಮತ್ತು ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ವರ್ಷದಲ್ಲಿ 24 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಒಟ್ಟು 196 ವಿದ್ಯಾರ್ಥಿಗಳಲ್ಲಿ 164 ಯುವತಿಯರು ಪ್ರವೇಶ ಪಡೆದಿದ್ದಾರೆ. 10 ಮಂಜೂರಾತಿ ಹುದ್ದೆಗಳಲ್ಲಿ 8 ಜನ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದು, ಕಾಯಂ ಪ್ರಾಚಾರ್ಯ ಮತ್ತು ಒಬ್ಬ ಪರಿಚಾರಕ ಹುದ್ದೆ ಖಾಲಿ ಇವೆ.

ಪಟ್ಟಣ ಸಮೀಪದ ಹಿರೇಹಣಿಗಿ, ವಟಗಲ್, ಅಮೀನಗಡ, ಹುಸೇನಪುರ, ಸೈದಾಪುರ, ಕೆ.ತಿಮ್ಮಾಪುರ, ತೊಪ್ಪಲದೊಡ್ಡಿ, ಪರಸಾಪುರ, ಬಸಾಪುರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ಕಲಿಯುತ್ತಿದ್ದಾರೆ. ಗ್ರಂಥಾಲಯ ಸೌಲಭ್ಯವಿದ್ದು ಕಂಪ್ಯೂಟರ್ ತರಬೇತಿಯ ಅವಶ್ಯವಿದೆ. ಯುವತಿಯರಿಗೆ ಶೌಚಾಲಯ ವ್ಯವಸ್ಥೆಯಿದ್ದು ಯುವಕರಿಗೆ ಶೌಚಾಲಯದ ಅಗತ್ಯವಿದೆ.

‘ಸಾವಿರಾರು ರೂಪಾಯಿ ಹಣ ಖರ್ಚು ಮಾಡಿ ದೂರದ ಊರುಗಳಲ್ಲಿ ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸಲು ಆರ್ಥಿಕವಾಗಿ ಸಮರ್ಥರಿಲ್ಲ ಮತ್ತು ಹೆಣ್ಣು ಮಕ್ಕಳನ್ನು ವಸತಿ ನಿಲಯದಲ್ಲಿ ಬಿಡುವುದು ಸುರಕ್ಷಿತವಲ್ಲ ಎನ್ನುವ ಕಾರಣಕ್ಕೆ ಈ ಕಾಲೇಜಿಗೆ ಕಳುಹಿಸುತ್ತಿದ್ದೇವೆ. ಇಲ್ಲಿ ಎಲ್ಲ ವಿಷಯಗಳ ಕಾಯಂ ಉಪನ್ಯಾಸಕರು ಇದ್ದಾರೆ. ಕಲಿಕೆಯ ಜತೆಗೆ ಮಕ್ಕಳ ಸುರಕ್ಷತೆ ಬಗ್ಗೆ ಕಾಳಜಿ ವಹಿಸುತ್ತಾರೆ’ ಎನ್ನುತ್ತಾರೆ ಪಾಲಕರು.

ಕಲಾ ವಿಭಾಗದಲ್ಲಿ ಶಿಕ್ಷಣ ವಿಷಯದ ಆಯ್ಕೆ ಬಗ್ಗೆ ಕೆಲವು ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿದ್ದಾರೆ. ಈ ವಿಭಾಗ ಮಂಜೂರಾದರೆ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ.

-ಶಕುಂತಲಾ, ಪ್ರಾಚಾರ್ಯೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಕವಿತಾಳ

ಕೊಠಡಿಗಳು, ಆವರಣ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲಕ ಸೌಕರ್ಯ ಹಾಗೂ ಕಾಯಂ ಉಪನ್ಯಾಸಕರು ಲಭ್ಯವಿದ್ದು ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.

-ಸೋಮಶೇಖರ ವಕ್ರಾಣಿ, ಉಪ ನಿರ್ದೇಶಕ, ಕಾಲೇಜು ಶಿಕ್ಷಣ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.