ಸಿರವಾರ (ರಾಯಚೂರು ಜಿಲ್ಲೆ): ತಾಲ್ಲೂಕಿನ ಡೋಣಿ ಬಸವಣ್ಣ ಕ್ಯಾಂಪ್‌ನ ರೈತ ಕರ್ರಿ ಸತ್ಯನಾರಾಯಣ ಅವರು ತಮ್ಮ ಎರಡು ಎಕರೆ ಜಮೀನಿನಲ್ಲಿ ವಿವಿಧ ತಳಿಯ ಬೀಜ ಬಳಸಿ ಪುನೀತ್ ರಾಜ್‌ಕುಮಾರ್ ಚಿತ್ರದ ಮಾದರಿಯಲ್ಲಿ ಭತ್ತ ಬೆಳೆದು ಎರಡನೇ ಪುಣ್ಯಸ್ಮರಣೆಯನ್ನು ವಿಶೇಷವಾಗಿ ಆಚರಿಸಲು ಮುಂದಾಗಿದ್ದಾರೆ.
ಚಿಕ್ಕಂದಿನಿಂದಲೂ ಪುನೀತ್ ರಾಜ್‌ಕುಮಾರ್ ಅಭಿಮಾನಿಯಾಗಿರುವ ಕರ್ರಿ ಸತ್ಯನಾರಾಯಣ ಅವರು, ಗುಜರಾತ್‌ನಿಂದ ತಂದ ಗೋಲ್ಡನ್ ರೋಸ್ ಹಾಗೂ ಕಾಲಾ ಭಟ್ಟಿ ಕಪ್ಪು ಬಣ್ಣದ ಭತ್ತದ ತಳಿಗಳ ಜತೆಯಲ್ಲಿ ಸ್ಥಳೀಯ ಸೋನಾಮಸೂರಿ ತಳಿಯ 100 ಕೆ.ಜಿ ಭತ್ತದ ಬೀಜ ಬಳಸಿ ಪುನೀತ್ ರಾಜ್‌ಕುಮಾರ್ ಹಾಗೆ ಕಾಣುವಂತೆ ಭತ್ತ ಬೆಳೆದಿದ್ದಾರೆ. ಎತ್ತರಿಂದ ನೋಡಿದಾಗ ಪುನೀತ್ ರಾಜ್‌ಕುಮಾರ್ ಭಾವಚಿತ್ರದಂತೆ ಕಾಣುತ್ತದೆ.
ಮೂರು ತಿಂಗಳ ಭತ್ತದ ಬೆಳೆಯಾಗಿದ್ದು, ಜುಲೈ 17ಕ್ಕೆ ಬೆಳೆಯಲು ಪ್ರಾರಂಭಿಸಿದ್ದಾರೆ. ಇದಕ್ಕಾಗಿ ಕರ್ರಿ ಸತ್ಯನಾರಾಯಣ ₹3 ಲಕ್ಷ ವ್ಯಯಿಸಿದ್ದಾರೆ. ಯೂಟ್ಯೂಬ್ ನೋಡಿ ಈ ಕಲೆ ಕಲಿತಿರುವ ಅವರು, ಹಂತ–ಹಂತವಾಗಿ ದ್ರೋಣ್ ಕ್ಯಾಮೆರಾ ಹಾರಿಸಿ ಬೆಳೆ ವೀಕ್ಷಿಸಿ, ಅವಶ್ಯವಿರುವ ಕಡೆ ಆಯಾ ಬಣ್ಣದ ಭತ್ತ ಕತ್ತರಿಸಿ ಚಿತ್ರ ಕಾಣುವಂತೆ ಮಾಡಿದ್ದಾರೆ. ಕಾಲುವೆ ನೀರಿನ ಕೊರತೆಯ ನಡುವೆಯೂ ಟ್ಯಾಂಕರ್ ನೀರು ಹಾಕಿ ಭತ್ತದ ಬೆಳೆ ಉಳಿಸಿಕೊಂಡು ಅಭಿಮಾನ ಮೆರೆದಿದ್ದಾರೆ.
ಚಿತ್ರದ ಅಳತೆ: ಮುಖದ ಭಾಗವೊಂದೇ 140 ಅಡಿ ಎತ್ತರ ಹಾಗೂ 40 ಅಡಿ ಅಗಲವಿದೆ. ಒಂದೊಂದು ಕಣ್ಣು 10 ಅಡಿ ಅಗಲವಿದೆ. ಚಿತ್ರದಲ್ಲಿನ ‘ಕರ್ನಾಟಕ ರತ್ನ’ ಎನ್ನುವ ವಾಕ್ಯವೇ 10X40 ಅಡಿಯಿದೆ. ಒಟ್ಟು 6 ಎಕರೆ ಜಮೀನಿನಲ್ಲಿ ಇದಕ್ಕಾಗಿ 2 ಎಕರೆ ಬಳಸಿಕೊಂಡಿದ್ದಾರೆ.
ಪುನೀತ್ ರಾಜ್‌ಕುಮಾರ್ 2ನೇ ಪುಣ್ಯ ಸರಣೆಯನ್ನು ವಿಭಿನ್ನವಾಗಿ ಆಚರಿಸಲು 'ರೈಸ್ ಪ್ಯಾಡಿ ಆರ್ಟ್' ಬಳಸಿಕೊಂಡಿದ್ದೇನೆ. ರಾಜ್‌ಕುಮಾರ್ ಕುಟುಂಬಕ್ಕೆ ಚಿತ್ರ ತೋರಿಸಿದ್ದು ಹರ್ಷ ವ್ಯಕ್ತಪಡಿಸಿದ್ದಾರೆ.-ಸತ್ಯನಾರಾಯಣ ಕರ್ರಿ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.