ಸಿಂಧನೂರು: ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಸುರಿದ ಭಾರಿ ಮಳೆಗೆ ಭತ್ತದ ಪೈರು ನೆಲಕ್ಕುರುಳಿದ್ದು, ಕಾಳು ಕಟ್ಟಿದ ಅಪಾರ ಪ್ರಮಾಣದ ಬೆಳೆಯು ಹಾನಿಗೀಡಾಗಿದೆ. ಇದರಿಂದ ಭತ್ತ ಬೆಳೆದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ತಾಲ್ಲೂಕಿನ ಮುಕ್ಕುಂದಾ, ಸಿಂಗಾಪುರ, ಹುಡಾ, ಮಾವಿನಮಡ್ಗು, ಸಿದ್ರಾಂಪುರ, ಚನ್ನಳ್ಳಿ, ಸಾಲಗುಂದಾ, ಅಂಬಾಮಠ ಸೇರಿದಂತೆ ಇತರೆ ಗ್ರಾಮಗಳ ವ್ಯಾಪ್ತಿಯ ಸಾವಿರಾರು ಎಕರೆ ಜಮೀನುಗಳಲ್ಲಿ ಬೆಳೆದ ಭತ್ತದ ಬೆಳೆ ಮಳೆಯಿಂದ ನೆಲಕ್ಕೆ ಬಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆ ಕೈಗೆ ಬರುವ ವೇಳೆಗೆ ನೆಲಕ್ಕೆ ಬಿದ್ದಿದೆ. ಅತಿ ಹೆಚ್ಚಿನ ಪ್ರಮಾಣದಲ್ಲಿ ಆರ್‌ಎನ್‍ಆರ್ ತಳಿಯ ಭತ್ತ ಹಾನಿಯಾಗಿದೆ. ನಷ್ಟಕ್ಕೆ ಒಳಗಾದ ಬೆಳೆಗಾರರು ತಾಲ್ಲೂಕಾಡಳಿತ ತ್ವರಿತವಾಗಿ ಸಮೀಕ್ಷೆ ನಡೆಸಿ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
‘ವಿಪರೀತ ಮಳೆಯಿಂದ ಭತ್ತದ ಬೆಳೆ ನೆಲದ ಪಾಲಾಗಿದೆ. ಭತ್ತ ನಾಟಿ, ನಿರ್ವಹಣೆ, ಕ್ರಿಮಿನಾಶಕ, ರಸಗೊಬ್ಬರಕ್ಕೆಂದು ಎಕರೆಗೆ ₹35 ಸಾವಿರದಿಂದ ₹40 ಸಾವಿರದವರೆಗೆ ಖರ್ಚು ಮಾಡಿದ್ದೇವೆ. ಬೆಳೆ ಹಾಳಾಗಿರುವುದರಿಂದ ದಿಕ್ಕು ತೋಚದಂತೆ ಆಗಿದೆ. ಆದ್ದರಿಂದ ಕೂಡಲೇ ಜಿಲ್ಲಾಡಳಿತ ಹಾಗೂ ಸರ್ಕಾರ ಶೀಘ್ರವೇ ಬೆಳೆಗಾರರ ನೆರವಿಗೆ ಬರಬೇಕು’ ಎಂದು ರೈತರಾದ ಮಲ್ಲನಗೌಡ ಮಾವಿನಮಡ್ಗು, ಬಸನಗೌಡ ಸಿಂಗಾಪುರ, ತಿಮ್ಮಾರೆಡ್ಡಿ ಹುಡಾ ಮನವಿ ಮಾಡಿದ್ದಾರೆ.
ಪ್ರತಿವರ್ಷವೂ ಇದೇ ಪರಿಸ್ಥಿತಿ: ತುಂಗಭದ್ರಾ ಜಲಾಶಯ ತುಂಬಿರಲಿ, ತುಂಬದಿರಲಿ, ಅಕಾಲಿಕವಾಗಿ ಸುರಿಯುವ ಮಳೆ ಗಾಳಿಯಿಂದ ರೈತರು ಬೆಳೆಯುವ ಭತ್ತದ ಬೆಳೆ ಹಾಳಾಗುವುದು ಪ್ರತಿವರ್ಷ ತಪ್ಪಿದ್ದಲ್ಲ. ಸಂಬಂಧಿಸಿದ ಅಧಿಕಾರಿಗಳು ಸಹ ಸರಿಯಾದ ಸಮಯಕ್ಕೆ ಬೆಳೆ ಹಾನಿ ಸಮೀಕ್ಷೆ ನಡೆಸದೆ ನಿರ್ಲಕ್ಷ್ಯ ವಹಿಸುತ್ತಾರೆಂಬ ಆರೋಪವೂ ಸರ್ವೆ ಸಾಮಾನ್ಯವಾಗಿ ಕೇಳಿ ಬರುತ್ತದೆ. ಇನ್ನಾದರೂ ಕೃಷಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಭತ್ತದ ಬೆಳೆ ಹಾನಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡಿ ರೈತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂಬುದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮರಳಿ ಅವರ ಆಗ್ರಹವಾಗಿದೆ.
ಸಿಂಧನೂರು ನಗರ ಹೊರತುಪಡಿಸಿದರೆ ಹುಡಾ ಮುಕ್ಕುಂದಾ ಮತ್ತಿತರ ಗ್ರಾಮಗಳಲ್ಲಿ ಅತಿಹೆಚ್ಚು ಮಳೆಯಾಗಿದೆ. ಇದರಿಂದ ಆಗಿರುವ ಹಾನಿ ಪ್ರಮಾಣವನ್ನು ಕೃಷಿ ಇಲಾಖೆ ಸಹಕಾರದೊಂದಿಗೆ ಸಮೀಕ್ಷೆ ಮಾಡಲಾಗುವುದು.ಅರುಣ್ ಎಚ್.ದೇಸಾಯಿ ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.