ಗಬ್ಬೂರು(ದೇವದುರ್ಗ): ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಶೌಚಾಲಯಕ್ಕೆ ದುಬಾರಿ ನಿರ್ವಹಣೆ ನೆಪವೊಡ್ಡಿ ಬೀಗ ಹಾಕಲಾಗಿದ್ದು, ಪ್ರಯಾಣಿಕರು, ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಪರದಾಡುತ್ತಿದ್ದಾರೆ.
ಎಂಟು ವರ್ಷದ ಹಿಂದೆ ಬಸ್ ನಿಲ್ದಾಣ ನಿರ್ಮಿಸುವ ಸಂದರ್ಭದಲ್ಲಿ ಸುಸಜ್ಜಿತ ಶೌಚಾಲಯಗಳನ್ನೂ ಕಟ್ಟಲಾಗಿತ್ತು. ಅವುಗಳ ನಿರ್ವಹಣೆಯ ಟೆಂಡರ್ ಪಡೆದ ಗುತ್ತಿಗೆದಾರರು, ‘ನಿರೀಕ್ಷಿತ ಲಾಭ ಬರುತ್ತಿಲ್ಲ’ ಎಂದು ಪ್ರಸ್ತುತ ಶೌಚಾಲಯಕ್ಕೆ ಬೀಗ ಹಾಕಿದ್ದಾರೆ. ಇದರಿಂದ ಪ್ರಯಾಣಿಕರು ಜಲ–ಮಲ ಬಾಧೆ ತೀರಿಸಲು ಪರದಾಡುವಂತಾಗಿದೆ.
ಪಟ್ಟಣದ ಬಸ್ ನಿಲ್ದಾಣದಿಂದ 30ಕ್ಕೂ ಹೆಚ್ಚು ಹಳ್ಳಿಗಳಿಗೆ ನಿತ್ಯ ಅಂದಾಜು 300ರಿಂದ 400 ಪ್ರಯಾಣಿಕರು ಪ್ರಯಾಣಿಸುತ್ತಾರೆ. ಪ್ರೌಢ ಮತ್ತು ಕಾಲೇಜಿಗೆ ಬರುವ ವಿದ್ಯಾರ್ಥಿನಿಯರು ಶಾಲಾ–ಕಾಲೇಜು ಅವಧಿಯ ನಂತರ ಇದೇ ಬಸ್ ನಿಲ್ದಾಣದಲ್ಲಿ ಬಸ್‌ಗಳಿಗೆ ಕಾಯುತ್ತಾರೆ. ಜಲಬಾಧೆ ತೀರಿಸಲು ಬಸ್ ನಿಲ್ದಾಣದ ಮುಂಭಾಗದ ಪೊದೆಗಳತ್ತ ಹೋಗುವಂತಾಗಿದೆ.
ಬಸ್ ನಿಲ್ದಾಣದ ಬಳಿಯೇ ಇರುವ ಗ್ರಾಮ ಪಂಚಾಯಿತಿಗೆ ಹಲವು ಭಾರೀ ಸಾರ್ವಜನಿಕರು ಮನವಿ ಮಾಡಿದರೂ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ. ಇತ್ತ ಸುಸ್ಥಿತಿಯಲ್ಲಿರುವ ಸಾರಿಗೆ ಇಲಾಖೆ ಶೌಚಾಲಯಕ್ಕೂ ಬೀಗ ಹಾಕಲಾಗಿದೆ. ಬಸ್ ನಿಲ್ದಾಣದಲ್ಲಿರುವ ಶೌಚಾಲಯ ಗುತ್ತಿಗೆದಾರರ ನಿರ್ವಹಣೆಯಿಲ್ಲದೇ ಗಬ್ಬುನಾರುತ್ತಿದ್ದು, ಅವುಗಳ ಒಳಗೆ ಪ್ರವೇಶಿಸುವುದೇ ಸವಾಲಾಗಿದೆ.
ಬಸ್ ನಿಲ್ದಾಣದ ಹತ್ತಿರ ನಾಡ ತಹಶೀಲ್ದಾರ್ ಕಚೇರಿ, ಕಂದಾಯ ಶಾಖೆ, ಗ್ರಾಮ ಪಂಚಾಯಿತಿ, ರೈತ ಸಂಪರ್ಕ ಕೇಂದ್ರ, ಅರಿವು ಮತ್ತು ಮಾಹಿತಿ ಕೇಂದ್ರ ಮತ್ತು ಸರ್ಕಾರಿ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳಿವೆ. ಅತಿಹೆಚ್ಚು ಸಾರ್ವಜನಿಕರು ಸೇರುವ ಈ ಪ್ರದೇಶದಲ್ಲಿ ಬಸ್ ನಿಲ್ದಾಣದ ತಡೆಗೋಡೆಯೇ ಕತ್ತಲಾದರೆ ಬಯಲು ಶೌಚಾಲಯವಾಗಿ ಬದಲಾಗುವ ಸ್ಥಿತಿಯಿದೆ.
ಕಡಿಮೆ ಆದಾಯ ಬರುತ್ತದೆ ಎಂದು ಟೆಂಡರ್ ಪಡೆದ ಗುತ್ತಿಗೆದಾರ ನಿರ್ವಹಣೆ ಮಾಡುತ್ತಿಲ್ಲ. ಜಿಲ್ಲಾ ಸಾರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಮರುಟೆಂಡರ್ ಪ್ರಕ್ರಿಯೆಗೆ ಮನವಿ ಮಾಡುವೆಪಿ.ಕೆ.ಜಾಧವ ಘಟಕ ವ್ಯವಸ್ಥಾಪಕ ಮಹಿಳೆ ಪ್ರಯಾಣಿಕರು ಮತ್ತು ವಿದ್ಯಾರ್ಥಿನಿಯರು ಶೌಚಕ್ಕಾಗಿ ಪರದಾಡುವಂತಾಗಿದೆ. ನಿರ್ವಹಣೆ ಮಾಡದ ಗುತ್ತಿಗೆದಾರರ ಟೆಂಡರ್ ರದ್ದು ಮಾಡಿ ಉತ್ತಮ ನಿರ್ವಹಣೆ ಮಾಡುವವರಿಗೆ ಗುತ್ತಿಗೆ ಕೊಡಬೇಕುಶಾಂತಕುಮಾರ ಹೊನ್ನಟಗಿ ಸಾಮಾಜಿಕ ಹೋರಾಟಗಾರ ಗಬ್ಬೂರು ನಾವು ಶಾಲೆ ಬಿಟ್ಟ ನಂತರ ಸಂಜೆ 6 ಗಂಟೆ ವರೆಗೆ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತೇವೆ. ಶೌಚಾಲಯ ಕೊರತೆ ಹಿನ್ನೆಲೆ ನಾವು ಜಲಬಾಧೆ ತಡೆಯುತ್ತವೆ. ನೀರು ಕುಡಿದರೆ ನಾವು ಬಯಲಿನಲ್ಲಿ ಶೌಚ ಮಾಡಲು ಮುಜುಗರ ಅನುಭವಿಸುವ ಆತಂಕ ಕಾಡುತ್ತದೆಶಾಲಾ–ಕಾಲೇಜು ವಿದ್ಯಾರ್ಥಿನಿಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.