ADVERTISEMENT

ರಾಯಚೂರು |' ಏಳು ತಿಂಗಳ ಬಾಕಿ ಸಂಬಳ ಕೊಡಿ'

ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರ ಸಂಘದ ಮನವಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 14:44 IST
Last Updated 26 ಜೂನ್ 2024, 14:44 IST
ಅಕ್ಷಯ್ ಗೌಡ
ಅಕ್ಷಯ್ ಗೌಡ   

ರಾಯಚೂರು: ‘ಜಿಲ್ಲೆಯಲ್ಲಿ ವಿವಿಧ ವೃಂದ ಹೊರ ಗುತ್ತಿಗೆ ನೌಕರರಿಗೆ ಬಾಕಿ ಉಳಿದಿರುವ ಏಳು ತಿಂಗಳ ವೇತನವನ್ನು ತಕ್ಷಣ ವೇತನ ಪಾವತಿ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ವಿವಿಧ ವೃಂದದ ಹೊರ ಗುತ್ತಿಗೆ ನೌಕರರ ಸಂಘ ಒತ್ತಾಯಿಸಿದೆ.

ಮಾದ್ಯಮಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಘಟಕದ ಅಧ್ಯಕ್ಷ ಅಕ್ಷಯಗೌಡ, ‘ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಕೇಳಿದರೆ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂದು ಹೇಳುತ್ತಿದ್ದಾರೆ. ಗುತ್ತಿಗೆ ಏಜೆನ್ಸಿಗಳು ತಮ್ಮ ಹೊಣೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಸರ್ಕಾರ ಹಣ ಬಿಡುಗಡೆ ಮಾಡದ ಹೊರತು ಸಂಬಳ ಕೊಡಲು ಸಾಧ್ಯವಿಲ್ಲವೆಂದು ಹೇಳುತ್ತಿವೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರ ಗುತ್ತಿಗೆ ನೌಕರರ ಇಎಸ್‌ಐ ಹಾಗೂ ಪಿಎಫ್‌ ಹಣ ಸಹ ಪಾವತಿಸಿಲ್ಲ. ಆರೋಗ್ಯ ಇಲಾಖೆಯಲ್ಲಿ ಅನೇಕ ವರ್ಷಗಳಿಂದ 9 ಸಾವಿರ ಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರ ಖಾಸಗಿ ಸಂಸ್ಥೆಗೆ ಟೆಂಡರ್‌ ನೀಡಿ ನೌಕರರ ಶೋಷಣೆ ಮಾಡುತ್ತಿದೆ. ರಾಜ್ಯದಲ್ಲಿ 2.5 ಲಕ್ಷ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡದೇ ಗುತ್ತಿಗೆ ಪದ್ಧತಿಯನ್ನು ಮುಂದುವರಿಸಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಸರ್ಕಾರ ಸರಿಯಾದ ಸಮಯಕ್ಕೆ ವೇತನ ಪಾವತಿ ಮಾಡಬೇಕು. ಸಕಾಲದಲ್ಲಿ ಇಎಸ್‌ಐ, ಪಿಎಫ್‌ ವಂತಿಕೆ ಹಣ ಕಟ್ಟಬೇಕು. ವಾರ್ಷಿಕ ಏಜೆನ್ಸಿ ಯಾವುದೇ ಬಂದರೂ ಹಳೆಯ ನೌಕರರ ಸೇವೆಯನ್ನು ಮುಂದುವರಿಸಬೇಕು. ರಜೆ ಸೌಲಭ್ಯಗಳು ಸರಿಯಾಗಿ ದೊರಕುವಂತೆ ವ್ಯವಸ್ಥೆ ಮಾಡಬೇಕು. ಆದಷ್ಟು ಬೇಗ ವೇತನ ಪಾವತಿ ಮಾಡದಿದ್ದರೆ ಪ್ರತಿಭಟನೆ ಅನಿರ್ವಾರ್ಯ’ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಿವಕುಮಾರ, ಮಂಜುಳಾ, ಸಾವಿತ್ರಿ, ಶ್ರೀಶೈಲ ಕರಿಭೀಮಗೋಳ, ದೌಲಪ್ಪ ಮನಗೂಳಿ, ದ್ಯಾಮಣ್ಣ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.