ADVERTISEMENT

ಪಿಡಿಒ ಪರೀಕ್ಷೆ ಲೋಪ ಪ್ರಕರಣ: ಸಿಒಡಿ ವಹಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 16:04 IST
Last Updated 21 ನವೆಂಬರ್ 2024, 16:04 IST
ರಝಾಕ್ ಉಸ್ತಾದ್
ರಝಾಕ್ ಉಸ್ತಾದ್   

ರಾಯಚೂರು: ಈಚೆಗೆ ಕರ್ನಾಟಕ ಲೋಕಸೇವಾ ಆಯೋಗದಿಂದ ಪಿಡಿಒ ಹುದ್ದೆಗೆ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಿಂಧನೂರಿನ ಪ್ರಥಮ ದರ್ಜೆ ಕಾಲೇಜಿನಲ್ಲಾದ ಗಲಾಟೆ ಪ್ರಕರಣವನ್ನು ಸಿಒಡಿ ತನಿಖೆಗೆ ವಹಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ  ರಜಾಕ್ ಉಸ್ತಾದ್ ಮನವಿ ಮಾಡಿದರು.

‘ಪ್ರಶ್ನೆ ಪತ್ರಿಕೆ 15 ನಿಮಿಷ ತಡವಾಗಿ ನೀಡಿದ್ದಲ್ಲದೇ, ಆಗಲೇ ಲಕೋಟೆ ತೆಗೆಯಲಾಗಿತ್ತು. ಇದನ್ನೇ ಪರೀಕ್ಷಾರ್ಥಿಗಳು ಪ್ರಶ್ನಿಸಿದ್ದಾರೆ. ನಿಯಮಾನುಸಾರ ನಿಗದಿತ ಸಮಯಕ್ಕೆ ವಿದ್ಯಾರ್ಥಿಗಳ ಸಮ್ಮುಖದಲ್ಲೇ ಪ್ರಶ್ನೆ ಪತ್ರಿಕೆ ಲಕೋಟೆ ತೆರೆಯಬೇಕು. ಅಲ್ಲದೇ, ಇಬ್ಬರು ಪರೀಕ್ಷಾರ್ಥಿಗಳ ಸಹಿ ಕೂಡ ಪಡೆಯಬೇಕು. ಆದರೆ, ಅಲ್ಲಿನ ಪರೀಕ್ಷಾ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಇದ್ಯಾವುದು ಮಾಡದಿರುವುದು ಕರ್ತವ್ಯಲೋಪ ಎಸಗಿದ್ದಾರೆ ಎಂದು ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಆರೋಪ ಮಾಡಿದರು.

ಕರ್ತವ್ಯಲೋಪ ಪ್ರಶ್ನಿಸಿದ ಪ್ರತಿಭಟನೆ ನಡೆಸಿದ ಕಾರಣಕ್ಕೆ 12 ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿರುವುದು ಖಂಡನೀಯ. ಇದರಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿರುವುದು ತಪ್ಪು ಎಂದಾದರೆ, ನಿಯಮದ ಪ್ರಕಾರ ಪರೀಕ್ಷೆ ನಡೆಸದ ಅಧಿಕಾರಿಗಳದ್ದು ಕೂಡ ಅಷ್ಟೇ ತಪ್ಪು. ಹಾಗಾಗಿ ಪರೀಕ್ಷಾ ಕೇಂದ್ರದ ಮುಖ್ಯಸ್ಥ ಬಸವರಾಜ ಸೇರಿ ಇತರೆ ಸಿಬ್ಬಂದಿ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು. 

ADVERTISEMENT

‘ಈ ಕೇಂದ್ರದಲ್ಲಿ ಇಂಥ ಪರೀಕ್ಷೆಗಳು ನಡೆದಿರುವುದು ಇದೇ ಮೊದಲಲ್ಲ. ಅಲ್ಲದೇ, ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಗೂ ತರಬೇತಿ ನೀಡಿರುತ್ತಾರೆ. ಇದರಲ್ಲಿ ಕೇವಲ ವಿದ್ಯಾರ್ಥಿಗಳನ್ನು ತಪ್ಪಿತಸ್ಥರನ್ನಾಗಿ ಮಾಡದೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರನ್ನು, ಸಿಬ್ಬಂದಿಯನ್ನು ತಪ್ಪಿತಸ್ಥರನ್ನಾಗಿ ಮಾಡಬೇಕು ಹಾಗೂ ಪ್ರಕರಣವನ್ನು ಸಿಒಡಿ ತನಿಖೆಗೆ ವಹಿಸಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.