ರಾಯಚೂರು: ಸಿಂಧನೂರಿನ ಸರ್ಕಾರಿ ಕಾಲೇಜಿನಲ್ಲಿ ನಡೆಯಬೇಕಿದ್ದ ಪಿಡಿಒ ಪರೀಕ್ಷೆಗೆ ಹಾಜರಾಗಿದ್ದ 830 ಅಭ್ಯರ್ಥಿಗಳ ಪೈಕಿ 818 ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಯಲ್ಲಿ ಪಶ್ನೆ ಪತ್ರಿಕೆಯನ್ನೇ ಕೊಡದ ಕಾರಣ ಪರೀಕ್ಷಾರ್ಥಿಗಳು ದಿಢೀರ್ ಕುಷ್ಟಗಿ–ರಾಯಚೂರು ಹೆದ್ದಾರಿಗೆ ಬಂದು ಪ್ರತಿಭಟನೆ ನಡೆಸಿದರು.
ಅಭ್ಯರ್ಥಿಗಳು ಕೆಪಿಎಸ್‌ಸಿ ಪರೀಕ್ಷಾ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿ ಬಾರಿಯೂ ಕೆಪಿಎಸ್‌ಸಿ ಒಂದಿಲ್ಲೊಂದು ಎಡವಟ್ಟು ಮಾಡುತ್ತಿದೆ. ಒಂದು ಪರೀಕ್ಷಾ ಕೊಠಡಿಯಲ್ಲಿ 12 ಅಭ್ಯರ್ಥಿಗಳಿಗೆ ಮಾತ್ರ ಪ್ರಶ್ನೆ ಪತ್ರಿಕೆ ಕೊಡಲಾಗಿತ್ತು. ಉಳಿದವರಿಗೆ 45 ನಿಮಿಷ ಆದರೂ ಪ್ರಶ್ನೆ ಪತ್ರಿಕೆ ಕೊಡದಿದ್ದಾಗ ಅಭ್ಯರ್ಥಿಗಳು ಘೋಷಣೆಗಳನ್ನು ಕೂಗುತ್ತ ಕೊಠಡಿಯಿಂದ ಹೊರಗೆ ಬಂದರು.
ನಂತರ ಮುಖ್ಯ ರಸ್ತೆಯ ಮೇಲೆ ಕುಳಿತು ರಸ್ತೆ ತಡೆ ನಡೆಸಿದರು. ಸಿಂಧನೂರು ತಹಶೀಲ್ದಾರ್ ಸ್ಥಳಕ್ಕೆ ಭೇಟಿಕೊಟ್ಟು ಅಭ್ಯರ್ಥಿಗಳಿಗೆ ಸಮಾಧಾನ ಪಡಿಸಲು ಯತ್ನಿಸಿದರು. ಪೊಲೀಸರು ಗೊಂದಲ ನಿವಾರಣೆಗೆ ಪಯತ್ನ ಮಾಡಿದರೂ ಅಭ್ಯರ್ಥಿಗಳು ಕೆಪಿಎಸ್‌ಸಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಸರಿಯಾಗಿ ಪೂರ್ವಭಾವಿ ಸಿದ್ಥತೆ ಮಾಡಿಕೊಂಡಿರಲಿಲ್ಲ. ಜಿಲ್ಲೆಯಲ್ಲಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡ ಮಾಹಿತಿಯನ್ನೂ ಯಾವ ಪತ್ರಿಕೆಗೆ ನೀಡಿರಲಿಲ್ಲ. 830 ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಬಾರದೇ ಇದ್ದರೂ ಜಿಲ್ಲಾಡಳಿತ ಗಂಭೀರವಾಗಿರದೇ ಇರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಅಭ್ಯರ್ಥಿಗಳು ಆರೋಪಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.