ADVERTISEMENT

ರಾಯಚೂರು: ನಗರ ಸ್ಥಳೀಯ ಸಂಸ್ಥೆಗಳಿಗೆ ಶಾಂತಿಯುತ ಮತದಾನ

ರಾಯಚೂರು, ಸಿಂಧನೂರು, ದೇವದುರ್ಗದಲ್ಲಿ ಉಪ ಚುನಾವಣೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2023, 14:52 IST
Last Updated 27 ಡಿಸೆಂಬರ್ 2023, 14:52 IST
ರಾಯಚೂರಿನ ನಗರಸಭೆಯ ವಾರ್ಡ್ ನಂಬರ್ 12ರಲ್ಲಿ ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು
ರಾಯಚೂರಿನ ನಗರಸಭೆಯ ವಾರ್ಡ್ ನಂಬರ್ 12ರಲ್ಲಿ ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು   

ರಾಯಚೂರು: ಜಿಲ್ಲೆಯ ರಾಯಚೂರು ನಗರಸಭೆ, ಸಿಂಧನೂರು ನಗರಸಭೆ ಹಾಗೂ ದೇವದುರ್ಗ ಪುರಸಭೆಯ ವಾರ್ಡ್‌ಗಳಿಗೆ ಬುಧವಾರ ಶಾಂತಿಯುತವಾಗಿ ಮತದಾನ ನಡೆಯಿತು. ಲಿಂಗಸುಗೂರು ಪುರಸಭೆಯ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ.

ರಾಯಚೂರು ನಗರಸಭೆ ವ್ಯಾಪ್ತಿಯ ವಾರ್ಡ್ ನಂ.12ರಲ್ಲಿ ಒಟ್ಟು 5 ಮತಗಟ್ಟೆಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಒಟ್ಟು 5528 ಮತದಾರರಿದ್ದು, ಇದರಲ್ಲಿ1633 ಪುರುಷರು ಹಾಗೂ 1511 ಮಹಿಳೆಯರು ಸೇರಿ ಒಟ್ಟು 3144 ಮತದಾರರು ಮತದಾನ ಮಾಡಿದರು ಶೇ.56.87ರಷ್ಟು ಮತದಾನವಾಗಿದೆ.

ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ನಗರದ ಎಂ.ಈರಣ್ಣ ವೃತ್ತದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಮೊಕ್ಕಾಂ ಹೂಡಿ ಮತದಾನದ ಕಾರ್ಯಗಳನ್ನು ವೀಕ್ಷಿಸಿದರು. ನಗರದ ಮಂಗಳವಾರಪೇಟೆ ಉನ್ನತಿಕರಿಸಿದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರು ಬೂತ್ ಹಾಗೂ ಪರಕೋಟ ಬಡಾವಣೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ 2 ಬೂತ್ ಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗಾಗಿ ವ್ಹೀಲ್ ಚೇರ್ ವ್ಯವಸ್ಥೆ ಮಾಡಲಾಗಿತ್ತು. 

ADVERTISEMENT

ಕಾಂಗ್ರೆಸ್ ಪಕ್ಷದಿಂದ ಪವನ ಕುಮಾರ ಎಂ, ಜೆಡಿಎಸ್ ಪಕ್ಷದಿಂದ ಮೀರ್ ಅಬ್ದುಲ್ ರಹೀಂ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ನೂರ ಪಾಷಾ ಸ್ಪರ್ಧಾ ಕಣದಲ್ಲಿದ್ದಾರೆ. ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್ ದುರುಗೇಶ ಅವರು ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಾರ್ಡ್ ನಂಬರ್ 12ರ ನಗರಸಭೆ ಸದಸ್ಯರಾಗಿ ಚುನಾಯಿತರಾಗಿ ಆನಂತರ ಅಧ್ಯಕ್ಷರಾಗಿದ್ದ ವಿನಯಕುಮಾರ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಯಚೂರು ನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು.

ಸಿಂಧನೂರು: ಶೇ.67.48ರಷ್ಟು ಮತದಾನ

ಸಿಂಧನೂರು: ಸಿಂಧನೂರು ನಗರಸಭೆ ವ್ಯಾಪ್ತಿಯ ವಾರ್ಡ್ ನಂ.22ರ 22 ಹಾಗೂ 22(ಎ) ಒಟ್ಟು 2 ಮತಗಟ್ಟೆಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಒಟ್ಟು 1704 ಮತದಾರರಿದ್ದು, ಇದರಲ್ಲಿ 576 ಪುರುಷರು ಹಾಗೂ 574 ಮಹಿಳೆಯರು ಸೇರಿ ಒಟ್ಟು 1150 ಮತದಾರರು ಮತದಾನ ಮಾಡಿದರು ಶೇ.67.48ರಷ್ಟು ಮತದಾನವಾಗಿದೆ.

ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾದರೂ 10 ಗಂಟೆ ವರೆಗೆ ಮತದಾರರ ಸಂಖ್ಯೆ ಕಡಿಮೆ ಇತ್ತು. 11 ಗಂಟೆಯ ನಂತರ ಮತದಾನ ಚುರುಕುಗೊಂಡಿತು. ಮಧ್ಯಾಹ್ನ 1 ಗಂಟೆ ಹೊತ್ತಿಗೆ ಶೇಕಡ 48 ರಷ್ಟು ಮತದಾನವಾಗಿತ್ತು. ಕಾಂಗ್ರೆಸ್‌ನಿಂದ ಅಬೇದಾ ಬೇಗಂ, ಜೆಡಿಎಸ್‌ನಿಂದ ಎಂ. ಮೆಹಬೂಬ, ಬಿಜೆಪಿಯಿಂದ ಮಲ್ಲಿಕಾರ್ಜುನ, ಎಸ್‌ಡಿಪಿಯಿಂದ ಅಬ್ದುಲ್ ರಿಯಾಜ್ ಬುಡ್ಡಣ್ಣಿ ಸ್ಪರ್ಧಿಸಿದ್ದಾರೆ.

ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳು ಸೇರಿದಂತೆ ಕಾಂಗ್ರೆಸ್ ಮುಖಂಡ ಪಂಪನಗೌಡ ಬಾದರ್ಲಿ, ಮಲ್ಲಿಕಾರ್ಜುನ್ ಪಾಟೀಲ, ಖಾಜಿ ಮಲಿಕ್ ವಕೀಲ, ಜೆಡಿಎಸ್ ಮುಖಂಡ ಬಸವರಾಜ ನಾಡಗೌಡ , ಬಿಜೆಪಿ ಮುಖಂಡ ಕೆ ರಾಜಶೇಖರ ಮೊದಲಾದವರು ಮತದಾರರಿಗೆ ಮತಗಟ್ಟೆ ಸಂಖ್ಯೆ ಒದಗಿಸಿ ನೆರವಾದರು.

ದೇವದುರ್ಗದಲ್ಲಿ ಶೇ. 74.81ರಷ್ಟು ಮತದಾನ

ದೇವದುರ್ಗ ಪುರಸಭೆ ವ್ಯಾಪ್ತಿಯ ವಾರ್ಡ್ ನಂ.5 ರ ಉಪಚುನಾವಣೆಯಲ್ಲಿ ಒಟ್ಟು 1048 ಮತದಾರರಿದ್ದು, ಇದರಲ್ಲಿ 398 ಪುರುಷರು ಹಾಗೂ 386 ಮಹಿಳೆಯರು ಸೇರಿ ಒಟ್ಟು 784 ಮತದಾರರು ಮತದಾನ ಮಾಡಿದರು ಶೇ. 74.81ರಷ್ಟು ಮತದಾನವಾಗಿದೆ.

ದೇವದುರ್ಗ: ದೇವದುರ್ಗ ಪುರಸಭೆಯ ಬಾಪೂಜಿ 5 ನೇ ವಾರ್ಡ್‌ಗೆ ಉಪ ಚುನಾವಣೆ ಬುಧವಾರ ಬಾಪೂಜಿ ಪಾಠ ಶಾಲೆ ಮತಗಟ್ಟೆಯಲ್ಲಿ ಶಾಂತಿಯುತವಾಗಿ ನಡೆಯಿತು. ಬಿಜೆಪಿ ಸದಸ್ಯ ಲಚಮಯ್ಯ ನಾಯಕ ನಿಧನದಿಂದ ತೆರವಾಗಿತ್ತು.

ಪಟ್ಟಣದ 23 ವಾರ್ಡ್‌ಗಳ ಪೈಕಿ ಅತಿ ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲ್ಪಟ್ಟ ಬಾಪೂಜಿ ಪಾಠ ಶಾಲೆ ಮತಗಟ್ಟೆಯಲ್ಲಿ ಗಲಾಟೆಗಳ ಮೂಲಕ ಚುನಾವಣೆ ಮುಕ್ತಾಯವಾಗುತ್ತಿತ್ತು. ಉಪಚುನಾವಣೆ ಶಾಂತಿಯುತವಾಗಿ ನಡೆಯಿತು. ಸುತ್ತಲೂ ಪೋಲಿಸ್ ಕಣ್ಗಾವಳಿನಲ್ಲಿತ್ತು. ವಾರ್ಡಿನ 1048 ಮತದಾರರ ಪೈಕಿ ಪುರುಷ 398 ಮತ್ತು ಮಹಿಳೆಯರ 386 ಮತಗಳು ಸೇರಿ 784 ಮತ ಚಲಾಯಿಸಿದ್ದಾರೆ’ ಎಂದು ಚುನಾವಣಾಧಿಕಾರಿ ನವೀನ್ ಕುಮಾರ ತಿಳಿಸಿದ್ದಾರೆ.

ಶರಣಮ್ಮ ಅವಿರೋಧ ಆಯ್ಕೆ

ಲಿಂಗಸುಗೂರು ಪುರಸಭೆ ವಾರ್ಡ್19ರ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶರಣಮ್ಮ ಅಮರಪ್ಪ ಕೊಡ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನಿಂದ 5 ಅಭ್ಯರ್ಥಿಗಳು, ಬಿಜೆಪಿಯಿಂದ ಒಬ್ಬರು ನಾಮಪತ್ರ ಸಲ್ಲಿಸಿದ್ದರು. ಕೊನೆಯ ಕ್ಷಣದಲ್ಲಿ ಎಲ್ಲ ಅಭ್ಯರ್ಥಿಗಳು ನಾಮಪತ್ರ ಹಿಂದಕ್ಕೆ ಪಡೆದ ಕಾರಣ ಶರಣಮ್ಮ ಅವಿರೋಧ ಆಯ್ಕೆಯಾಗಿದ್ದಾರೆ.

ರಾಯಚೂರು ನಗರಸಭೆಯ ವಾರ್ಡ್ ನಂಬರ್ 12ರ ಉಪ ಚುನಾವಣೆಯ ಹಿನ್ನೆಲೆಯಲ್ಲಿ ನಗರದ ಪರಕೋಟ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 70 ವರ್ಷದ ರೆಹಮತಬೀ ಮತದಾನ ಮಾಡಿ ಶಾಹಿ ಗುರುತು ತೋರಿಸಿದರು
ಸಿಂಧನೂರಿನ ವಾರ್ಡ್ ನಂಬರ್ 22ರ ಉಪ ಚುನಾವಣೆ ಪ್ರಯುಕ್ತ ಸೇವಾ ಭಾರತಿ ಶಾಲೆಯ 22 ನೇ ಮತಗಟ್ಟೆ ಕೇಂದ್ರದಲ್ಲಿ ಮತದಾರರು ಸಾಲಾಗಿ ನಿಂತು ಮತ ಚಲಾಯಿಸಿದ
ದೇವದುರ್ಗದ ಬಾಪೂಜಿ ವಾರ್ಡ್ 5 ಉಪ ಚುನಾವಣೆಯ ಪ್ರಯುಕ್ತ ಬಾಪೂಜಿ ಪಾಠ ಶಾಲೆಯಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಮತಹಕ್ಕು ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿದ್ದ ಮತದಾರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.