ADVERTISEMENT

ಮೂರು ವರ್ಷಾದ್ರೂ ಪಿಂಚಣಿ ಬರವಲ್ದು

ಅಧಿಕಾರಿಗಳಿಗೆ ಕೇಳುತ್ತಿಲ್ಲ ಅಡವಿಭಾವಿ ಲಕ್ಷ್ಮವ್ವನ ಅಳಲು

ನಾಗರಾಜ ಚಿನಗುಂಡಿ
Published 19 ಆಗಸ್ಟ್ 2019, 19:31 IST
Last Updated 19 ಆಗಸ್ಟ್ 2019, 19:31 IST
ಲಕ್ಷ್ಮವ್ವ ದುರಗಪ್ಪ
ಲಕ್ಷ್ಮವ್ವ ದುರಗಪ್ಪ   

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಅಡವಿಭಾವಿ ಗ್ರಾಮದ ಹಿರಿಯಜೀವಿ ಲಕ್ಷ್ಮವ್ವ ಅವರಿಗೆ ಪಿಂಚಣಿ ಬರುತ್ತಿಲ್ಲ ಎಂದು ಅಸಹಾಯಕರಾಗಿ ಕಣ್ಣೀರು ಹಾಕುತ್ತಿರುವುದನ್ನು ನೋಡಿದರೆ ಎಂಥವರಿಗೂ ಮನಕಲುಕುತ್ತದೆ.

ಮೂರು ವರ್ಷಗಳ ಹಿಂದೆ ತಿಂಗಳಿಗೆ ಎರಡು ನೂರು ರೂಪಾಯಿ ಪಿಂಚಣಿಯನ್ನು ಅಂಚೆಯಣ್ಣ ತಂದು ಕೊಡುತ್ತಿದ್ದರು. ಇದ್ದಕ್ಕಿದ್ದಂತೆ ನಿಂತು ಹೋಗಿದೆ. ‘ಸಂಧ್ಯಾಸುರಕ್ಷಾ ಯೋಜನೆ’ಯಡಿ ವಯೋವೃದ್ಧರಿಗೆ ನೀಡುತ್ತಿದ್ದ ಮಾಸಾಶನ ಎರಡು ಬಾರಿ ಪರಿಷ್ಕರಣೆಯಾಗಿದೆ. ಆದರೆ, ಲಕ್ಷ್ಮವ್ವ ಅವರಿಗೆ ನಯಾಪೈಸೆ ಕೈಗೆ ಸೇರುತ್ತಿಲ್ಲ. ಗ್ರಾಮದಲ್ಲಿ ಇದೇ ವಯಸ್ಸಿನವರು ಪಿಂಚಣಿ ಪಡೆಯುವುದನ್ನು ನೋಡಿದಾಗೊಮ್ಮೆ ಜನರ ಎದುರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಪಿಂಚಣಿ ಬರುತ್ತಿಲ್ಲ ಎಂದು ಲಿಂಗಸುಗೂರಿನ ತಹಸೀಲ್ದಾರ್‌ ಕಚೇರಿಗೆ ಮತ್ತು ಗುರುಗುಂಟಾ ನಾಡಕಚೇರಿಗೆ ಹೋಗಿ ಆಧಾರ್‌ ಸಂಖ್ಯೆ ಮತ್ತು ಬ್ಯಾಂಕ್‌ ಪಾಸ್‌ಬುಕ್‌ ಕೊಟ್ಟು ಬಂದಿದ್ದರೂ ಮಾಸಾಶನ ಮಾತ್ರ ಬರುತ್ತಿಲ್ಲ. ‘ಸರ್ಕಾರದಿಂದಲೆ ಪಿಂಚಣಿ ಮಂಜೂರು ಆಗಿಲ್ಲ ಎನ್ನುವ ಕಾರಣವನ್ನು ಅಂಚೆಯಣ್ಣ ಹೇಳುತ್ತಿದ್ದಾರೆ. ಕಚೇರಿಗಳಿಗೆ ಹೋಗಿ ಹೇಳಿದರೆ, ಸ್ವಲ್ಪ ತಿಂಗಳು ಕಾಯಬೇಕು ಬರುತ್ತದೆ ಎಂದು ಹೇಳಿ ವಾಪಸ್‌ ಕಳಿಹಿಸುತ್ತಿದ್ದಾರೆ. ತಿಂಗಳುಗಳು ವರ್ಷಗಳಾಗಿ ಬದಲಾದರೂ ಪಿಂಚಣಿ ಮಾತ್ರ ಬರುತ್ತಿಲ್ಲ’ ಎಂದು ಲಕ್ಷ್ಮವ್ವ ಅವರು ಕಣ್ಣೀರಿಡುತ್ತಿದ್ದಾರೆ.

ADVERTISEMENT

ಪತಿ ದುರಗಪ್ಪ ಅವರಿಗೆ ಪ್ರತಿ ತಿಂಗಳು ಮಾಸಾಶಾನ ₹1 ಸಾವಿರ ಕೈಸೇರುತ್ತಿದೆ. ಅದರಲ್ಲಿಯೇ ದಿನದ ಖರ್ಚಿಗೆ ಏನಾದರೂ ಹಣ ಬೇಕಾದರೆ ಪತಿಗೆ ಭಾರವಾಗಿ ಕೇಳಬೇಕು ಎನ್ನುವ ಅಳಲು ಲಕ್ಷ್ಮಮ್ಮ ಅವರದ್ದು. ಇಬ್ಬರು ಗಂಡು ಮಕ್ಕಳಿದ್ದು, ಒಬ್ಬರು ಅಂಗವಿಕಲ. ಇನ್ನೊಬ್ಬ ಮಗ ಮನೆ ತೊರೆದು ಹೋಗಿದ್ದಾರೆ. ನಾಲ್ಕು ಎಕರೆ ಜಮೀನಿದ್ದು, ಬರಗಾಲ ಆವರಿಸಿರುವುದರಿಂದ ಯಾವುದೇ ಬೆಳೆ ಬೆಳೆದಿಲ್ಲ. ಜೀವನಕ್ಕೆ ಆಧಾರವಾಗಬೇಕಿದ್ದ ಮಾಸಾಶನದ ಚಿಂತೆಯಲ್ಲಿ ಲಕ್ಷ್ಮಮ್ಮ ಕಾಲ ಕಳೆಯುತ್ತಿದ್ದಾರೆ.

ಅಡವಿಭಾವಿ ಗ್ರಾಮದ ಜನತಾ ನಿವೇಶನದಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಲಕ್ಷ್ಮವ್ವನ ಅಳಲು ಕೇಳಿದ ಗ್ರಾಮದ ಜನರು ಕೂಡಾ ಅಸಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ‘ಇಂಥವರಿಗೆ ಪಿಂಚಣಿ ಕೊಡದಿದ್ದರೆ ಸರ್ಕಾರವು ಯೋಜನೆ ಮಾಡಿ ಏನು ಉಪಯೋಗ. ಸರಿಯಾಗಿ ನಡೆಯುವುದಕ್ಕೆ ಸಾಧ್ಯವಿಲ್ಲದ, ಮಕ್ಕಳಿದ್ದರೂ ನಿರ್ಗತಿಕರಾಗಿ ಬದುಕುತ್ತಿರುವವರಿಗೆ ಅಧಿಕಾರಿಗಳು ಮನೆ ಬಾಲಿಗೆ ಬಂದು ಪಿಂಚಣಿ ಕೊಡಿಸಬೇಕು’ ಎನ್ನುತ್ತಿದ್ದಾರೆ.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೂಲಕ ಲಕ್ಷ್ಮವ್ವನ ಪರಿಸ್ಥಿತಿ ಪರಿಶೀಲಿಸಿ, ಬಾಕಿ ಇರುವ ಪಿಂಚಣಿ ಕೊಡುವ ವ್ಯವಸ್ಥೆಯನ್ನು ಲಿಂಗಸುಗೂರು ತಹಶೀಲ್ದಾರ್‌ ಅವರು ಮಾಡಬೇಕು ಎನ್ನುವುದು ಗ್ರಾಮಸ್ಥರ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.