ರಾಯಚೂರು: ಮಾಂಗಲ್ಯ ಶಾಪಿಂಗ್ ಮಾಲ್ ಉದ್ಘಾಟನೆಗೆ ಆಗಮಿಸಿದ್ದ ನಟಿಯರಾದ ಆಶಿಕಾ ರಂಗನಾಥ ಹಾಗೂ ಮೇಘಾನಾ ಶೆಟ್ಟಿ ಅವರನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರಿಂದ ನಗರದ ಚಂದ್ರಮೌಳೇಶ್ವರ ವೃತ್ತದಲ್ಲಿ ಭಾರಿ ಸಂಚಾರ ಒತ್ತಡ ಉಂಟಾಗಿ ಸಂಚಾರ ಸುಗಮಗೊಳಿಸಲು ಪೊಲೀಸರು ಪ್ರಯಾಸ ಪಡಬೇಕಾಯಿತು.
ಆಂಬುಲನ್ಸ್ ಸಂಚಾರಕ್ಕೂ ಅವಕಾಶ ಇಲ್ಲದಂತಾಗಿ ವಾಹನಗಳು ನಿಂತಲ್ಲೇ ನಿಂತ ಕಾರಣ ಇನ್ನಷ್ಟು ಸಮಸ್ಯೆ ಆಯಿತು. ಅನೇಕ ಜನ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡು ತಾಸು ಗಟ್ಟಲೆ ಮಾನಸಿಕ ಹಿಂಸೆ ಅನುಭವಿಸಿದರು.
ಚಂದ್ರಮೌಳೇಶ್ವರ ವೃತ್ತದಲ್ಲಿ ಒಬ್ಬರು ಪೊಲೀಸ್ ಕಾನ್‌ಸ್ಟೆಬಲ್ ಇದ್ದರೂ ಸಂಚಾರ ನಿಯಂತ್ರಣ ಸಾಧ್ಯವಾಗಲಿಲ್ಲ. ಹೀಗಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದು ವಾಹನಗಳ ಸಂಚಾರ ನಿಯಂತ್ರಿಸಿದರು. ಏಕ ಮುಖ ಸಂಚಾರದ ಮಾರ್ಗಗಳಲ್ಲಿ ದೂರದಲ್ಲೇ ವಾಹನಗಳನ್ನು ತಡೆದು ನಿಲ್ಲಿಸಿ ವಾಹನಗಳು ಮುಂದೆ ಸಾಗುವಂತೆ ಮಾಡಿದರು. ನಂತರ ನಿಧಾನವಾಗಿ ಸಂಚಾರ ತಿಳಿಕೊಂಡಿತು.
ಮಾಲ್ ಎದುರು ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಹಾಗೂ ವಿಶೇಷ ರಿಯಾಯಿತಿಯ ಆಕರ್ಷಣೆಗೆ ಒಳಗಾಗಿ ಮಾಲ್‌ಗೆ ಖರೀದಿಗೆ ಬಂದಿದ್ದ ಗ್ರಾಹಕರನ್ನು ನಿಯಂತ್ರಿಸುವುದು ಕಷ್ಟವಾಯಿತು. ಹೀಗಾಗಿ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಜನರತ್ತ ಬೆತ್ತ ಬೀಸಬೇಕಾಯಿತು.
ಮಾಲ್ ಮಾಲೀಕರು ತೆಲುಗು ಭಾಷೆಯಲ್ಲಿ ಫಲಕ ಹಾಕಿದ್ದರಿಂದ ಕನ್ನಡಿಗರನ್ನು ಕೆರಳಿಸಿತು. ಇದರಿಂದ ಕನ್ನಡ ಸಂಘಟನೆಗಳು ಸ್ಥಳಕ್ಕೆ ಬಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ತೆಲುಗು ಭಾಷೆಯಲ್ಲಿದ್ದ ನಾಮಫಲಕ ತೆರವುಗೊಳಿಸಿದ ನಂತರ ಪರಿಸ್ಥಿತಿ ತಿಳಿಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.