ADVERTISEMENT

ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಿಸಿದ ಮಸ್ಕಿ ಜನತೆ

30,606 ಮತಗಳ ಅಂತರದೊಂದಿಗೆ ಬಸನಗೌಡ ಜಯಭೇರಿ

​ಪ್ರಜಾವಾಣಿ ವಾರ್ತೆ
Published 2 ಮೇ 2021, 14:52 IST
Last Updated 2 ಮೇ 2021, 14:52 IST

ರಾಯಚೂರು: ರಾಜ್ಯದಲ್ಲಿ ಕುತೂಹಲ ಕೆರಳಿಸಿದ್ದ ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕ್ಷೇತ್ರದ ಜನರು ಬಸನಗೌಡ ತುರ್ವಿಹಾಳ ಅವರನ್ನು ಗೆಲ್ಲಿಸಿದ್ದಾರೆ.

ಹ್ಯಾಟ್ರಿಕ್‌ ಗೆಲುವು ಮುಗಿದು ನಾಲ್ಕನೇ ಬಾರಿ ಸ್ಪರ್ಧಿಸಿದ್ದ ಪ್ರತಾಪಗೌಡ ಪಾಟೀಲ ಅವರಿಗೆ ಕ್ಷೇತ್ರದ ಜನರು ‘ಪಾಠ’ ಕಲಿಸಿದ್ದಾರೆ. ಬಿಜೆಪಿ ಸರ್ಕಾರ ಆಡಳಿತಕ್ಕೆ ತಂದು ಸಚಿವ ಸ್ಥಾನ ಪಡೆಯಬೇಕು ಎನ್ನುವ ಮುಂದಾಲೋಚನೆಯಲ್ಲಿದ್ದ ಪ್ರತಾಪಗೌಡ ಅವರನ್ನು ‘ಮಾಜಿ’ ಸ್ಥಾನದಲ್ಲಿ ಕುಳ್ಳಿರಿಸಿದ್ದಾರೆ.

ಉಪಚುನಾವಣೆ ಆರಂಭದಲ್ಲಿಯೇ ಕ್ಷೇತ್ರದಾದ್ಯಂತ ಬಿಜೆಪಿ ಆಡಳಿತ ಹಾಗೂ ಪ್ರತಾಪಗೌಡ ವಿರುದ್ಧದ ಅಲೆ ಜನಸಾಮಾನ್ಯರಲ್ಲಿ ಜೋರಾಗಿ ಕೇಳಿಬಂದಿತ್ತು. ಈ ಬಗ್ಗೆ ಸುಳಿವು ಪಡೆದಿದ್ದ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಹಲವು ತಂತ್ರಗಳನ್ನು ರೂಪಿಸಿ ಚುನಾವಣೆ ಪ್ರಚಾರ ಮಾಡಿದರೂ ಫಲ ಸಿಗಲಿಲ್ಲ. ಈ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ಅಭ್ಯರ್ಥಿ ಎಂದು ತಿಳಿದು ಮತ ಕೊಡಿ ಎಂದು ಬಹಿರಂಗ ಸಭೆಯಲ್ಲಿಯೇ ಕೋರಿದ್ದಕ್ಕೆ ಮತದಾರರು ಮನಸ್ಸು ಬದಲಾಯಿಸಿಕೊಳ್ಳಲಿಲ್ಲ.

ADVERTISEMENT

ಮಸ್ಕಿ ಕ್ಷೇತ್ರದ ಮತದಾರರ ಮನ ಪರಿವರ್ತನೆಯನ್ನೇ ಗುರಿ ಮಾಡಿಕೊಂಡಿದ್ದ ಬಿಜೆಪಿ, ಹಲವು ತಂತ್ರಗಳನ್ನು ಪ್ರಯೋಗಿಸಿತು. ಬೂತ್‌ಮಟ್ಟದಲ್ಲಿ ಮತದಾರರನ್ನು ಮರಳಿ ಮರಳಿ ಭೇಟಿಮಾಡುವುದು, ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸುವ ಭರವಸೆ ನೀಡುವುದು ಹಾಗೂ ಪಕ್ಕಾ ಕಾಂಗ್ರೆಸ್‌ ಮತದಾರರನ್ನು ಸೆಳೆಯುವುದಕ್ಕಾಗಿ ಹಣದ ಆಮಿಷ ಒಡ್ಡಿದ ಪ್ರಕರಣಗಳು ಕೆಲವೆಡೆ ಬಯಲಾದವು. ಇವೆಲ್ಲವೂ ಫಲಿಸುತ್ತಿಲ್ಲ ಎಂಬುದು ಮತದಾನ ಒಂದು ವಾರ ಇರುವಾಗ ಅರಿವಿಗೆ ಬಂತು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಸ್ಕಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಕ್ಷೇತ್ರವಾರು ಬಹಿರಂಗ ಸಭೆಗಳನ್ನು ನಡೆಸಿ ಸರ್ಕಾರದಿಂದ ವಿವಿಧ ಕೆಲಸಗಳನ್ನು ಮಾಡಿಕೊಡುವ ಭರವಸೆ ನೀಡಿದರು. ಇದಲ್ಲದೆ ವೀರಶೈವ ಲಿಂಗಾಯತ, ವಾಲ್ಮೀಕಿನಾಯಕ, ಹಾಲುಮತ, ಕಬ್ಬಲಿಗ ಸೇರಿದಂತೆ 20 ಸಮುದಾಯದ ಮುಖಂಡರೊಂದಿಗೆ ಸಂವಾದ ನಡೆಸಿದರು. ಉಪಚುನಾವಣೆ ಮುಗಿಯುತ್ತಿದ್ದಂತೆ ಸಮುದಾಯದ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.

ರಾಜ್ಯ ಸಚಿವ ಸಂಪುಟದ ಬಿ.ಸಿ.ಪಾಟೀಲ, ಆರ್‌.ಅಶೋಕ, ಬೈರತಿ ಬಸವರಾಜ ಸೇರಿದಂತೆ ಅನೇಕ ಸಚಿವರು ಮಸ್ಕಿ ಕ್ಷೇತ್ರದಲ್ಲಿಯೇ ಉಳಿದು ಪ್ರಚಾರ ಮಾಡಿದ್ದರು. ಅಧಿಕಾರ ಶಕ್ತಿಯೂ ಸೇರಿದಂತೆ ಹಲವು ಭರವಸೆಗಳನ್ನು ಮುಂದಿಟ್ಟರು ಮಸ್ಕಿ ಕ್ಷೇತ್ರದ ಜನರು ತಮ್ಮ ನಿಲುವು ಬದಲಾಯಿಸಿಕೊಳ್ಳದಿರುವುದು ಗಮನಾರ್ಹ.

ಸ್ವಯಂಕೃತ: ಮಸ್ಕಿ ಉಪಚುನಾವಣೆ ಘೋಷಣೆ ಆಗುತ್ತಿದ್ದಂತೆ ಬಿಜೆಪಿ ನಾಯಕರು ಕೆಲವು ಸ್ವಯಂಕೃತ ತಪ್ಪುಗಳನ್ನು ಮಾಡಿಕೊಂಡಿದ್ದು ಕೂಡಾ ಸೋಲಿಗೆ ಕಾರಣವಾಯಿತು. ಹಲವು ತಿಂಗಳುಗಳಿಂದ ಕ್ಷೇತ್ರದಲ್ಲಿ ಪಕ್ಷದ ಪರ ಪ್ರಚಾರದಲ್ಲಿ ತೊಡಗಿದ್ದ ಸ್ಥಳೀಯ ಕಾರ್ಯಕರ್ತರನ್ನು ಕಡೆಗಣಿಸಿ, ಹೊರ ಜಿಲ್ಲೆಗಳಿಂದ ಬಂದಿದ್ದ ಕಾರ್ಯಕರ್ತರು ಉಪಚುನಾವಣೆ ಪ್ರಚಾರದ ಕಾರುಬಾರು ಪಡೆದರು. ಪ್ರಚಾರದ ಕಾರಿಗೆ ಇಂಧನ ತುಂಬಿಕೊಳ್ಳುವುದಕ್ಕೂ ಸ್ಥಳೀಯ ಕಾರ್ಯಕರ್ತರು ಪರದಾಡುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗಿತ್ತು. ಮತದಾನ ಎರಡು ಬಾಕಿ ಇರುವಾಗ ಈ ತಪ್ಪಿನ ಅರಿವಾದರೂ ಸಾವರಿಸಿಕೊಳ್ಳಲಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.