ADVERTISEMENT

ರಾಯಚೂರು: ಶುದ್ಧ ಜೀವ ಜಲಕ್ಕೆ ಪರಿತಪಿಸುತ್ತಿರುವ ಜನ

ಚಂದ್ರಕಾಂತ ಮಸಾನಿ
Published 1 ಏಪ್ರಿಲ್ 2024, 5:49 IST
Last Updated 1 ಏಪ್ರಿಲ್ 2024, 5:49 IST
ಮಸ್ಕಿ ಪಟ್ಟಣದ 17ನೇ ವಾರ್ಡ್‌ನಲ್ಲಿ ಪುರಸಭೆಯಿಂದ ನಿರ್ಮಿಸಿದ್ದ ನೀರು ಶುದ್ದೀಕರಣ ಘಟಕ ಪಾಳು ಬಿದ್ದಿದೆ
ಮಸ್ಕಿ ಪಟ್ಟಣದ 17ನೇ ವಾರ್ಡ್‌ನಲ್ಲಿ ಪುರಸಭೆಯಿಂದ ನಿರ್ಮಿಸಿದ್ದ ನೀರು ಶುದ್ದೀಕರಣ ಘಟಕ ಪಾಳು ಬಿದ್ದಿದೆ   

ರಾಯಚೂರು: ಜಿಲ್ಲೆಯಲ್ಲಿ ಬೆಂಕಿ ಬಿಸಿಲು ಆವರಿಸಿದೆ. ಕೃಷ್ಣಾ, ತುಂಗಭದ್ರಾ ನದಿಗಳು ಬತ್ತಿ ಬರಿದಾಗಿವೆ. ಕಾಲುವೆಗಳ ಮೂಲಕ ಸಂಗ್ರಹಿಸಲಾದ ಕೆರೆಗಳಲ್ಲಿನ ನೀರೇ ಬಹುತೇಕ ಗ್ರಾಮಗಳಿಗೆ ಆಸರೆಯಾಗಿದೆ. ಜಿಲ್ಲೆಯಲ್ಲಿ ಹಲವು ಕಾರಣಗಳಿಂದಾಗಿ ಅಶುದ್ಧ ನೀರಿನ ಘಟಕಗಳು ಸ್ಥಗಿತಗೊಂಡಿರುವ ಕಾರಣ ಗ್ರಾಮೀಣ ಪ್ರದೇಶದ ಜನ ಶುದ್ಧ ಜೀವ ಜಲಕ್ಕೆ ಪರಿತಪಿಸುವಂತಾಗಿದೆ.

ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳು ಎಸಿ ಕಚೇರಿಯಲ್ಲಿ ಕುಳಿತು ಸಭೆಗಳನ್ನು ನಡೆಸುತ್ತಿದ್ದಾರೆಯೇ ಹೊರತು ಕೆಟ್ಟು ಹೋಗಿರುವ ನೀರಿನ ಘಟಕಗಳನ್ನು ದುರಸ್ತಿ ಪಡಿಸಿ ಸಾರ್ವಜನಿಕರ ಅನುಕೂಲ ಮಾಡಿಕೊಡಲು ಆಸಕ್ತಿ ತೋರಿಸುತ್ತಿಲ್ಲ. ಶುದ್ಧ ನೀರಿನ ಘಟಕಗಳನ್ನು ನಿರ್ವಹಣೆ ಮಾಡಬೇಕಾದ ಗ್ರಾಮ ಪಂಚಾಯಿತಿಗಳೂ ತಾತ್ಸಾರ ಮನೋಭಾವ ತಾಳಿರುವ ಕಾರಣ ಜನ ನಿತ್ಯ ಹಿಂಸೆ ಅನುಭವಿಸಬೇಕಾಗಿದೆ.

ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಚುನಾವಣೆ ಸಿದ್ಧತೆ, ಪರೀಕ್ಷೆಗಳ ತಯಾರಿ ಹಾಗೂ ಜಯಂತಿ ಆಚರಣೆಗಳಲ್ಲೇ ಮುಳುಗಿರುವುದರಿಂದ ಕುಡಿಯುವ ನೀರಿನ ಗಂಭೀರ ಸಮಸ್ಯೆಗಳಿಗೆ ಸ್ಪಂದಿಸುವವರೇ ಇಲ್ಲವಾಗಿದ್ದಾರೆ.

ADVERTISEMENT

ಕವಿತಾಳ ಸುತ್ತಮುತ್ತಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಜಲ ಶುದ್ದೀಕರಣ ಘಟಕಗಳು ಪಾಳು ಬಿದ್ದಿವೆ. ಗ್ರಾಮೀಣ ಭಾಗದ ಜನರಿಗೆ ಅಶುದ್ದ ನೀರು ಕುಡಿಯುವುದು ಅನಿವಾರ್ಯವಾಗಿದೆ.
ನಿರ್ವಹಣೆ ಕೊರತೆ, ಕಳಪೆ ಗುಣಮಟ್ಟದ ಯಂತ್ರಗಳ ಅಳವಡಿಕೆಯಿಂದ ಪದೇ ಪದೇ ಹಾಳಾಗುತ್ತಿವೆ. ಮಳೆ ಕೊರತೆಯಿಂದ ಅಂತರ್ಜಲ ಕುಸಿತ ಹಾಗೂ ಕೊಳವೆ ಬಾವಿಗಳಲ್ಲಿ ಹೆಚ್ಚಿದ ಫ್ಲೋರೈಡ್ ಮತ್ತು ಆರ್ಸೆನಿಕ್ ಅಂಶಗಳಿಂದ ಜಲ ಶುದ್ದೀಕರಣ ಘಟಕದ ಯಂತ್ರಗಳು ಸಮಪರ್ಕವಾಗಿ ಕಾರ್ಯನಿರ್ವಹಿಸುತ್ತಿಲ್ಲ.
ಹಿರೇಹಣಿಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಸೇನಪುರ ಮತ್ತು ಲಕ್ಷ್ಮೀನಾರಾಯಣ ಕ್ಯಾಂಪ್ (73) ನಲ್ಲಿ ಜಲ ಶುದ್ದೀಕರಣ ಘಟಕಗಳು ಮುಚ್ಚಿ ವರ್ಷಗಳೇ ಕಳೆದಿವೆ. ಕೇವಲ ತೋರಿಕೆಗೆ ಮತ್ತು ದಾಖಲೆಗೆ ಮಾತ್ರ ಸೀಮಿತವಾಗಿವೆ. ಇಲ್ಲಿನ ನಿವಾಸಿಗಳು 6 ಕಿ.ಮೀ. ದೂರದ ಕವಿತಾಳದಿಂದ ನೀರು ಹೊತ್ತು ತರಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಮಸ್ಕಿ ತಾಲ್ಲೂಕಿನ ನೆಲಕೊಳ ಗ್ರಾಮದಲ್ಲಿ ಜಲ ಶುದ್ದೀಕರಣ ಘಟಕ ಇಲ್ಲ. ಹೀಗಾಗಿ ಕೆಲವು ಜನರು ಅಮೀನಗಡದಿಂದ ಶುದ್ಧ ನೀರು ತರುತ್ತಾರೆ. ಕಾಚಾಪುರ ಮತ್ತು ಪರಸಾಪುರ ಗ್ರಾಮಗಳಲ್ಲಿನ ಘಟಕಗಳು ಸ್ಥಗಿತಗೊಂಡಿವೆ.

ಯಂತ್ರಗಳು ಪದೇ ಪದೇ ಹಾಳಾಗುತ್ತಿರುವ ಕಾರಣ ಘಟಕದ ನಿರ್ವಹಣೆಗೆ ಯಾರೂ ಮುಂದೆ ಬರಲಿಲ್ಲ. ಹೀಗಾಗಿ ವರ್ಷಗಳಿಂದ ಬಂದ್ ಆಗಿದೆ. ಬಹುತೇಕರು ತಮ್ಮ ಮನೆಗಳಲ್ಲಿ ವಾಟರ್ ಫಿಲ್ಟರ್ ಅಳವಡಿಸಿಕೊಂಡಿದ್ದು ಕೆಲವರು ಬೇರೆ ಊರುಗಳಿಂದ ಶುದ್ದ ನೀರು ತರುತ್ತಾರೆʼ ಎಂದು ಕ್ಯಾಂಪ್ ನಿವಾಸಿ ರಮೇಶ ಹೇಳುತ್ತಾರೆ.

‘ಯಂತ್ರಗಳನ್ನು ಅಳವಡಿಸಿದ ಖಾಸಗಿ ಕಂಪನಿ ಘಟಕಗಳನ್ನು ಸ್ಥಳೀಯ ಆಡಳಿತಕ್ಕೆ ವಹಿಸಿದೆ. ಖಾಸಗಿ ವ್ಯಕ್ತಿಗಳಿಗೆ ನಿರ್ವಹಣೆಗೆ ನೀಡಿದ್ದು ವಿದ್ಯುತ್ ಬಿಲ್ ಕಳೆದು ಯಂತ್ರದ ದುರಸ್ತಿಗೆ ಹಣ ಸಾಕಾಗುವುದಿಲ್ಲ. ಹೀಗಾಗಿ ನಿರ್ವಹಣೆಗೆ ಸಮಸ್ಯೆ ಉಂಟಾಗುತ್ತಿದೆʼ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

ಶುದ್ಧ ನೀರು ಪೂರೈಕೆಗೆ ತಾತ್ಸಾರ

ಲಿಂಗಸುಗೂರು: ತಾಲ್ಲೂಕಿನ ಕಾಳಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾಲಿಬೆಂಚಿ ಸೇರಿದಂತೆ ತಾಲ್ಲೂಕಿನಾದ್ಯಂತ ಶುದ್ಧ ಕುಡಿಯುವ ನೀರಿನ ಘಟಕ ಅನುಷ್ಠಾನ ಮಾಡುವಲ್ಲಿ ಆಡಳಿತ ತಾತ್ಸಾರ ಮನೋಭಾವ ಹೊಂದಿದೆ.

ದಶಕದ ಹಿಂದೆ ಗ್ರಾಮೀಣ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ತಾಲ್ಲೂಕಿಗೆ 115 ಶುದ್ಧ ನೀರಿನ ಘಟಕಗಳನ್ನು ಮಂಜೂರು ಮಾಡಲಾಗಿತ್ತು. ಈ ಪೈಕಿ 91 ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿವೆ. ಉಳಿದ 24 ಪ್ಲಾಂಟ್ ಆರಂಭ ದಿನದಿಂದಲೇ ಮೂಲೆ ಸೇರಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿವೆ.

ತಾಲ್ಲೂಕಿನ ಜಾಲಿಬೆಂಚಿ ಗ್ರಾಮದ ಹೊರ ವಲಯದಲ್ಲಿ ಸ್ಥಾಪಿಸಿದ ಆರ್.ಒ ಪ್ಲಾಂಟ್ ಗ್ರಾಮಸ್ಥರಿಗೆ ಇಂದಿಗೂ ಒಂದು ಕೊಡ ನೀರು ಪೂರೈಸಿಲ್ಲ. ಇದರೊಂದಿಗೆ ಕಿರು ನೀರು ಸರಬರಾಜು ಯೋಜನೆ ಕೂಡ ನನೆಗುದಿಗೆ ಬಿದ್ದಿದೆ.

‘ಲಿಂಗಸೂರು ತಾಲ್ಲೂಕಿನಲ್ಲಿ ಸ್ಥಗಿತಗೊಂಡಿರುವ 24 ಘಟಕಗಳ ದುರಸ್ತಿ ಮಾಡುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ಅಮರೇಶ ಹೇಳುತ್ತಾರೆ.

6 ತಿಂಗಳಿಂದ ಕೆಟ್ಟು ನಿಂತ ಶುದ್ದೀಕರಣ ಘಟಕ

ಮಸ್ಕಿ: ಪಟ್ಟಣದ 17ನೇ ವಾರ್ಡ್‌ನಲ್ಲಿ ಪುರಸಭೆಯಿಂದ ನಿರ್ಮಿಸಿದ್ದ ನೀರು ಶುದ್ದೀಕರಣ ಘಟಕ ಆರು ತಿಂಗಳನಿಂದ ಕೆಟ್ಟು ನಿಂತಿದೆ. ಈ ವಾರ್ಡ್‌ನ ಜನರು ನೀರಿಗಾಗಿ ಪರದಾಡುವಂತಾಗಿದೆ. ₹ 12 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ನೀರು ಶುದ್ದೀಕರಣ ಘಟಕದ ಯಂತ್ರ ಸಹ ಹಾಳಾಗಿದೆ.

ದುರಸ್ತಿ ಮಾಡಿಸಿ ಅದನ್ನು ಸಾರ್ವಜನಿಕರ ಉಪಯೋಗಕ್ಕೆ ಕೊಡಲು ಪುರಸಭೆ ಆಡಳಿತ ವಿಫಲವಾಗಿದೆ. ಆರು ತಿಂಗಳಿನಿಂದ ನೀರು ಶುದ್ದೀಕರಣ ಘಟಕದ ಸುತ್ತ ಜಾಲಿ ಗಿಡಗಳು ಬೆಳೆದು ನಿಂತಿದ್ದು ಪುರಸಭೆಯ ಕಾರ್ಯವೈಖರಿಗೆ ಸಾಕ್ಷಿಯಾಗಿದೆ.

‘ನೀರು ಶುದ್ಧೀಕರಣ ಘಟಕ ದುರಸ್ತಿಗೊಳಿಸುವಂತೆ ಹಲವಾರು ಬಾರಿ ಪುರಸಭೆಗೆ ಮನವಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ’ ಎಂದು ವಾರ್ಡ್‌ ನಿವಾಸಿ ರವಿಕುಮಾರ ಚಿಗರಿ ದೂರುತ್ತಾರೆ.

9 ಘಟಕಗಳು ಸ್ಥಗಿತ

ಮಾನ್ವಿ: ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ವತಿಯಿಂದ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಒಟ್ಟು 135 ಶುದ್ಧ ಕುಡಿಯುವ ನೀರಿನ ಘಟಕಗಳು ಇವೆ. ಇವುಗಳ‌ ಪೈಕಿ 9 ಘಟಕಗಳು ಸ್ಥಗಿತಗೊಂಡಿವೆ. ಸಮರ್ಪಕ ನಿರ್ವಹಣೆ ಕೊರತೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ನಿರ್ಲಕ್ಷ್ಯ ದಿಂದ ಸಮರ್ಪಕವಾಗಿ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂಬುದು ಗ್ರಾಮಸ್ಥರ ದೂರು.

ಗ್ರಾಮಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಶುದ್ಧ ಕುಡಿಯುವ ನೀರಿನ ಘಟಕಗಳ ವ್ಯವಸ್ಥೆ ಕಲ್ಪಿಸಬೇಕು. ಸ್ಥಗಿತಗೊಂಡಿರುವ ಘಟಕಗಳನ್ನು ಪುನಶ್ಚೇತನಗೊಳಿಸಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು' ಎಂದು ಸಾಮಾಜಿಕ ಕಾರ್ಯಕರ್ತ ಎಂ.ಶರಣಕುಮಾರ ಮನವಿ ಮಾಡಿದ್ದಾರೆ.

3 ವರ್ಷವಾದರೂ ದುರಸ್ತಿ ಇಲ್ಲ


ಶಕ್ತಿನಗರ: ಮೂರು ವರ್ಷಗಳಿಂದ ನೀರಿನ ಶುದ್ದೀಕರಣ ಘಟಕ ಕೆಟ್ಟು ಹೋಗಿದೆ. ದುರಸ್ತಿಗಾಗಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ದುರಸ್ತಿಗೆ ಮುಂದಾಗುತ್ತಿಲ್ಲ. ಇದರಿಂದಾಗಿ ಶಾಖವಾದಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

ನಿತ್ಯ 4 ಕಿ.ಮೀ. ದೂರ ಹೋಗಿ ನೀರು ತರುವ ಪರಿಸ್ಥಿತಿ ಎದುರಾಗಿದೆ. ಕೂಡಲೇ ಜಲ ಶುದ್ದೀಕರಣ ಘಟಕ ದುರಸ್ತಿಗೊಳಿಸಬೇಕು. ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಒದಗಿಸಬೇಕು ಎಂದು ಶಾಖವಾದಿ ಗ್ರಾಮಸ್ಥ ಮಲ್ಲೇಶ ಒತ್ತಾಯಿಸುತ್ತಾರೆ.

ಪ್ರಕಾಶ ಮಸ್ಕಿ, ಮಂಜುನಾಥ ಎನ್ ಬಳ್ಳಾರಿ, ಬಿ.ಎ.ನಂದಿಕೋಲಮಠ, ಉಮಾಪತಿ ರಾಮೋಜಿ, ಬಸವರಾಜ ಭೋಗಾವತಿ

ಶಕ್ತಿನಗರ ಸಮೀಪದ ಶಾಖವಾದಿ ಗ್ರಾಮದಲ್ಲಿ ಜಲ ಶುದ್ದೀಕರಣ ಘಟಕ ಹಾಳಾಗಿದೆ
ಲಿಂಗಸುಗೂರು ತಾಲ್ಲೂಕಿನ ಜಾಲಿಬೆಂಚಿಯ ಮೇಲೆತ್ತರದ ನೀರು ಸಂಗ್ರಹಣಾ ತೊಟ್ಟಿ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಮುಳ್ಳುಕಂಟಿ ಮಧ್ಯೆ ಪಾಳು ಬಿದ್ದಿದೆ
ಕವಿತಾಳ ಸಮೀಪದ ಹುಸೇನಪುರದಲ್ಲಿ ಜಲ ಶುದ್ದೀಕರಣ ಘಟಕ ಬಂದ್ ಆಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.