ಲಿಂಗಸುಗೂರು: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಪ್ರತಿನಿಧಿಗಳು ಸುಳ್ಳು ಹೇಳುತ್ತಿರುವುದು ನೋಡಿದರೆ ನಾಚಿಗೆ ಬರುತ್ತಿದೆ. ಸೇವೆ ಮಾಡಲು ಬಂದಿರುವ ಪ್ರತಿನಿಧಿಗಳು ಸುಳ್ಳು ಹೇಳುವ ಪರಿಪಾಠ ಬಿಡಬೇಕು. ಸತ್ಯ ಸಂಗತಿ ಮೂಲಕ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ರಾಯಚೂರು ನಗರಸಭೆ ಮಾಜಿ ಅಧ್ಯಕ್ಷ ಎ. ಪಾಪರೆಡ್ಡಿ ಮುನ್ನೂರು ಹೇಳಿದರು.
ಗುರುವಾರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಅಲ್ಲಸಂಖ್ಯಾತ ಕಾಪು ಸಮಾಜದ ತಾವು ಪುರಸಭೆ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಸದಸ್ಯರ ಮತ್ತು ಮಾಜಿ ಶಾಸಕ ಡಿ.ಎಸ್ ಹೂಲಗೇರಿ ಆಶೀರ್ವಾದದಿಂದ. ನಿಮ್ಮ ಮೇಲಿಟ್ಟ ಪ್ರೀತಿ ವಿಶ್ವಾಸಕ್ಕೆ ಧಕ್ಕೆ ಆಗದಂತೆ ಹಗಲಿರಳು ವಾರ್ಡ್ ಸಂಚಾರ ಮಾಡಿ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು’ ಎಂದು ಕಿವಿಮಾತು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ಹಿರಿಯ ಮುಖಂಡ ಸಿದ್ಧನಗೌಡ ಪೊಲೀಸ್ ಪಾಟೀಲ ಡಾ. ಶಿವಬಸಪ್ಪ ಹೆಸರೂರು ಮಾತನಾಡಿ, 'ಈ ಹಿಂದೆ ಪುರಸಭೆಗೆ ಶ್ಯಾಮಸುಂದರರೆಡ್ಡಿ, ಶ್ರೀನಿವಾಸರೆಡ್ಡಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಅದೇ, ಕಾಪು ಸಮುದಾಯಕ್ಕೆ ಮತ್ತೊಂದು ಅವಕಾಶ ದೊರೆತಿದ್ದು ಪೂರ್ವಜರ ಪುಣ್ಯ. ಮಾದರಿ ಪುರಸಭೆಯನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಬಾಬುರೆಡ್ಡಿ ಮಾಡಬೇಕು’ ಎಂದು ಸಲಹೆ ನೀಡಿದರು.
ಪುರಸಭೆ ಅಧ್ಯಕ್ಷ ಬಾಬುರೆಡ್ಡಿ ಮುನ್ನೂರು ಮಾತನಾಡಿ, ‘ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಮತದಾರ, ಮಾಜಿ ಶಾಸಕ ಹೂಲಗೇರಿ, ಸದಸ್ಯರ ಆಶೀರ್ವಾದವೇ ಕಾರಣ. ತಾವುಗಳೆಲ್ಲ ಇರಿಸಿದ ಪ್ರೀತಿ, ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಎಲ್ಲ ಸದಸ್ಯರು, ಪ್ರತಿನಿಧಿಗಳು, ಅಧಿಕಾರಿಗಳ ಸಹಕಾರದಿಂದ ಅಗತ್ಯ ಸೌಲಭ್ಯ ಕಲ್ಪಿಸಲು ಪ್ರಯತ್ನಿಸುವೆ. ಹಂತ ಹಂತವಾಗಿ ಮಾದರಿ ಪಟ್ಟಣವನ್ನಾಗಿಸಲು ಹಾಲಿ, ಮಾಜಿ ಶಾಸಕರ ಪಡೆಯುವೆ’ ಎಂದು ಹೇಳಿದರು.
ಸನ್ಮಾನ: ಪುರಸಭೆ ಅಧ್ಯಕ್ಷ ಬಾಬುರೆಡ್ಡಿ ಮುನ್ನೂರು, ಉಪಾಧ್ಯಕ್ಷೆ ಶರಣಮ್ಮ ಕೊಡ್ಲಿ ಪದಗ್ರಹಣ ಕಾರ್ಯಕ್ರಮದ ಕೊನೆಯಲ್ಲಿ ಪಟ್ಟಣದ ವಿವಿಧ ಸಮುದಾಯಗಳ ಮುಖಂಡರು, ಸಂಘ ಸಂಸ್ಥೆ ಪದಾಧಿಕಾರಿಗಳು ಸೇರಿದಂತೆ ಇತರರು ಸತ್ಕರಿಸಿ ಶುಭ ಕೋರಿದರು.
ಉಪಾಧ್ಯಕ್ಷೆ ಶರಣಮ್ಮ ಕೊಡ್ಲಿ, ಸದಸ್ಯರಾದ ದೊಡ್ಡನಗೌಡ ಹೊಸಮನಿ, ರುದ್ರಪ್ಪ ಬ್ಯಾಗಿ, ಶರಣಪ್ಪ ಕೆಂಗೇರಿ. ಶಿವರಾಯ ದೇಗುಲಮಡಿ, ಮುಖಂಡರಾದ ಡಿ.ಎಚ್ ಕಡದಳ್ಳಿ, ರಾಚಪ್ಪ ಬುದ್ದಿನ್ನಿ, ಪ್ರಭುಸ್ವಾಮಿ ಅತ್ನೂರು, ಸಂಜೀವಪ್ಪ ಚಲುವಾದಿ, ಪರಸಪ್ಪ ಹುನಕುಂಟಿ, ಶಿವಾನಂದ ಐದನಾಳ, ಜಿ.ಎನ್ ರೆಡ್ಡಿ, ಮಹೇಂದ್ರರೆಡ್ಡಿ, ಕಾಳಪ್ಪ ಬಡಿಗೇರ, ಶಿವಪ್ಪ ನಾಯಕ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.