ಲಿಂಗಸುಗೂರು: ಧಾರ್ಮಿಕ ಮತ್ತು ಸಾಮಾಜಿಕ ಸೇವೆಯ ಉದ್ದೇಶದಿಂದ ವ್ಯಕ್ತಿ ಮತ್ತು ಧರ್ಮ ಸಂಸ್ಥೆಗಳು ವಕ್ಫ್ ಮಂಡಳಿಗೆ ನೀಡಿದ ಜಮೀನು ವಕ್ಫ್ ಮಂಡಳಿಗೆ ಸೇರಿದ್ದು ಎಂದು 1973-74ರ ಗೆಜೆಟ್ ನೋಟಿಫಿಕೇಷನ್ ಆಧರಿಸಿ ತಾಲ್ಲೂಕಿನಾದ್ಯಂತ ರೈತರ ಪಹಣಿಗಳಲ್ಲಿ ವಕ್ಫ್ ಬೋರ್ಡ್ ಹೆಸರು ಸೇರ್ಪಡೆ ಮಾಡುತ್ತಿರುವುದು ರೈತರಲ್ಲಿ ಆತಂಕ ಸೃಷ್ಠಿಸಿದೆ.
1974ರಲ್ಲಿ ಗೆಜೆಟೀಯರ್‌ನಲ್ಲಿ ಪ್ರಕಟಿಸಿದ್ದರೂ ಕೂಡ ಈಚಿನವರೆಗೆ ಬಹುತೇಕ ರೈತರ ಪಹಣಿಗಳಲ್ಲಿ ವಕ್ಫ್ ಬೋರ್ಡ್ ಹೆಸರು ಇರಲಿಲ್ಲ. ಅಲ್ಲದೆ, ರಾಜ್ಯ ಸರ್ಕಾರ 1974-79ರ ಮಧ್ಯೆ ಇನಾಮದಾರಿ, ಗೇಣಿದಾರ ಪದ್ಧತಿ, ಉಳುಮೆ ಮಾಡುವವರಿಗೆ ಜಮೀನು ಪಟ್ಟಾ ಎಂಬಿತ್ಯಾದಿ ಕಾಯ್ದೆಯಡಿ ಜಮೀನುಗಳು ಹಂಚಿಕೆಯಾಗಿವೆ. 2010ರಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದರೂ ಇಂದಿಗೂ ಸೇರ್ಪಡೆ ಮಾಡಿರಲಿಲ್ಲ.
ತಾಲ್ಲೂಕಿನ ಆನೆಹೊಸೂರು, ಮರಗಂಟನಾಳ, ಚಿತ್ರನಾಳ, ಸಂತೆಕೆಲ್ಲೂರು, ಗುಡಿಹಾಳ, ಮಟ್ಟೂರು, ರೋಡಲಬಂಡ, ಬುದ್ದಿನ್ನಿ, ಗುರುಗುಂಟಾ, ಕೋಠಾ, ಆದಾಪುರ, ಹಿರೆಯರದಿಹಾಳ, ಬೆಳ್ಳಿಹಾಳ, ಮುದಗಲ್ಲ, ನಾಗರಹಾಳ, ಚಿತ್ತಾಪುರ, ಆನ್ವರಿ, ಯರದೊಡ್ಡಿ, ಗೋನವಾಟ್ಲ, ಕಾಟಗಲ್, ಆಶಿಹಾಳ, ಹಲ್ಕಾವಟಗಿ, ಹುನಕುಂಟಿ, ಕರಡಕಲ್ಲ, ಖೈರವಾಡಗಿ, ಜಕ್ಕೇರಮಡು, ಬನ್ನಿಗೋಳ, ಲಿಂಗಸುಗೂರಲ್ಲಿ ವಕ್ಪ್ ಬೋರ್ಡ್ ವಕ್ಫ್ ಆಸ್ತಿಗಳ ಪಟ್ಟಿ ಬಿಡುಗಡೆ ಮಾಡಿದೆ.
ಮೇಲ್ಕಾಣಿಸಿದ ಗ್ರಾಮಗಳು ಸೇರಿದಂತೆ ಇತರೆಡೆ ತಾಲ್ಲೂಕಿನಲ್ಲಿ (ಮಸ್ಕಿ ಹೋಬಳಿ ಒಳಗೊಂಡು) 1813.38 ಎಕರೆ ಜಮೀನು ಮತ್ತು 321 ಆಸ್ತಿ(ಕಟ್ಟಡಗಳು) ಒಳಗೊಂಡಿವೆ. ಕಟ್ಟಡಗಳಿಗೆ ಸಂಬಂಧಿಸಿ ಅಷ್ಟೊಂದು ಗೊಂದಲ ಕೇಳಿ ಬಂದಿಲ್ಲ. ಮುತಾವಲಿಗಳು ಮತ್ತು ಮಸೀದಿ, ಆಶೂರಖಾನ ಇತರೆ ಉಸ್ತುವಾರಿ ನೋಡಿಕೊಳ್ಳುವವರ ಹೆಸರಲ್ಲಿದ್ದ ಜಮೀನುಗಳು ಶೇಕಡ 90ರಷ್ಟು ವಿವಿಧ ಕಾಯ್ದೆಗಳಡಿ ಮಾರಾಟಗೊಂಡಿರುವುದು ದಾಖಲೆಗಳು ದೃಢಪಡಿಸುತ್ತವೆ.
2010ರ ಈಚೆಗೆ ರಾಜ್ಯ ಸರ್ಕಾರ ಹೊರಡಿಸಿದ ಸುತ್ತೋಲೆ ಆಧರಿಸಿ 2011ರಲ್ಲಿ ಪ್ರಾದೇಶಿಕ ಆಯುಕ್ತರು ವಕ್ಫ್ ಬೋರ್ಡ್ ಹೆಸರು ಸೇರ್ಪಡೆಗೆ ಸುತ್ತೋಲೆ ಹೊರಡಿಸಿದ್ದಾರೆ. ಆದರೆ, ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು ಎಲ್ಲ ಆಸ್ತಿಗಳಲ್ಲಿ ಬೋರ್ಡ್ ಹೆಸರು ಸೇರ್ಪಡೆ ಮಾಡದೆ ಮನಸೋ ಇಚ್ಛೆ ತಮಗೆ ಬೇಕಾದ ಜಮೀನು ಹುಡುಕಿ ಸೇರ್ಪಡೆ ಮಾಡಿರುವುದು ಸಾಮಾನ್ಯ ರೈತರಿಗೆ ಬಿಸಿತುಪ್ಪವಾಗಿ ಪರಿಣಿಸಿದೆ.
ತಾಲ್ಲೂಕಿನ ಮುದಗಲ್ಲ ಸರ್ವೆ ನಂಬರ್ 242ರಲ್ಲಿ ಶಾಸಕ ಮಾನಪ್ಪ ವಜ್ಜಲ ಪುತ್ರ ಆಂಜನೇಯ ಹೆಸರು, ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ, ಅಂಕಲಿಮಠದ ಫಕೀರೇಶ್ವರ ಸ್ವಾಮೀಜಿ ಸೇರಿದಂತೆ ಪುರಸಭೆ ರಾಜ್ಯಪಾಲರ ಹೆಸರಲ್ಲಿ ಖರೀದಿಸಿದ ಹಿಸ್ಸಾ ಪಹಣಿಗಳಲ್ಲಿ ಕೂಡ ವಕ್ಫ್ ಹೆಸರು ಸೇರ್ಪಡೆ ಆಗಿದೆ. ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಮೂಲ ಉದ್ದೇಶ ಗಾಳಿಗೆ ತೂರಿ ಸೇರ್ಪಡೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
’ಮುತಾವಲಿ ಮತ್ತು ಸರ್ಕಾರದಿಂದ ವಿವಿಧ ಕಾಯ್ದೆಗಳಡಿ ಮಾಲಿಕತ್ವ ಹೊಂದಿದ ಮಾಲೀಕರು ಹಲವು ಹಂತದಲ್ಲಿ ಮಾರಾಟ ಮಾಡಿಕೊಂಡಿದ್ದಾರೆ. ಬಹುತೇಕ ಜಮೀನುಗಳು ಕೃಷಿಯೇತರ ಜಮೀನಾಗಿ ಪರಿವರ್ತಿತಗೊಂಡು ಬೃಹತ್ ಕಟ್ಟಡಗಳು ತಲೆ ಎತ್ತಿ ನಿಂತಿವೆ. 1974 ರಿಂದ ಏನೊಂದು ಕ್ರಮ ಕೈಗೊಳ್ಳದ ವಕ್ಫ್ ಈಗ ತರಾತುರಿಯಾಗಿ ಪಹಣಿಗಳಲ್ಲಿ ಸೇರ್ಪಡೆ ಮಾಡುತ್ತಿರುವುದು ಯಕ್ಷ ಪ್ರಶ್ನೆಯಾಗಿದೆ’ ಎಂದು ರೈತರು ಅಳಲುತೋಡಿಕೊಂಡಿದ್ದಾರೆ.
ಈ ಕುರಿತು ಹಿರಿಯ ವಕೀಲರಾದ ನಾಗರಾಜ ಗಸ್ತಿ ಅವರನ್ನು ಸಂಪರ್ಕಿಸಿದಾಗ, ‘ವಕ್ಫ್ ಬೋರ್ಡ್ ಕಾಯ್ದೆ 1995 ಮುಂದಿಟ್ಟುಕೊಂಡು 47 ವರ್ಷದ ನಂತರದಲ್ಲಿ ಸಂವಿಧಾನ ಬದ್ಧ ಕಾಯ್ದೆಗಳಡಿ ಯಾವುದೇ ಪ್ರಕ್ರಿಯೆ ನಡೆಸದೇ ತರಾತುರಿಯಲ್ಲಿ ಪಹಣಿಯಲ್ಲಿ ಸೇರ್ಪಡೆ ಮಾಡಿರುವುದು ಕಾನೂನು ವಿರೋಧಿ ಕೃತ್ಯ. ಪಹಣಿಯಲ್ಲಿ ಹೆಸರು ಸೇರ್ಪಡೆ ಮಾಡಲು ಇರುವ ಕಾನೂನು ಉಲ್ಲಂಘನೆ ಮೇಲ್ನೋಟಕ್ಕೆ ಕಂಡುಬರುತ್ತಿದೆ’ ಎಂದು ಹೇಳಿದರು.
ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಶಿವಪುತ್ರಗೌಡ ಪಾಟೀಲ ಮಾತನಾಡಿ, ‘ಗೆಜೆಟ್ ಮುಂದಿಟ್ಟು ಸ್ಪಷ್ಟ ದಾಖಲೆಗಳಿಲ್ಲದೇ ರೈತರ ಪಹಣಿಗಳಲ್ಲಿ ಕಾಯ್ದೆ ಉಲ್ಲಂಘಿಸಿ ಹೆಸರು ಸೇರ್ಪಡೆ ಮಾಡಿರುವುದು ಕಾನೂನು ವಿರೋಧಿ ಕೃತ್ಯ. ಸರಿಪಡಿಸಲು ರಾಜ್ಯ ಸಮಿತಿ ಸರ್ಕಾರಕ್ಕೆ ಗಡುವು ನೀಡಿದೆ. ಸರ್ಕಾರ ಕ್ರಮ ಕೈಗೊಳ್ಳದೇ ಹೋದಲ್ಲಿ ರಾಜ್ಯವ್ಯಾಪಿ ರೈತರ ಸಹಯೋಗದಲ್ಲಿ ಉಗ್ರ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
ಹುಸೇನಿ ಆಲಂ ಆಶುರಖಾನ್ ಮಾಜಿ ಅಧ್ಯಕ್ಷ ಶೇಖಹುಸೇನ್ ಶರೀಫ್ ಮಾತನಾಡಿ, 'ಜಮೀನುಗಳಿಗೆ ಸಂಬಂಧಿಸಿ ವಕ್ಫ್ ಬೋರ್ಡ್ ತೆಗೆದುಕೊಂಡಿರುವ ನಿರ್ಣಯ ಆತಂಕಕಾರಿ ಆಗಿದೆ. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರ ಮುತಾವಲಿ ಇತರೆ ಮುಖ್ಯಸ್ಥರು ವಿವಿಧ ಕಾಯ್ದೆಗಳಡಿ ಪಟ್ಟಾ ಆದೇಶ ಪಡೆದು ಮಾರಾಟ ಮಾಡಿದ್ದಾರೆ. ಅರ್ಧ ಶತಮಾನ ದಾಟಿ ನಮ್ಮದೆಂದು ಹೇಳಿಕೊಳ್ಳುವದರ ಕುರಿತು ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು’ ಎಂದರು.
ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಮಾತನಾಡಿ, '1974-79ರ ಮಧ್ಯೆ ಇನಾಮದಾರಿ, ಗೇಣಿದಾರ ಪದ್ಧತಿ, ಉಳುಮೆ ಮಾಡುವವರಿಗೆ ಜಮೀನು ಪಟ್ಟಾ ಎಂಬಿತ್ಯಾದಿ ಕಾಯ್ದೆಯಡಿ ಜಮೀನುಗಳು ಹಂಚಿಕೆಯಾಗಿವೆ. ಈ ಎಲ್ಲ ಕಾಯ್ದೆ ಉಲ್ಲಂಘಿಸಿ ಗೆಜೆಟ್ ಮುಂದಿಟ್ಟು ತೆಗೆದುಕೊಂಡ ತೀರ್ಮಾನ ರೈತರಿಗೆ ಅನ್ಯಾಯ ಮಾಡಿದಂತಾಗಿದೆ. ಈ ಕುರಿತು ಮುಖ್ಯಮಂತ್ರಿ ಜೊತೆ ಮಾತನಾಡಿ ನ್ಯಾಯ ಒದಗಿಸಲು ಒತ್ತಡ ಹೇರುವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.