ರಾಯಚೂರು: ಕೇಂದ್ರ ಸರ್ಕಾರವು ಪ್ರಾದೇಶಿಕ ಸಮಗ್ರ ಸಹಭಾಗಿತ್ವ (ಆರ್‌ಸಿಇಪಿ) ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಮಾಡಬಾರದು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಬಣ) ಜಿಲ್ಲಾ ಘಟಕ ಸದಸ್ಯರನ್ನು ಪೊಲೀಸರು ಬಂಧಿಸಿ ಆನಂತರ ಬಿಡುಗಡೆಗೊಳಿಸಿದರು.
ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದವು ದೇಶದ ರೈತರ ವಿರೋಧಿಯಾಗಿದೆ. ಆಹಾರ ಭದ್ರತೆ ಇರುವ ರಾಷ್ಟ್ರವು ಇನ್ನು ಮುಂದೆ ಅಭದ್ರತೆ ಅನುಭವಿಸುವ ಪರಿಸ್ಥಿತಿ ಎದುರಾಗಬಹುದು ಎಂದು ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.
ರೈತರು, ಜನಸಾಮಾನ್ಯರು ಹಾಗೂ ಬಡವರ ಹಿತ ರಕ್ಷಣೆ ಮಾಡುವುದಾಗಿ ಶಪಥ ಮಾಡುತ್ತಿದ್ದ ಕೇಂದ್ರ ಸರ್ಕಾರವು ಇದ್ದಕ್ಕಿದ್ದಂತೆ ಹೈನುಗಾರಿಕೆ ಕ್ಷೇತ್ರದ ಮೇಲೆ ಗದಾಪ್ರಹಾರ ಮಾಡುತ್ತಿದೆ. ಹೈನುಗಾರಿಕೆಯನ್ನು ಕೇವಲ ಆರ್ಥಿಕ ದೃಷ್ಟಿಕೋನದಿಂದ ನೋಡಬಾರದು. ಅದರಲ್ಲಿ ಸಾಮಾಜಿಕ ಆಯಾಮಗಳು ಇದ್ದು, ರೈತರು ಮತ್ತು ಗೌಳಿಗರ ಬದುಕಿಗೆ ಆಧಾರವಾಗಿದೆ. ಒಪ್ಪಂದದಿಂದ ಗುಣಮಟ್ಟ ಕಳೆದುಹೋಗುವುದರ ಜತೆಗೆ ದೇಶಿಯ ಹೈನುಗಾರಿಕೆ ವ್ಯವಸ್ಥೆ ಬುಡಮೇಲಾಗುತ್ತದೆ ಎಂದು ತಿಳಿಸಿದರು.
ಇಲ್ಲಿಯವರೆಗೂ ಅಧಿಕಾರಕ್ಕೆ ಬಂದಿರುವ ಸರ್ಕಾರಗಳು ರೈತರು ಮತ್ತು ರೈತರ ಜೀವನಾಧಾರವಾದ ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ಕೆಲಸ ಮಾಡಿವೆ. ರೈತ ವಿರೋಧಿ ಒಪ್ಪಂದಕ್ಕೆ ಸಹಿ ಹಾಕಬಾರದು, ಗ್ರಾಮೀಣ ಭಾಗದ ಜನಜೀವನವು ಬೀದಿಗೆ ಬರುವುದಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ನೀಡಿದ್ದ ಭರವಸೆಗಳನ್ನೆಲ್ಲ ಮಣ್ಣುಪಾಲು ಮಾಡಿರುವ ಸರ್ಕಾರವು ರೈತರಿಗಾಗಿ ಏನೂ ಕೊಡುಗೆ ನೀಡುವುದು ಬೇಕಾಗಿಲ್ಲ. ಹೈನುಗಾರಿಕೆ ವ್ಯವಸ್ಥೆಯನ್ನು ಹಾಳು ಮಾಡುವ ಯೋಜನೆ ಕೈಬಿಡಬೇಕು ಎಂದರು.
ಈ ಒಪ್ಪಂದದಿಂದ ವಿದೇಶಿಯರಿಗೆ ಸಾಕಷ್ಟು ಅನುಕೂಲವಾಗಲಿದೆ. ರೈತರಿಗೆ ಸಂಕಷ್ಟದ ಸ್ಥಿತಿ ಉಂಟಾಗಲಿದೆ. ಪ್ರಾದೇಶಿಕ ಸಮಗ್ರ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಬಾರದು ಎಂದು ಆಗ್ರಹಿಸಿದರು.
ಬಂಧನ: ಜಿಲ್ಲಾಧಿಕಾರಿಗಳೇ ಸ್ಥಳಕ್ಕೆ ಬಂದು ಮನವಿ ಪಡೆಯುವಂತೆ ರೈತರು ಪಟ್ಟು ಹಿಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಮನವಿ ಪಡೆದುಕೊಳ್ಳಲು ಬಂದಿದ್ದರು. ರೈತರನ್ನು ಸಮಾಧಾನಗೊಳಿಸಲು ಪೊಲೀಸರು ಮುಂದಾದರು. ರೈತರು ರಸ್ತೆತಡೆ ಮಾಡಲಾರಂಭಿಸಿದರು. ಕೂಡಲೇ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ದರು.
ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಚ್ ರವಿ, ಪದಾಧಿಕಾರಿಗಳಾದ ರಾಮಯ್ಯ ಜವಳಗೇರಾ, ಉಮಾದೇವಿ ನಾಯಕ, ವಿಜಯ ಬಡಿಗೇರ, ಬಸನಗೌಡ ಹೆಸರೂರು, ಅಮರೇಶ ಮಾರಲದಿನ್ನಿ, ತಿಮ್ಮಣ್ಣ ಭೋವಿ, ಮಲ್ಲಿಕಾರ್ಜುನರೆಡ್ಡಿ, ಕೆ.ವೈ ಬಸವರಾಜ, ರಂಗಪ್ಪ ನಾಯಕ, ನಾಗರಾಜ ಖಾಜನಗೌಡ, ಹುಲಿಗೆಯ್ಯ, ರಾಜಸಾಬ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.