ADVERTISEMENT

ಅಗಲಿದ ಪೊಲೀಸ್ ಕ್ರೈಂ ಡಾಗ್‌ ಸಿರಿ: ಸಕಲ ಪೊಲೀಸ್‌ ಗೌರವಗಳೊಂದಿಗೆ ಅಂತ್ಯಸಂಸ್ಕಾರ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2024, 14:43 IST
Last Updated 11 ನವೆಂಬರ್ 2024, 14:43 IST
<div class="paragraphs"><p>ರಾಯಚೂರು ನಗರದ ಪೊಲೀಸ್ ಪರೇಡ್‌ ಮೈದಾನ ಪಕ್ಕದಲ್ಲಿ ಸೋಮವಾರ ನೆರವೇರಿದ ಸಿರಿ ಅಂತ್ಯಸಂಸ್ಕಾರದಲ್ಲಿ&nbsp;ಎಂ. ಪುಟ್ಟಮಾದಯ್ಯ ಅಂತಿಮ ನಮನ ಸಲ್ಲಿಸಿದರು</p></div>

ರಾಯಚೂರು ನಗರದ ಪೊಲೀಸ್ ಪರೇಡ್‌ ಮೈದಾನ ಪಕ್ಕದಲ್ಲಿ ಸೋಮವಾರ ನೆರವೇರಿದ ಸಿರಿ ಅಂತ್ಯಸಂಸ್ಕಾರದಲ್ಲಿ ಎಂ. ಪುಟ್ಟಮಾದಯ್ಯ ಅಂತಿಮ ನಮನ ಸಲ್ಲಿಸಿದರು

   

ಪ್ರಜಾವಾಣಿ ಚಿತ್ರ

ರಾಯಚೂರು: ಪೊಲೀಸ್‌ ಶ್ವಾನ ದಳದ ಕ್ರೈಂ ಡಾಗ್ ‘ಸಿರಿ’ ಸೋಮವಾರ ಕೊನೆಯುಸಿರೆಳೆಯಿತು.

ADVERTISEMENT

ನಗರದ ಪೊಲೀಸ್ ಪರೇಡ್‌ ಮೈದಾನ ಪಕ್ಕದಲ್ಲಿ ಪೊಲೀಸ್‌ ಗೌರವಗಳೊಂದಿಗೆ ‘ಸಿರಿ’ (8) ಯ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಪುಟ್ಟಮಾದಯ್ಯ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ‘ಸಿರಿ’ಯ ಪಾರ್ಥಿವ ಶರೀರದ ಮೇಲೆ ಪುಷ್ಪಗುಚ್ಛವಿರಿಸಿ ಗೌರವ ನಮನ ಸಲ್ಲಿಸಿದರು. ಪೊಲೀಸ್‌ ಸಿಬ್ಬಂದಿ ಕುಶಾಲತೋಪು ಹಾರಿಸಿ ಗೌರವ ಸಮರ್ಪಿಸಿದರು.

2016ರಲ್ಲಿ ಜನಿಸಿದ ಡಾಬರ್‌ಮನ್‌ ತಳಿಯ ಈ ಶ್ವಾನವು 2017ರಲ್ಲಿ ಪೊಲೀಸ್‌ ಇಲಾಖೆಗೆ ಸೇರ್ಪಡೆಯಾಗಿತ್ತು. ಬೆಂಗಳೂರಿನಲ್ಲಿ ತರಬೇತಿ ಪಡೆದಿತ್ತು. ಅದರೊಂದಿಗೆ ಹ್ಯಾಂಡ್ಲರ್‌ ಆಗಿ ಜಯಕುಮಾರ ಮತ್ತು ಶರಣಬಸವ ಅವರೂ ತರಬೇತಿ ಪಡೆದಿದ್ದರು.

ಸಿರಿ

ಜಿಲ್ಲೆಯಲ್ಲಿ ನಡೆದ ಹಲವು ಕಳ್ಳತನ, ಕೊಲೆ-ದರೋಡೆ ಪ್ರಕರಣಗಳನ್ನು ಭೇದಿಸಿತ್ತು. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2022ರಲ್ಲಿ ಅಂಚೆ ಕಚೇರಿಯಲ್ಲಿ ನಡೆದಿದ್ದ ಕಳ್ಳತನದ ಪ್ರಕರಣದಲ್ಲಿ ಆರೋಪಿಗಳ ಸುಳಿವು ನೀಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತ್ತು. ರಾಜ್ಯಮಟ್ಟದ ಪೊಲೀಸ್ ಡ್ಯೂಟಿಮೀಟ್‌ನಲ್ಲಿ ‘ಸಿರಿ’ ಪ್ರಥಮ ಸ್ಥಾನ ಪಡೆದಿತ್ತು. ತನ್ನ ಜೀವಿತಾವಧಿಯಲ್ಲಿ 171 ಕರೆಗಳನ್ನು ಸಿರಿ ನಿರ್ವಹಿಸಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಕಳೆದ ಹಲವು ದಿನಗಳಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿತ್ತು. ಎರಡು ದಿನಗಳಿಂದ ಆಹಾರ ತ್ಯಜಿಸಿ ಸೋಮವಾರ ಕೊನೆಯ ಉಸಿರು ಎಳೆಯಿತು.

ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಶಿವಕುಮಾರ ಮತ್ತು ಹರೀಶ, ಡಿವೈಎಸ್ಪಿ (ಡಿಎಆರ್) ಪ್ರಮಾನಂದ ಘೋಡ್ಕೆ, ಡಿಎಆರ್ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.