ADVERTISEMENT

ಸೈಬರ್‌ ಠಾಣೆಗಳ ಬಲವರ್ಧನೆ: ಪ್ರವೀಣ ಸೂದ್‌

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 16:53 IST
Last Updated 22 ಜನವರಿ 2021, 16:53 IST

ರಾಯಚೂರು: ರಾಜ್ಯದಲ್ಲಿ ಸೈಬರ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ಕ್ರೈಂ ಠಾಣೆಗಳ ಬಲವರ್ಧನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್‌ ಮಹಾನಿರ್ದೇಶಕ ಪ್ರವೀಣ ಸೂದ್ ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ಶುಕ್ರವಾರ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಮುಂದಿನ 2025 ನೇ ಸಾಲಿನವರೆಗೂ ಪೊಲೀಸ್‌ ಇಲಾಖೆಯ ಆಧುನೀಕರಣ ಮಾಡಲಾಗುತ್ತಿದೆ. ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ₹2,700 ಕೋಟಿ ಅನುದಾನ ನೀಡುವುದಾಗಿ ತಿಳಿಸಿದ್ದಾರೆ. ಆ ಹಣದಲ್ಲಿ ರಾಜ್ಯದಾದ್ಯಂತ ಎರಡು ಸಾವಿರ ವಸತಿ ಗೃಹಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಪೊಲೀಸ್‌ ಇಲಾಖೆ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಮೀಸಲಾತಿಗೆ ಸಂಬಂಧಿಸಿ ನಕಲಿ ಪ್ರಮಾಣ ಪತ್ರ ಅಕ್ರಮವಾಗಿ ಪಡೆದು ಸವಲತ್ತು ಪಡೆದಿರುವ ಅಧಿಕಾರಿಗಳು ಪ್ರಮಾಣಪತ್ರ ವಾಪಸ್‌ ಪಡೆದಿದ್ದಾರೆ. ಸ್ಥಳೀಯ ಮೀಸಲಾತಿ ನಿಯಮವನ್ನು ಇಲಾಖೆ ಕಟ್ಟುನಿಟ್ಟಾಗಿ ಪಾಲಿಸುತ್ತಿದೆ ಎಂದರು.

ಮಹಿಳೆಯರ ಅಕ್ರಮ ಕಳ್ಳ ಸಾಗಾಣಿಕೆಗೂ ರಾಜ್ಯದಲ್ಲಿ ಕಟ್ಟಿನಿಟ್ಟಿನ ಕ್ರಮ ವಹಿಸಲಾಗಿದೆ. ಆ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಮಾನವ ಕಳ್ಳ ಸಾಗಾಣಿಕೆ ವಿಶೇಷ ಘಟಕವನ್ನು ಸ್ಥಾಪಿಸಲಾಗಿದೆ. ಪ್ರತಿ ಘಟಕಕ್ಕೂ ಪ್ರತ್ಯೇಕ ವಾಹನ ಮತ್ತು ಸಿಬ್ಬಂದಿ ಒದಗಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮದುವೆ ನೆಪದಲ್ಲಿ ಗುಜರಾತ್‍ಗೆ ಹೆಣ್ಣು ಮಕ್ಕಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ವಿಷಯವನ್ನು ಗಂಭೀರವಾಗಿ ಪರಿಶೀಲನೆ ನಡೆಸಲಾಗುವುದು. ಅದಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮವಹಿಸಿ ಸಾಗಾಟ ಕಡಿವಾಣ ಹಾಕಲಾಗುವುದು ಎಂದು ತಿಳಿಸಿದರು.

ಸಾರ್ವಜನಿಕರ ದೂರುಗಳಿಗೆ 15 ನಿಮಿಷದಲ್ಲಿ ಸ್ಪಂದಿಸಲು 112 ಸಂಖ್ಯೆಯ ದೂರವಾಣಿ ಯೋಜನೆಯನ್ನು ರೂಪಿಸಲಾಗಿದೆ. ರಾಜ್ಯದ 27 ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು. ಈಗಾಗಲೇ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು ತಿಂಗಳ ಕೊನೆಯಲ್ಲಿ ಎಲ್ಲ ಕಡೆಗೂ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ, ಎಎಸ್‌ಪಿ ಶ್ರೀಹರಿಬಾಬು, ಡಿವೈಎಸ್‌ಪಿ ಶಿವನಗೌಡ,ಹುಲ್ಲೂರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.