ADVERTISEMENT

ಲಿಂಗಸುಗೂರು: ಹತ್ತೇ ವರ್ಷದಲ್ಲಿ ಶಿಥಿಲಗೊಂಡ ಕೊಠಡಿಗಳು

​ಪ್ರಜಾವಾಣಿ ವಾರ್ತೆ
Published 29 ಜನವರಿ 2024, 6:27 IST
Last Updated 29 ಜನವರಿ 2024, 6:27 IST
ಲಿಂಗಸುಗೂರು ತಾಲ್ಲೂಕು ಆನೆಹೊಸೂರು ಗ್ರಾಮದ ಶಾಲಾ ಕಟ್ಟಡ ನಿರ್ಮಾಣವಾಗಿ ಹತ್ತೇ ವರ್ಷದಲ್ಲಿ ಕುಸಿದಿರುವುದು
ಲಿಂಗಸುಗೂರು ತಾಲ್ಲೂಕು ಆನೆಹೊಸೂರು ಗ್ರಾಮದ ಶಾಲಾ ಕಟ್ಟಡ ನಿರ್ಮಾಣವಾಗಿ ಹತ್ತೇ ವರ್ಷದಲ್ಲಿ ಕುಸಿದಿರುವುದು   

ಲಿಂಗಸುಗೂರು: ತಾಲ್ಲೂಕಿನ ಆನೆಹೊಸೂರು ಗ್ರಾಮದ ಹೊರವಲಯದ ದುರ್ಗಾದವರ 2 ಎಕರೆ ಜಮೀನಿನಲ್ಲಿ 2008ರಲ್ಲಿ ಹೊಸ ಶಾಲಾ ಕೊಠಡಿಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಗಿತ್ತು. 2009-10 ರಿಂದ 2011-12ನೇ ಸಾಲಿನಲ್ಲಿ ನಿರ್ಮಿಸಿದ ಕೊಠಡಿಗಳು ಭಾಗಶಃ ಶಿಥಿಲಗೊಂಡು ಹತ್ತೇ ವರ್ಷದಲ್ಲಿ ಕಾಮಗಾರಿಯ ಕಳಪೆ ಮುಖ ಬಹಿರಂಗವಾಗಿದೆ.

1959ರಲ್ಲಿ ಗ್ರಾಮದ ಹೃದಯಭಾಗದಲ್ಲಿ ನಿರ್ಮಾಣಗೊಂಡಿದ್ದ ಶಾಲಾ ಕೊಠಡಿಗಳನ್ನು ಸುವರ್ಣ ಮಹೋತ್ಸವ ಆಚರಣೆ ಸಂದರ್ಭದಲ್ಲಿ ನೆಲಸಮಗೊಳಿಸಿ ಹೊಸ ಕೊಠಡಿಗಳ ನಿರ್ಮಾಣ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮೈದಾನ ಕೊರತೆ ನೀಗಿಸಲು ದರ್ಗಾದ ಜಮೀನು ದಾನವಾಗಿ ಪಡೆಯಲಾಗಿತ್ತು. ಹೊಸ ಶಾಲಾ ಕೊಠಡಿಗಳು ಕೇವಲ ಹತ್ತು ವರ್ಷಗಳ ಅವಧಿಯಲ್ಲಿಯೆ ಶಿಥಿಲಗೊಂಡಿದ್ದು ನೆಲಸಮಗೊಳಿಸಲು ಪತ್ರ ವ್ಯವಹಾರ ನಡೆಸಿರುವುದು ವಿಪರ್ಯಾಸವೇ ಸರಿ.

2008-09 ರಿಂದ 2011-12 ಅವಧಿಯಲ್ಲಿ ಒಟ್ಟು ಏಳು ಶಾಲಾ ಕೊಠಡಿಗಳಿಗೆ ₹31.30ಲಕ್ಷ ಮಂಜೂರಾಗಿತ್ತು. ಸಂಸದ ನಿಧಿಯಡಿ ನಿರ್ಮಿಸಲಾಗಿದ್ದ ಕಲಾಮಂಟಪ ಗಾಳಿಗೆ ಕುಸಿದಿದೆ. ಮೂರು ಕೊಠಡಿಗಳ ಬುನಾದಿ ಕುಸಿದು ಗೋಡೆಗಳು ವಾಲಿವೆ. ಕಿಟಕಿ ಬಾಗಿಲು ಮುರಿದಿವೆ. ನೆಲ ಹಾಸಿನ ಬಂಡೆಗಳು ಕಿತ್ತು ಹಾಳಾಗಿದ್ದು ಕುಸಿಯುವ ಭೀತಿ ಎದುರಾಗಿದೆ. ನೆಲಸಮಕ್ಕೆ ಪತ್ರ ಬರೆದರು ಅಧಿಕಾರಿಗಳು ಸ್ಪಂದಿಸುತ್ತಿಲ್ಲ.

ADVERTISEMENT

ಶಾಲೆಯಲ್ಲಿ 330 ಮಕ್ಕಳ ದಾಖಲಾತಿ ಇದೆ. ಗ್ರಾಮದ ಹೃದಯ ಭಾಗದಲ್ಲಿ 1 ರಿಂದ 3ನೇ ತರಗತಿ ಹಾಗೂ ಹೊರವಲಯದ ಕೊಠಡಿಗಳಲ್ಲಿ 4 ರಿಂದ 7ನೇ ತರಗತಿ ನಡೆಸಲಾಗುತ್ತಿದೆ. 11 ಶಿಕ್ಷಕ ಮಂಜೂರಾತಿ ಹುದ್ದೆಗಳಲ್ಲಿ ಕೇವಲ 5 ಜನ ಕಾಯಂ ಶಿಕ್ಷಕರಿದ್ದಾರೆ. ಅತಿಥಿ ಶಿಕ್ಷಕರನ್ನು ನೀಡಿದ್ದು ದೈಹಿಕ ಶಿಕ್ಷಣ ಶಿಕ್ಷಕರು ಇಲ್ಲವೆ ಇಲ್ಲ. ಕೆಲ ವರ್ಷ ಹಿಂದೆ ಕಬಡ್ಡಿ ಮತ್ತು ಕೊಕ್ಕೊ, ವೈಯಕ್ತಿಕ ಕ್ರೀಡೆಗಳಲ್ಲಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಶಾಲೆಗೆ ಮೈದಾನವಿಲ್ಲದ್ದಂತಾಗಿದೆ.

ಸುಸಜ್ಜಿತ ಮೈದಾನ, ಕ್ರೀಡಾ ಸಾಮಗ್ರಿಗಳು, ಪ್ರಯೋಗಾಲಯ, ಹೈಟೆಕ್‍ ಶೌಚಾಲಯ ಮತ್ತು ಮೂತ್ರಾಲಯ, ಸಂಸ್ಕೃತಿ ಕಾರ್ಯಕ್ರಮ ಪ್ರದರ್ಶನಕ್ಕೆ ವೇದಿಕೆ, ಶುದ್ಧ ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳು ಮರೀಚಿಕೆ ಆಗಿವೆ.

ಪ್ರಭಾರ ಮುಖ್ಯ ಶಿಕ್ಷಕ ಶಂಕರ್ ನಾಗೂರು ಮಾತನಾಡಿ, ‘ನಾನು ಕೆಲ ತಿಂಗಳ ಹಿಂದೆ ಪ್ರಭಾರ ವಹಿಸಿಕೊಂಡಿದ್ದೇನೆ. ಸೌಲಭ್ಯಗಳ ಇದೆ. ಈ ಕುರಿತಂತೆ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಮೂರು ಶಾಲಾ ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿದ್ದು ನೆಲಸಮಗೊಳಿಸಿ, ಪರ್ಯಾಯ ಕೊಠಡಿ ನಿರ್ಮಿಸಲು ಪತ್ರ ವ್ಯವಹಾರ ಮಾಡಿದ್ದೇವೆ’ ಎಂದು ಹೇಳಿದರು.

ಶಾಲಾ ಸುಧಾರಣ ಸಮಿತಿ ಅಧ್ಯಕ್ಷ ಮೆಹಿಮುದ್‍ಪಾಷ ದರ್ಗಾ ಮಾತನಾಡಿ, ‘ಕುಟುಂಬದವರು ಶಾಲಾ ಕೊಠಡಿ ಮತ್ತು ಸುಸಜ್ಜಿತ ಮೈದಾನಕ್ಕೆ 2 ಎಕರೆ ಜಮೀನು ದಾನವಾಗಿ ನೀಡಿದ್ದೇವೆ. 11 ಅಡಿ ಆಳ ಬುನಾದಿ ಅಗೆದು ಕೊಠಡಿಗಳ ನಿರ್ಮಾಣ ಮಾಡಿದ್ದರು ಕುಸಿದಿವೆ. ಶಿಕ್ಷಣ ಇಲಾಖೆ ನಿರಕ್ಷಿತ ಸೌಲಭ್ಯಗಳನ್ನು ನೀಡುತ್ತಿಲ್ಲ. ಶಾಲಾ ಸುಧಾರಣ ಸಮಿತಿ ಕೈಲಾದ ಮಟ್ಟಿಗೆ ಸೌಲಭ್ಯ ಕಲ್ಪಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುತ್ತಿದ್ದೇವೆ’ ಎಂದರು.

ಲಿಂಗಸುಗೂರು ತಾಲ್ಲೂಕು ಆನೆಹೊಸೂರು ಗ್ರಾಮದ ಶಾಲಾ ಕಟ್ಟಡ ಬುನಾದಿ ಕುಸಿದು ಕೊಠಡಿಯೊಂದರ ಗೋಡೆ ವಾಲಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.