ರಾಯಚೂರು: ‘ಯಾದಗಿರಿ ಪಿಎಸ್‌ಐ ಪರಶುರಾಮ್ ಅವರ ಸಾವಿಗೆ ಭ್ರಷ್ಟಾಚಾರವೇ ಕಾರಣ. ಲಂಚ ಕೊಟ್ಟವರಿಗೆ ಮಾತ್ರ ಪತ್ರ ಕೊಡುತ್ತಾರೆ. ನಂತರವೇ ಪೋಸ್ಟಿಂಗ್ ಕೊಡಲಾಗುತ್ತದೆ. ಯಾದಗಿರಿಯಲ್ಲಿ ಎಲ್ಲ ಪೊಲೀಸ್ ಅಧಿಕಾರಿಗಳು ಲಂಚ ಕೊಟ್ಟೇ ಹುದ್ದೆಗಳನ್ನು ಪಡೆದಿದ್ದಾರೆ’ ಎಂದು ಪರಶುರಾಮ್ ಅವರ ಪತ್ನಿ ಶ್ವೇತಾ ಗಂಭೀರ ಆರೋಪ ಮಾಡಿದರು.
ಜೆಡಿಎಸ್ ಜಿಲ್ಲಾ ಘಟಕದ ನಿಯೋಗವು ಮಂಗಳವಾರ ಶ್ವೇತಾ ಅವರ ನಿವಾಸಕ್ಕೆ ಭೇಟಿ ಮಾಡಿ ಸಾಂತ್ವನ ಹೇಳಿದ ನಂತರ ಅವರು ಪೊಲೀಸ್ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರ ವ್ಯವಸ್ಥೆಯನ್ನು ವಿವರಿಸಿದರು.
‘ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್‌ಐ ಹುದ್ದೆಯನ್ನು ಕೊಟ್ಟಿಲ್ಲವೆಂದರೂ ಅಪರಾಧ ವಿಭಾಗದಲ್ಲಾದರೂ ಅವಕಾಶ ಮಾಡಿಕೊಡುವಂತೆ ಪರಶುರಾಮ್ ಕೇಳಿದ್ದರು. ಆದರೆ, ನೀವು ಯಾದಗಿರಿಯಲ್ಲೇ ಇರಬಾರದು ಎಂದು ಶಾಸಕರ ಕಡೆಯವರು ಒತ್ತಡ ಹಾಕಿದ್ದರು. ಇದರಿಂದ ಪರಶುರಾಮ್ ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಯಾದಗಿರಿ ಜಿಲ್ಲೆಯಲ್ಲಿ ಲಕ್ಷ ಲಕ್ಷ ಹಣ ಕೊಟ್ಟ ನಂತರವೇ ಅಧಿಕಾರಿಗಳಿಗೆ ಹುದ್ದೆಗಳನ್ನು ಕೊಡಲಾಗಿದೆ’ ಎಂದು ಆರೋಪಿಸಿದರು.
‘ಡಿವೈಎಸ್‌ಪಿ, ಸಿಪಿಐ ದುಡ್ಡು ಕೊಟ್ಟೇ ಇಲ್ಲಿದ್ದಾರೆ. ದುಡ್ಡು ಕೊಡದಿದ್ದರೆ ತೆಗೆದು ಬಿಸಾಕುತ್ತಾರೆ. ದುಡ್ಡು ಕೊಟ್ಟ ನಂತರವೇ ಎಲ್ಲರಿಗೂ ಆದೇಶಪತ್ರ ಕೊಡಲಾಗಿದೆ. ಐಜಿ ಕಚೇರಿಯಲ್ಲಿ ಕೇಳಿದರೆ ಎಲ್ಲವೂ ಗೊತ್ತಾಗುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.