ADVERTISEMENT

ಕವಿತಾಳ: ಅಪಾಯಕ್ಕೆ ಆಹ್ವಾನ ನೀಡುವ ವಿದ್ಯುತ್‌ ಪರಿವರ್ತಕಗಳು

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 5:49 IST
Last Updated 4 ಜುಲೈ 2024, 5:49 IST
ಕವಿತಾಳದ ನಿವಾಸಿ ಮಾಳಪ್ಪ ದಿನ್ನಿ ಅವರ ಜಮೀನಿನಲ್ಲಿ ವಿದ್ಯುತ್‌ ಕಂಬ ನೆಲಕ್ಕೆ ಬಾಗಿ ತಂತಿ ಜೋತು ಬಿದ್ದಿರುವುದು
ಕವಿತಾಳದ ನಿವಾಸಿ ಮಾಳಪ್ಪ ದಿನ್ನಿ ಅವರ ಜಮೀನಿನಲ್ಲಿ ವಿದ್ಯುತ್‌ ಕಂಬ ನೆಲಕ್ಕೆ ಬಾಗಿ ತಂತಿ ಜೋತು ಬಿದ್ದಿರುವುದು   

ಕವಿತಾಳ: ಪಟ್ಟಣದ ವಿವಿಧೆಡೆ ವಿದ್ಯುತ್‌ ಪರಿವರ್ತಕಗಳು ನೆಲಮಟ್ಟದಲ್ಲಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಜಮೀನುಗಳಲ್ಲಿ ವಿದ್ಯುತ್‌ ಕಂಬಗಳು ನೆಲಕ್ಕೆ ಬಾಗಿ ತಂತಿಗಳು ಜೋತು ಬಿದ್ದಿದ್ದು ಕೃಷಿ ಚಟುವಟಿಕೆಗೆ ರೈತರು ಹಿಂದೇಟು ಹಾಕುವಂತಾಗಿದೆ.

ಇಲ್ಲಿನ ಹೊರ ವಲಯದ ಮಿಶ್ರಾ ತೋಟದ ಹತ್ತಿರ, ವಸತಿ ನಿಲಯದ ಎದುರು, ಆನ್ವರಿ ಕ್ರಾಸ್‌ ಮತ್ತು ಚರ್ಚ್‌ ಎದುರಿನ ವಿದ್ಯುತ್‌ ಪರಿವರ್ತಕಗಳನ್ನು ಈ ಹಿಂದೆ ಇಲಾಖೆ ನಿಯಮದಂತೆ ಎತ್ತರದಲ್ಲಿ ಅಳವಡಿಸಿದ್ದರೂ ರಸ್ತೆ ದುರಸ್ತಿ ಸಂದರ್ಭದಲ್ಲಿ ರಸ್ತೆ ಎತ್ತರಿಸಿದ ಪರಿಣಾಮ ಈಗ ಸಣ್ಣ ಮಕ್ಕಳ ಕೈಗೂ ಎಟುಕುವಂತಾಗಿವೆ.

‘ನಿತ್ಯ ಶಾಲಾ ಮಕ್ಕಳು ಓಡಾಡುತ್ತಿದ್ದು ಕೆಳಮಟ್ಟದಲ್ಲಿರುವ ಪರಿವರ್ತಕಗಳನ್ನು ಕುತೂಹಲಕ್ಕೆ ಮುಟ್ಟಿದರೂ ಅಪಾಯ ಸಂಭವಿಸುವ ಸಾಧ್ಯತೆ ಇರುತ್ತದೆ ಹೀಗಾಗಿ ಅವುಗಳನ್ನು ಎತ್ತರದಲ್ಲಿಕೆ ಅಳವಡಿಸಬೇಕು’ ಎಂದು ಕಟ್ಟಡ ಕಾರ್ಮಿಕ ಸಂಘಟನೆ ಮುಖಂಡ ಎಂ.ಡಿ.ಮೆಹಬೂಬ್‌ ಒತ್ತಾಯಿಸಿದರು.

ADVERTISEMENT

ಸಮೀಪದ ಇಟ್ಟಂಗಿ ಭಟ್ಟಿ ಹತ್ತಿರದ ಜಮೀನಿನಲ್ಲಿ ಪರಿವರ್ತಕವನ್ನು ತೆಗೆದು ಖಾಲಿ ಬಿಡಲಾಗಿದೆ, ವಿದ್ಯುತ್‌ ಕಂಬಗಳು ನೆಲಕ್ಕೆ ಬಾಗಿವೆ ಮತ್ತು ತಂತಿಗಳು ಜೋತು ಬಿದ್ದಿವೆ ಅದರ ಸುತ್ತಮುತ್ತ ಕೃಷಿ ಚಟುವಟಿಕೆ ಕೈಗೊಳ್ಳಲು ರೈತರಿಗೆ ತೊಂದರೆ ಉಂಟಾಗುತ್ತಿದೆ, ಈ ಬಗ್ಗೆ ಜೆಸ್ಕಾಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತ ಮಾಳಪ್ಪ ದಿನ್ನಿ ಆರೋಪಿಸಿದರು.

ಜೋತು ಬಿದ್ದ ತಂತಿ ತಗುಲಿ ಬೇಸಿಗೆಯಲ್ಲಿ ಬತ್ತದ ಹುಲ್ಲು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ ಸುಟ್ಟ ಅನೇಕ ಘಟನೆಗಳು ನಡೆದಿವೆ ಹೀಗಿದ್ದರೂ ಜೆಸ್ಕಾಂ ಅಧಿಕಾರಿಗಳು ತಂತಿ ಮತ್ತು ಕಂಬ ಸರಿಪಡಿಸುವ ಗೋಜಿಗೆ ಹೋಗದಿರುವುದು ಅಚ್ಚರಿ ಮೂಡಿಸಿದೆ.

ಕವಿತಾಳದ ನಿವಾಸಿ ಮಾಳಪ್ಪ ದಿನ್ನಿ ಅವರ ಜಮೀನಿನಲ್ಲಿ ವಿದ್ಯುತ್‌ ಕಂಬ ನೆಲಕ್ಕೆ ಬಾಗಿ ತಂತಿ ಜೋತು ಬಿದ್ದಿರುವುದು
ಎರಡು ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಜೆಸ್ಕಾಂ ಅಧಿಕಾರಿಗಳು ಬಾಗಿದ ಕಂಬ ಜೋತು ಬಿದ್ದ ತಂತಿ ತೆರವುಗೊಳಿಸಲು ಮುಂದಾಗುತ್ತಿಲ್ಲ
ಮಾಳಪ್ಪ ದಿನ್ನಿ ರೈತ
ಈ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿವರ್ತಕಗಳ ಸ್ಥಳಾಂತರಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು
ಬನ್ನಪ್ಪ ಕರಿಬಂಟನಾಳ ಎಇಇ ಜೆಸ್ಕಾಂ ಸಿರವಾರ ವಿಭಾಗ
ಸಿಬ್ಬಂದಿಯಿಂದ ಮಾಹಿತಿ ಪಡೆದು ಜಮೀನಿನಲ್ಲಿನ ಕಂಬ ನೇರವಾಗಿಸಲು ಮತ್ತು ತಂತಿ ಸರಿಪಡಿಸಲು ಕ್ರಮ ವಹಿಸಲಾಗುವುದು
ಬನ್ನಪ್ಪ ಜೆಸ್ಕಾಂ ಸಹಾಯಕ ಇಂಜಿನಿಯರ್‌ ಪಾಮನಕಲ್ಲೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.