ADVERTISEMENT

ನವಲಿ ಜಲಾಶಯ: ರಾಜ್ಯಗಳ ಸಿಎಂಗಳೊಂದಿಗೆ ಚರ್ಚೆ

ರೈತ ದಸರಾ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 14:31 IST
Last Updated 8 ಅಕ್ಟೋಬರ್ 2024, 14:31 IST
ಸಿಂಧನೂರು ದಸರಾ ಉತ್ಸವದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ರೈತ ದಸರಾ ಕಾರ್ಯಕ್ರಮಕ್ಕೆ ಧಾನ್ಯಗಳನ್ನು ಕುಟ್ಟುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಚಾಲನೆ ನೀಡಿದರು
ಸಿಂಧನೂರು ದಸರಾ ಉತ್ಸವದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ರೈತ ದಸರಾ ಕಾರ್ಯಕ್ರಮಕ್ಕೆ ಧಾನ್ಯಗಳನ್ನು ಕುಟ್ಟುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಚಾಲನೆ ನೀಡಿದರು   

ಸಿಂಧನೂರು: ‘ಈ ಭಾಗದ ನೀರಾವರಿ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ₹16 ಸಾವಿರ ಕೋಟಿ ವೆಚ್ಚದ, 26 ಸಾವಿರ ಎಕರೆಗೆ ನೀರುಣಿಸುವ ಸಾಮರ್ಥ್ಯದ ನವಲಿ ಜಲಾಶಯದ ಡಿಪಿಆರ್ ಈಗಾಗಲೇ ತಯಾರಿಸಲಾಗಿದ್ದು, ತೆಲಂಗಾಣ, ಆಂಧ್ರ ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳ ಜೊತೆಗೆ ಒಂದು ತಿಂಗಳಲ್ಲಿ ಮಾತುಕತೆ ನಡೆಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ನಗರದ ಎಪಿಎಂಸಿ ಟೆಂಡರ್ ಹಾಲ್‍ನಲ್ಲಿ ಸಿಂಧನೂರು ದಸರಾ ಉತ್ಸವದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ರೈತ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಈ ಪ್ರಕ್ರಿಯೆಗೆ ಈ ಭಾಗದ ಸಚಿವರು, ಸಂಸದರು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆಜ್ಜೆ ಇಡಲಾಗುವುದು’ ಎಂದು ಭರವಸೆ ನೀಡಿದರು.

‘ಕಳೆದ ತಿಂಗಳು ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ಕಿತ್ತು ಹೋಗಿ ಭಾರಿ ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವಾಗ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವೈ.ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಜಲಾಶಯ ರಕ್ಷಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದ್ದರು. ಆದರೆ ಒಂದು ವಾರದೊಳಗೆ ಹೊಸ ಕ್ರಸ್ಟ್‌ಗೇಟ್ ತಯಾರಿಸಿ ಜಲಾಶಯಕ್ಕೆ ಅಳವಡಿಕೆ ಮಾಡುವ ಮೂಲಕ ಜಲಾಶಯ ರಕ್ಷಣೆ ಮಾಡಿದ ಶ್ರೇಯಸ್ಸು ನಮ್ಮ ಸರ್ಕಾರಕ್ಕಿದೆ’ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ADVERTISEMENT

‘ತುಂಗಭದ್ರಾ ಜಲಾಶಯ ಗೇಟ್ ಮುರಿದಾಗ ಹೇಗೆ ರಕ್ಷಣೆ ಮಾಡುತ್ತಾರೆಂದು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಚರ್ಚೆಯಾಗಿತ್ತು. ನಾಲ್ಕು ದಿನ ಹಗಲು-ರಾತ್ರಿಯೆನ್ನದೆ ಕೆಲಸ ನಿರ್ವಹಿಸುವ ಮೂಲಕ ಗೇಟ್ ಅಳವಡಿಸಿ 30 ಟಿಎಂಸಿ ನೀರು ಪೋಲಾಗುವುದನ್ನು ತಡೆಗಟ್ಟಿ, ರೈತರಿಗೆ ಎರಡು ಬೆಳೆಗೆ ನೀರು ಲಭಿಸುವಂತೆ ಶ್ರಮಿಸಿ ರೈತರ ನೋವಿಗೆ ಆಸರೆಯಾಗಿದ್ದೇವೆ. ಶೀಘ್ರದಲ್ಲಿ ಗೇಟ್ ಅಳವಡಿಸಿದ ಸಂಗತಿ ದೇಶದಲ್ಲಿಯೇ ಮಾದರಿಯಾಗಿದೆ. ಆತ್ಮವಿಶ್ವಾಸವಿದ್ದರೆ ಎಲ್ಲವೂ ಸಾಧ್ಯ ಎನ್ನುವುದಕ್ಕೆ ಇದುವೇ ನಿದರ್ಶನ’ ಎಂದರು.

ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ‘2007-08ರಲ್ಲಿ ಕೃಷಿ ಇಲಾಖೆಯಲ್ಲಿ 300 ಸಿಬ್ಬಂದಿ ನೇಮಕ ಮಾಡಿದ್ದನ್ನು ಹೊರತುಪಡಿಸಿದರೆ ಇಲ್ಲಿಯವರೆಗೆ ನೇಮಕಾತಿ ಆಗಿರಲಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೃಷಿ ಸಹಾಯಕರು ಸೇರಿದಂತೆ ಒಟ್ಟು 950 ಸಿಬ್ಬಂದಿ ನೇಮಕ ಮಾಡಲಾಗಿದೆ. 650 ಸಿಬ್ಬಂದಿಗೆ ಬಡ್ತಿ ನೀಡಲಾಗಿದೆ’ ಎಂದರು.

‘ಹೈಟೆಕ್ ಹಾರ್ವೇಸ್ಟರ್ ಖರೀದಿಗಾಗಿ ರೈತರಿಗೆ ₹2.76 ಕೋಟಿ ಸಬ್ಸಿಡಿ ನೀಡಲಾಗಿದೆ. ಎಸ್ಸಿ-ಎಸ್ಟಿ ಸಮುದಾಯಕ್ಕೆ ₹50 ಲಕ್ಷ, ಸಾಮಾನ್ಯ ವರ್ಗದ ರೈತರಿಗೆ ₹40 ಲಕ್ಷ ಸಬ್ಸಿಡಿ ಕೊಡಲಾಗಿದೆ’ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್.ತಂಗಡಗಿ, ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದರು.

ಶಾಸಕರಾದ ಬಸನಗೌಡ ದದ್ದಲ್, ಆರ್.ಬಸನಗೌಡ ತುರ್ವಿಹಾಳ, ಬಿ.ಎಂ.ನಾಗರಾಜ, ರಾಘವೇಂದ್ರ ಹಿಟ್ನಾಳ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ವಿಧಾನ ಪರಿಷತ್ ಸದಸ್ಯರಾದ ಬಸನಗೌಡ ಬಾದರ್ಲಿ, ಶರಣೇಗೌಡ ಬಯ್ಯಾಪುರ, ಮಾಜಿ ಸದಸ್ಯ ಬಸವರಾಜ ಪಾಟೀಲ ಇಟಗಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಜಿಲ್ಲಾಧಿಕಾರಿ ನಿತೀಶ್ ಕೆ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ, ಉಪವಿಭಾಗಾಧಿಕಾರಿ ಬಸವಣೆಪ್ಪ ಕಲ್‍ಶೆಟ್ಟಿ, ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಉಪಸ್ಥಿತರಿದ್ದರು.

ರೈತ ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರೈತರು

ಟಿಬಿ ಡ್ಯಾಂ ಎಲ್ಲ ಗೇಟ್‍ಗಳ ನವೀಕರಣಕ್ಕೆ ನಿರ್ಧಾರ’

ತುಂಗಭದ್ರಾ ಜಲಾಶಯ ನಿರ್ಮಾಣಗೊಂಡು 70 ವರ್ಷ ಗತಿಸಿರುವುದರಿಂದ ಎಲ್ಲ ಗೇಟ್‍ಗಳ ನವೀಕರಣ ಮಾಡುವ ಅವಶ್ಯಕತೆಯಿದೆ ಎಂದು ತಾಂತ್ರಿಕ ತಜ್ಞರ ಸಮಿತಿ ವರದಿ ನೀಡಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಮುಂಬರುವ ಬೇಸಿಗೆಯಿಂದಲೇ ಒಂದೊಂದೇ ಗೇಟ್‍ ಹಂತ-ಹಂತವಾಗಿ ಹೊಸದಾಗಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.