ADVERTISEMENT

ನಿರಂತರ ವಿದ್ಯುತ್‌ ಉತ್ಪಾದನೆಗೆ ಸಿದ್ಧತೆ ಆರಂಭ

ಜಲಾಶಯಗಳಲ್ಲಿ ನೀರಿನ ಕೊರತೆ: ಆರ್‌ಟಿಪಿಎಸ್‌ ಮೇಲೆ ಹೆಚ್ಚಿದ ಒತ್ತಡ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2024, 7:20 IST
Last Updated 21 ಫೆಬ್ರುವರಿ 2024, 7:20 IST
ಶಕ್ತಿನಗರದಲ್ಲಿರುವ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ
ಶಕ್ತಿನಗರದಲ್ಲಿರುವ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ   

ಶಕ್ತಿನಗರ (ರಾಯಚೂರು ಜಿಲ್ಲೆ): ಬೇಸಿಗೆಯಲ್ಲಿ ವಿದ್ಯುತ್‌ ಬೇಡಿಕೆ ಹೆಚ್ಚಾಗುವ ಹಿನ್ನೆಲೆಯಲ್ಲಿ ರಾಯಚೂರು ಶಾಖೋತ್ಪನ್ನ ವಿದ್ಯುತ್ ಘಟಕಗಳಿಂದ ನಿರಂತರ ವಿದ್ಯುತ್ ಉತ್ಪಾದನೆ ಮಾಡಲು ಆರ್‌ಟಿಪಿಎಸ್ ಅಧಿಕಾರಿಗಳ ತಂಡ ಸಿದ್ಧತೆ ಆರಂಭಿಸಿದೆ.

ರಾಜ್ಯದ ಜಲ ವಿದ್ಯುತ್ ಕೇಂದ್ರಗಳಲ್ಲಿ ನೀರಿನ ಅಭಾವದಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿಲ್ಲ. ಬೇಡಿಕೆ ಸರಿದೂಗಿಸಲು ಶಾಖೋತ್ಪನ್ನ ಕೇಂದ್ರಗಳನ್ನೇ ನೆಚ್ಚುವಂತಾಗಿದೆ.

ರಾಜ್ಯದಲ್ಲಿ ಈಗ 300 ಮಿಲಿಯನ್ ಯೂನಿಟ್‌ ವಿದ್ಯುತ್‌ ಬೇಡಿಕೆ ಇದೆ. ಸೋಲಾರ್, ಪವನ ಮತ್ತು ಜಲವಿದ್ಯುತ್ ಕೇಂದ್ರಗಳಿಂದ ದೊರೆಯುತ್ತಿದ್ದ ವಿದ್ಯುತ್ ಅನ್ನೇ ಬಳಸುವ ಮೂಲಕ ಆರ್‌ಟಿಪಿಎಸ್ ಮತ್ತು ವೈಟಿಪಿಎಸ್ ವಿದ್ಯುತ್ ಕೇಂದ್ರಗಳ ಮೇಲಿನ ಒತ್ತಡ ತಗ್ಗಿಸಲಾಗುತ್ತಿತ್ತು. ಈಗ ಜಲವಿದ್ಯುತ್ ಕೇಂದ್ರಗಳ ವಿದ್ಯುತ್ ಉತ್ಪಾದನೆ ಗಣನೀಯ ಕುಸಿದಿದೆ. ರಾಜ್ಯದ ವಿದ್ಯುತ್ ಬೇಡಿಕೆ ಸರಿದೂಗಿಸುವ ದಿಸೆಯಲ್ಲಿ ಆರ್‌ಟಿಪಿಎಸ್ ಮತ್ತು ವೈಟಿಪಿಎಸ್ ವಿದ್ಯುತ್ ಘಟಕಗಳು ಕಾರ್ಯನಿರ್ವಹಿಸಲಿವೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಆರ್‌ಟಿಪಿಎಸ್‌ನಲ್ಲಿ ಒಟ್ಟು ಎಂಟು ವಿದ್ಯುತ್ ಘಟಕಗಳಲ್ಲಿ ಸದ್ಯ 210 ಮೆಗಾ ವಾಟ್ ಸಾಮರ್ಥ್ಯದ 1ನೇ ವಿದ್ಯುತ್ ಘಟಕ, 2ನೇ ಮತ್ತು 3ನೇ ವಿದ್ಯುತ್ ಘಟಕಗಳ ಉತ್ಪಾದನೆ ಸ್ಥಗಿತಗೊಂಡಿವೆ. ಇನ್ನುಳಿದ 5 ವಿದ್ಯುತ್ ಘಟಕಗಳಿಂದ ಉತ್ಪಾದನೆ ಸೇರಿ ಒಟ್ಟು 880 ಮೆಗಾ ವಾಟ್ ಉತ್ಪಾದನೆ ಆಗುತ್ತಿದೆ. ಯರಮರಸ್ ಶಾಖೋತ್ಪನ್ನ ವಿದ್ಯುತ್ (ಬಿಟಿಪಿಎಸ್) ಎರಡು ಘಟಕಗಳಿಂದ 1,060 ಮೆಗಾ ವಾಟ್‌ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ರಾಜ್ಯದಲ್ಲಿ ವಿದ್ಯುತ್‌ ಬೇಡಿಕೆ ಹೆಚ್ಚಾಗಲಿದೆ.

‘ಸದ್ಯ ಆರ್‌ಟಿಪಿಎಸ್‌ನಲ್ಲಿ ಕಲ್ಲಿದ್ದಲು ಸಮಸ್ಯೆ ಇಲ್ಲ. 2.50 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹವಿದೆ. ಆರ್‌ಟಿಪಿಎಸ್‌ನ ವಿದ್ಯುತ್ ಘಟಕಗಳಿಂದ ರಾಜ್ಯಕ್ಕೆ  30 ಮಿಲಿಯನ್ ಯೂನಿಟ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. 3ನೇ ವಿದ್ಯುತ್ ಘಟಕ ವಾರ್ಷಿಕ ನಿರ್ವಹಣೆಗಾಗಿ ಉತ್ಪಾದನೆ ಬಂದ್ ಮಾಡಲಾಗಿದೆ. ಫೆ. 18ರಂದು ಸ್ಥಗಿತಗೊಂಡಿರುವ 2ನೇ ವಿದ್ಯುತ್ ಘಟಕದಲ್ಲಿನ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿ ಶೀಘ್ರವೇ ಉತ್ಪಾದನೆ ಆರಂಭಿಸಲಾಗುವುದು’ ಎಂದು ಆರ್‌ಟಿಪಿಎಸ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಸುರೇಶ್ ಬಾಬು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.