ADVERTISEMENT

ಸಂವಿಧಾನ ರಕ್ಷಣೆ ನಮ್ಮೆಲ್ಲರ ಹೊಣೆ: ಆಚಪ್ಪ ದೊಡ್ಡಬಸವರಾಜ

ವಿವಿಧೆಡೆ ಸಂವಿಧಾನ ಸಮರ್ಪಣಾ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 14:26 IST
Last Updated 26 ನವೆಂಬರ್ 2024, 14:26 IST
ಸಿಂಧನೂರಿನ ಆದಿತ್ಯ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಆಚಪ್ಪ ದೊಡ್ಡಬಸವರಾಜ ಮಾತನಾಡಿದರು
ಸಿಂಧನೂರಿನ ಆದಿತ್ಯ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಆಚಪ್ಪ ದೊಡ್ಡಬಸವರಾಜ ಮಾತನಾಡಿದರು   

ಸಿಂಧನೂರು: ‘ಭಾರತ ದೇಶದ ಸಂವಿಧಾನವು ಅತ್ಯಂತ ಶ್ರೇಷ್ಠ ಹಾಗೂ ಮಹತ್ವವನ್ನು ಹೊಂದಿದ್ದು, ಇದನ್ನು ನಾವೆಲ್ಲರೂ ರಕ್ಷಿಸಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಹೊಣೆಯಾಗಿದೆ’ ಎಂದು ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಆಚಪ್ಪ ದೊಡ್ಡಬಸವರಾಜ ಹೇಳಿದರು.

ನಗರದ ಆದಿತ್ಯ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದಿನ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಇಲ್ಲದಂತಾಗಿದೆ. ಹೀಗಾಗಿ ಸಂವಿಧಾನದಲ್ಲಿರುವ ಪ್ರತಿಯೊಂದು ಕಾನೂನಿನ ಬಗ್ಗೆ ತಿಳಿವಳಿಕೆ ಮೂಡಿಸುವ ನಿಟ್ಟಿನಲ್ಲಿ ಕಾನೂನಿನ ಅರಿವು-ನೆರವು ಕಾರ್ಯಕ್ರಮ ಅಗತ್ಯವಾಗಿದೆ. ಮೊಬೈಲ್‍ನ್ನು ಜ್ಞಾನದ ವೃದ್ಧಿಗಾಗಿ ಉಪಯೋಗಿಸಬೇಕೇ ಹೊರತು ದುಶ್ಚಟಕ್ಕಾಗಿ ಅಲ್ಲ’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ರಾಮನಗೌಡ ಮಾತನಾಡಿ, ‘ಭಾರತ ದೇಶಕ್ಕೆ ಅಂಬೇಡ್ಕರ್ ಅವರು ಸಂವಿಧಾನವೆಂಬ ಬಹುದೊಡ್ಡ ಗ್ರಂಥವನ್ನು ಕೊಡುಗೆಯಾಗಿ ನೀಡಿದ್ದಾರೆ. ಸಂವಿಧಾನದಲ್ಲಿರುವ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮತ್ತು ಪತ್ರಿಕಾರಂಗ ಸರಿಯಾಗಿ ಕೆಲಸ ಮಾಡಿದರೆ ಸದೃಢ ರಾಷ್ಟ್ರ ನಿರ್ಮಾಣವಾಗಲಿದೆ’ ಎಂದು ಹೇಳಿದರು.

ಆದಿತ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಶ ರೆಡ್ಡಿ, ವಕೀಲರ ಸಂಘದ ಕಾರ್ಯದರ್ಶಿ ಶಿವಕುಮಾರ ಬೈರದೊರೆ, ಖಜಾಂಚಿ ಕೆ.ಶರಣಬಸವ ಉಮಲೂಟಿ, ಆದಿತ್ಯ ಪದವಿ ಕಾಲೇಜಿನ ಪ್ರಾಂಶುಪಾಲ ತಾಯಪ್ಪ ತಿಡಿಗೋಳ, ಪ್ರಾಚಾರ್ಯ ಜಡಿಸ್ವಾಮಿ ಗುಡದೂರು, ಉಪನ್ಯಾಸಕಿ ಮರಿಯಂ ಇದ್ದರು.

ಜನಸ್ಪಂದನ ಕಚೇರಿ: ಸ್ಥಳೀಯ ಗಂಗಾನಗರದಲ್ಲಿರುವ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರ ಜನಸ್ಪಂದನ ಕಚೇರಿಯಲ್ಲಿ ಸಂವಿಧಾನ ಸಮರ್ಪಣಾ ದಿನವನ್ನು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ, ಸಂವಿಧಾನ ಪೀಠಿಕೆಯನ್ನು ಬೋಧಿಸಿ ಪ್ರತಿಜ್ಞಾವಿಧಿ ಸ್ವೀಕರಿಸುವ ಮೂಲಕ ಆಚರಿಸಲಾಯಿತು. ಮುಖಂಡರಾದ ವೆಂಕಟೇಶ್ ರಾಗಲಪರ್ವಿ, ಶಿವಕುಮಾರ ಜವಳಿ, ಯಂಕನಗೌಡ ಗಿಣಿವಾರ, ಖಾಜಾಹುಸೇನ್ ರವುಡಕುಂದ, ವೀರೇಶ್ ರಾರಾವಿ, ಯೂನೂಸ್‍ಪಾಷಾ, ಹಬೀಬ್ ಖಾಜಿ, ಅಮರೇಶ್ ಗಿರಿಜಾಲಿ, ದಾದಪೀರ್, ಯುಸೂಫ್, ಹಂಪಮ್ಮ, ಅದನಗೌಡ, ಬಸವರಾಜ್, ಶಹಬಾಜ್, ವೀರೇಶ್, ಸಂತೋಷ ಇದ್ದರು.

ಬಿಜೆಪಿ ಕಚೇರಿ: ನಗರದ ಗಂಗಾವತಿ ರಸ್ತೆಯಲ್ಲಿರುವ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ ಮಾಡಲಾಯಿತು. ಬಿಜೆಪಿ ಮುಖಂಡ ಕೆ.ಕರಿಯಪ್ಪ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ‘ಸಂವಿಧಾನ ಸಮರ್ಪಣೆಗೊಂಡ ಈ ದಿನವನ್ನು ಭಾರತೀಯರೆಲ್ಲರೂ ಸ್ಮರಿಸಬೇಕು’ ಎಂದರು. ಮುಖಂಡರಾದ ನಬಿ ನದಾಫ್, ಸಿರಾಜ್‍ಪಾಷಾ, ನಾಗರಾಜ್ ದೇವರಗುಡಿ, ಮುತ್ತು ಬರಸಿ, ದುರುಗೇಶ ಇದ್ದರು.

ಎಕ್ಸ್‌ಲೆಂಟ್ ಕಾಲೇಜು: ನಗರದ ಎಕ್ಸ್‌ಲೆಂಟ್ ಕಾಲೇಜಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮುಖಾಂತರ ಸಂವಿಧಾನ ದಿನ ಆಚರಿಸಲಾಯಿತು. ಪ್ರಾಚಾರ್ಯ ಮಂಜುನಾಥ ಸೋಮಲಾಪುರ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ, ಸಂವಿಧಾನ ಪೀಠಿಕೆಯ ಪ್ರತಿಜ್ಞಾವಿಧಿ ಬೋಧಿಸಿದರು. ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ ನಾಗರಾಜ ಮುಕ್ಕುಂದ, ಉಪನ್ಯಾಸಕರಾದ ಅಯ್ಯಣ್ಣ ಬಡಿಗೇರ, ಜಮೀಲ್ ಅಹ್ಮದ್, ಸೂರ್ಯನಾರಾಯಣ, ತಿಮ್ಮಪ್ಪ ಕಲ್ಮಂಗಿ, ಮಹಾಂಕಾಳೆಪ್ಪ, ಮಹಿಬೂಬ್ ಪಾಷಾ ಕುನ್ನಟಗಿ ಇದ್ದರು.

ಸುಕಾಲಪೇಟೆ ಶಾಲೆ: ನಗರದ ಸುಕಾಲಪೇಟೆ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಸಂವಿಧಾನ ಸಮರ್ಪಣಾ ದಿನಾಚರಣೆ ಮಾಡಲಾಯಿತು. ಶಿಕ್ಷಕ ವೆಂಕನಗೌಡ ಸಂವಿಧಾನದ ಆಶಯವನ್ನು ನಾವೆಲ್ಲರೂ ಎತ್ತಿ ಹಿಡಿಯಬೇಕು ಎಂದು ಮಕ್ಕಳಿಗೆ ಸಂವಿಧಾನ ಮಹತ್ವ ಬಗ್ಗೆ ಪರಿಚಯಿಸಿದರು. ಎಸ್‍ಡಿಎಂಸಿ ಅಧ್ಯಕ್ಷ ಹೊನ್ನೂರು ಕಟ್ಟಿಮನಿ ಅವರು ಪ್ರಬಂಧ ಮತ್ತು ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಅಕ್ಷತಾ, ದ್ವಿತೀಯ ಸ್ಥಾನ ಪಡೆದ ಶ್ರೇಯಾ, ತೃತೀಯ ಸ್ಥಾನ ಪಡೆದ ಮೇಘನಾಗೆ ಪ್ರಶಸ್ತಿ ಪತ್ರ ವಿತರಿಸಿದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಅಕ್ಷತಾ, ದ್ವಿತೀಯ ಸ್ಥಾನ ಪಡೆದ ಅಪ್ಸನಾ, ತೃತೀಯ ಸ್ಥಾನ ಪಡೆದ ಶಾಂತಮ್ಮಗೆ ಮುಖ್ಯಶಿಕ್ಷಕಿ ರೇಣುಕಾ ಪ್ರಶಸ್ತಿ ಪತ್ರ ನೀಡಿದರು. ಶಿಕ್ಷಕಿಯರಾದ ಅಂಬಮ್ಮ, ಮುದುಕಮ್ಮ, ಮಾಳಮ್ಮ, ಪದ್ಮಾ, ಸುಧಾ, ಹುಲಿಗೆಮ್ಮ, ಪದ್ಮಾವತಿ ಇದ್ದರು.

ವೆಂಕಟೇಶ್ವರ ಕ್ಯಾಂಪ್: ತಾಲ್ಲೂಕಿನ ಗಾಂಧಿನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ವೆಂಕಟೇಶ್ವರ ಕ್ಯಾಂಪ್ ಗ್ರಾಮದಲ್ಲಿ ನಿರ್ಮಾಣವಾಗಿರುವ ಅಮೃತ ಸರೋವರ ಕೆರೆಯ ದಂಡೆಯ ಮೇಲೆ ಸಂವಿಧಾನ ಪೀಠಿಕೆಯ ಪ್ರತಿಜ್ಞೆಯನ್ನು ಸ್ವೀಕರಿಸುವ ಮೂಲಕ ಸಂವಿಧಾನ ದಿನ ಆಚರಿಸಲಾಯಿತು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್, ಪಿಡಿಒ ಮಹಮ್ಮದ್ ಹನೀಫ್, ತಾಂತ್ರಿಕ ಸಯೋಜಕ ಮೆಹಬೂಬ್, ಎಂಐಎಸ್ ಸಂಯೋಜಕ ವೀರೇಶ್, ತಾಲ್ಲೂಕು ಐಇಸಿ ಸಂಯೋಜಕ ಥಾಮಸ್, ಕಾರ್ಯದರ್ಶಿ ಜ್ಯೋತಿಕುಮಾರಿ ಇದ್ದರು.

ಸಿಂಧನೂರಿನ  ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರ ಜನಸ್ಪಂದನ ಕಚೇರಿಯಲ್ಲಿ ಸಂವಿಧಾನ ಸಮರ್ಪಣಾ ದಿನವನ್ನು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಸಂವಿಧಾನ ಪೀಠಿಕೆಯನ್ನು ಬೋಧಿಸಿ ಪ್ರತಿಜ್ಞಾವಿಧಿ ಸ್ವೀಕರಿಸುವ ಮೂಲಕ ಆಚರಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.