ADVERTISEMENT

10ರಂದು ಎಲ್ ಅಂಡ್ ಟಿ ಫೈನಾನ್ಸ್ ಎದುರು ಪ್ರತಿಭಟನೆ

ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಪ್ಪ ಮರಳಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 14:20 IST
Last Updated 3 ಜುಲೈ 2024, 14:20 IST
ಶರಣಪ್ಪ ಮರಳಿ
ಶರಣಪ್ಪ ಮರಳಿ   

ಸಿಂಧನೂರು: ಟ್ರ್ಯಾಕ್ಟರ್ ಖರೀದಿಸಿದ ರೈತರಿಗೆ ಕಿರುಕುಳ ನೀಡಿ, ಗೂಂಡಾಗಳಿಂದ ದೌರ್ಜನ್ಯ ಮಾಡಿ ಸಾಲ ವಸೂಲಾತಿ ಮಾಡುತ್ತಿರುವ ಎಲ್ ಅಂಡ್ ಟಿ ಫೈನಾನ್ಸ್ ಧೋರಣೆ ವಿರೋಧಿಸಿ ಜುಲೈ 10 ರಂದು ಸಿಂಧನೂರಿನ ಎಲ್ ಅಂಡ್ ಟಿ ಫೈನಾನ್ಸ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮರಳಿ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂಧನೂರು ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ, ಸಾಲ ವಸೂಲಾತಿ ಮಾಡಬಾರದೆಂದು ಬ್ಯಾಂಕ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಆದರೂ ಎಲ್‌ ಅಂಡ್‌ ಟಿ ಫೈನಾನ್ಸ್ ರೈತರ ಮನೆಗಳಿಗೆ ತೆರಳಿ ಗೂಂಡಾಗಿರಿ ನಡೆಸಿ ಟ್ರ್ಯಾಕ್ಟರ್‌ಗಳನ್ನು ಬಲವಂತದಿಂದ ತೆಗೆದುಕೊಂಡು ಬಂದು ಬೇರೆಯವರಿಗೆ ಮಾರಾಟ ಮಾಡುತ್ತಿರುವುದು ಖಂಡನೀಯವಾಗಿದೆ ಎಂದು ದೂರಿದರು.

ಲಿಂಗಸುಗೂರು ತಾಲ್ಲೂಕಿನ ಕಳ್ಳಿ ಲಿಂಗಸುಗೂರಿನಲ್ಲಿ ರೈತ ಅಯ್ಯಾಳೆಪ್ಪ ಅವರು ಕಂತು ಕಟ್ಟಿಲ್ಲವೆಂಬ ಕಾರಣಕ್ಕೆ ಟ್ರ್ಯಾಕ್ಟರ್ ವಶಪಡಿಸಿಕೊಂಡು ಎರಡು ದಿನಗಳಲ್ಲಿ ಬೇರೆಯವರಿಗೆ ಮಾರಾಟ ಮಾಡಿದೆ. ಅದೇ ರೀತಿ ರಾಯಚೂರು ತಾಲ್ಲೂಕಿನ ಹುಣಸಿಹಾಳ ಹುಡಾ ಗ್ರಾಮದ ನರಸಪ್ಪ ಅವರ ಪತ್ನಿಯನ್ನು ತಳ್ಳಾಡಿ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿದ್ದಾರೆ. ಒಂದೇ ದಿನಕ್ಕೆ ₹ 7,600 ದಂಡ ಹಾಕಿದ್ದಾರೆ. ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದರೂ  ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ. ಸಿಂಧನೂರು ತಾಲ್ಲೂಕಿನ ಮುಕ್ಕುಂದಾ ಗ್ರಾಮದಲ್ಲಿ 30 ಟ್ರ್ಯಾಕ್ಟರ್ ರೈತರ ಪರಿಸ್ಥಿತಿಯೂ ಇದೇ ರೀತಿಯಾಗಿದೆ ಎಂದು ಆರೋಪಿಸಿದರು.

ADVERTISEMENT

ಜಿಲ್ಲೆಯಲ್ಲಿ 16 ಸಾವಿರ ಟ್ರ್ಯಾಕ್ಟರ್‌ಗಳಿದ್ದು, ಅದರಲ್ಲಿ 1 ಸಾವಿರ ರೈತರಿಗೆ ಎಲ್ ಅಂಡ್ ಟಿ ಫೈನಾನ್ಸ್‌ನಿಂದ ಕಿರುಕುಳ ನೀಡಿ ಸಾಲ ವಸೂಲಾತಿ ಮಾಡಲಾಗುತ್ತಿದೆ. ಆದ್ದರಿಂದ ಮುಖ್ಯಮಂತ್ರಿ, ಜಿಲ್ಲಾಧಿಕಾರಿ ಈ ಫೈನಾನ್ಸ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಫೈನಾನ್ಸ್ ಅವರೊಂದಿಗೆ ಪೊಲೀಸರು ಸಾಲ ವಸೂಲಾತಿಗೆ ಹೋಗಬಾರದು. ರೈತರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ಅಂದು ನಗರದ ಯಲ್ಲಮ್ಮ ದೇವಸ್ಥಾನದಿಂದ ಬೃಹತ್ ಟ್ರ್ಯಾಕ್ಟರ್ ರ‍್ಯಾಲಿ ನಡೆಸಿ, ಎಲ್ ಅಂಡ್ ಟಿ ಫೈನಾನ್ಸ್ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಜೋಳ ಖರೀದಿ ಹಣವನ್ನು ಇನ್ನೂ ಶೇ 60 ರೈತರಿಗೆ ಜಮಾ ಮಾಡಿಲ್ಲ. ಬರ ಪರಿಹಾರ ಹಣ ಹಾಕಬೇಕು. ಬೆಳೆ ಬೆಳೆದ ಖರ್ಚಿಗೆ ಅನುಗುಣವಾಗಿ ಯೋಗ್ಯ ಬೆಲೆ ನೀತಿ ಜಾರಿಗೊಳಿಸಬೇಕು. ಪ್ರಗತಿ ಗ್ರಾಮೀಣ ಬ್ಯಾಂಕ್ ಓಟಿಎಸ್‍ಗೆ ಬರುತ್ತಿಲ್ಲ. ಆದ್ದರಿಂದ ಸರ್ಕಾರ ಮಧ್ಯಪ್ರವೇಶಿಸಿ ಬ್ಯಾಂಕ್ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿ ಓಟಿಎಸ್ ಮಾಡಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಉಪಾಧ್ಯಕ್ಷ ರಾಮಯ್ಯ ಜವಳಗೇರಾ, ತಿಮ್ಮಣ್ಣ ಭೋವಿ, ಮುಖಂಡರಾದ ವೆಂಕಟೇಶ ಕೋಟಾ, ಅಧ್ಯಕ್ಷ ವೆಂಕಟೇಶ ರತ್ನಾಪುರ ಹಟ್ಟಿ, ಮೌಲಾಸಾಬ ನಾಡಗೌಡ, ರಮೇಶ ಮುಕ್ಕುಂದಾ, ಕೊಠಾರಿ ಜಯರಾಘವೇಂದ್ರ, ನಾಗಪ್ಪ ಬೂದಿವಾಳ, ಪಾರಯ್ಯಸ್ವಾಮಿ ಬೂದಿವಾಳ, ಶಿವಮೂರ್ತೆಪ್ಪ ಪೂಜಾರಿ, ಮಾನಯ್ಯ ಅಂಕುಶದೊಡ್ಡಿ, ಹನುಮಂತಪ್ಪ ಬೂದಗುಂಪಿ, ಹನುಮಂತ ಬೂದಿವಾಳ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.