ಪ್ರಜಾವಾಣಿ ವಾರ್ತೆ
ರಾಯಚೂರು: ಜಿಲ್ಲೆಯಲ್ಲಿ ಬಿಟಿ ಹತ್ತಿ ನಾಟಿ ಮಾಡಿದ ಬೆಳೆಗಳಿಗೆ ರೋಗದಿಂದ ನಷ್ಟದ ಆತಂಕದಲ್ಲಿರುವ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಆನಂತರ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಆರ್. ದೇವಿಕಾ ಅವರ ಮೂಲಕ ಮುಖ್ಯಮಂತ್ರಿ ಮನವಿ ಸಲ್ಲಿಸಿ, ಬಿಟಿ ಹತ್ತಿಯ ತಳಿಯ ಗಿಡಗಳು ಹಳದಿ ಬಣ್ಣಕ್ಕೆ ಬಂದು ಒಣಗಿ ಹೋಗುತ್ತಿವೆ ಇದರಿಂದ ಸಾಕಷ್ಟು ರೈತರು ನಷ್ಟಕ್ಕೊಳಗಾಗಿದ್ದಾರೆ. ಬಿಟಿ ಹತ್ತಿ ಬೆಳೆಯನ್ನು ತೆಗೆದುಹಾಕಿದ ರೈತರಿಗೆ ಪರಿಹಾರ ನೀಡಬೇಕು ಹಾಗೂ ಜಿಲ್ಲಾಧಿಕಾರಿಗೆ ಹಾಗೂ ಜಂಟಿ ಕೃಷಿ ನಿರ್ದೇಶಕರಿಗೆ ಹಾಗೂ ಕಂದಾಯ ಇಲಾಖೆಗೆ ನಷ್ಟದ ಕುರಿತು ಸಮೀಕ್ಷೆ ನಡೆಸಲು ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.
ಹತ್ತಿಯ ಬೀಜವನ್ನು ರೈತರು ಎಂಆರ್‌ಪಿ ದರಕ್ಕಿಂತ ಹೆಚ್ಚಿನ ಬೆಲೆ ನೀಡಿ ಖರೀದಿಸಿದ್ದಾರೆ. ಈ ಹತ್ತಿ ಗಿಡ ಕೆಂಪು ಹಾಗೂ ಹಳದಿ ಬಣ್ಣಕ್ಕೆ ತಿರುಗಿರುವ ಬಗ್ಗೆ ಕೆವಿಕೆ ಕೃಷಿ ತಜ್ಞರಿಗೂ ನೀಡಲಾಗಿದೆ. ಈ ಸಮಸ್ಯೆ ಪರಿಹಾರಕ್ಕಾಗಿ ಮ್ಯಾಗ್ನಿಷಿಯಂ ಹಾಗೂ ಮನೋಕೊಟೋಫಸ್ ಎಂ-45 ದ್ರಾವಣ ಸಿಂಗಡಿಸಲಾಗಿದೆ. ಆದರೂ ಬೆಳೆ ಹತೋಟಿಗೆ ಬಂದಿಲ್ಲ ಎಂದು ದೂರಿದರು.
ಜಿಲ್ಲೆಯ ಮಾನ್ವಿ, ಸಿಂಧನೂರು ಖರೀದಿ ಕೇಂದ್ರಗಳಲ್ಲಿ ರೈತರಿಂದ ಖರೀದಿಸಿ ಜೋಳದ ಹಣವನ್ನು ಕೂಡಲೇ ಪಾವತಿಸಬೇಕು. ಫಸಲ್ ಭಿಮಾ ವಿಮೆಯಡಿ ಹಣ ಪಾವತಿಸಿದ ರೈತರಿಗೆ ಪರಿಹಾರ ಹಣ ನೀಡಬೇಕು ಹಾಗೂ ಜಿಲ್ಲೆಯನ್ನು ಬರಪೀಡಿತ ಜಿಲ್ಲೆವೆಂದು ಘೋಷಣೆ ಮಾಡಬೇಕು. ರೈತರು ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳನ್ನು ಪಡೆದಿರುವ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಒಂದು ವಾರದೊಳಗಾಗಿ ಸೂಕ್ತ ಕ್ರಮ ಕೈಗೊಂಡು ಪರಿಹರಿಸದೇ ಇದ್ದರೆ, ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಲಕ್ಷ್ಮಣಗೌಡ ಕಡಗಂದೊಡ್ಡಿ, ಜಿಲ್ಲಾ ಗೌರವಾಧ್ಯಕ್ಷ ಮಜೀದ್‍ಸಾಬ್ ಬಿಚ್ಚಾಲಿ, ಉಪಾಧ್ಯಕ್ಷ ಕೆ.ವೀರೇಶಗೌಡ, ಪದಾಧಿಕಾರಿ ಹುಲಿಗೆಪ್ಪ ಜಾಲಿಬೆಂಚಿ, ನರಸರೆಡ್ಡಿ ಬಾಯಿದೊಡ್ಡಿ, ರಮೇಶ ಗಾಣಧಾಳ, ತಿಮ್ಮಪ್ಪ ಬಾಪೂರ, ಮಮದಾಪುರ ಮಲ್ಲಿಕಾರ್ಜುನ, ಶ್ರೀಧರ ಜೇಗರಕಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.