ADVERTISEMENT

ಏಮ್ಸ್‌ಗಾಗಿ ಕಲ್ಯಾಣ ಕರ್ನಾಟಕದಲ್ಲಿ ಪ್ರತಿಭಟನೆ 16ರಂದು

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 16:17 IST
Last Updated 10 ಜುಲೈ 2024, 16:17 IST

ರಾಯಚೂರು: ಕೇಂದ್ರ ಸರ್ಕಾರ ಜಿಲ್ಲೆಗೆ ಏಮ್ಸ್ ಮಂಜೂರು ಮಾಡಲು ನಿರ್ಲಕ್ಷ್ಯ ತೋರಿದ್ದನ್ನು ಖಂಡಿಸಿ ಜುಲೈ 16ರಂದು ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರಾಯಚೂರು ಏಮ್ಸ್ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಬಸವರಾಜ ಕಳಸ ತಿಳಿಸಿದರು.

ಧಾರವಾಡ ಜಿಲ್ಲೆಯ ರಾಜಕೀಯ ನಾಯಕರ ಕುತಂತ್ರದಿಂದ ಹಿಂದುಳಿದ ರಾಯಚೂರು ಜಿಲ್ಲೆಗೆ ಐಐಟಿ ಕೈತಪ್ಪಿತು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಜಿಲ್ಲೆಯ ಪಟ್ಟಿಯಲ್ಲಿ ರಾಯಚೂರು ಜಿಲ್ಲೆಯೂ ಸೇರಿದ್ದು ಇಲ್ಲಿ ಏಮ್ಸ್ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿ ಕಳೆದ 790 ದಿನಗಳಿಂದ ಧರಣಿ ನಡೆಸುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಬಾರಿ ಪತ್ರ ಬರೆದಿದ್ದಾರೆ. ಈಚೆಗೆ ಖುದ್ದಾಗಿ ಪ್ರಧಾನಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಮುಂಬರುವ ಬಜೆಟ್ ಅಧಿವೇಶನದಲ್ಲಿ ಏಮ್ಸ್ ಮಂಜೂರು ಮಾಡಬೇಕು’ ಎಂದು ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ಒತ್ತಾಯಿಸಿದರು.

ಏಮ್ಸ್ ಹೋರಾಟವನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಸ್ತರಿಸಲು ಮುಂದಾಗಿದ್ದು ಕಲಬುರಗಿ, ಕೊಪ್ಪಳ ಜಿಲ್ಲೆಯಿಂದ ಉತ್ತಮ ಸ್ಪಂದನೆ ದೊರೆತಿದೆ. ಉಳಿದ ಜಿಲ್ಲೆಗಳಿಗೂ ಭೇಟಿ ನೀಡಿ ಮನವರಿಕೆ ಮಾಡಲಾಗುತ್ತಿದೆ. ಏಮ್ಸ್ ಹೋರಾಟಗಾರರು ಎರಡು ತಂಡವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಚರಿಸಿ ಜನರ ಸಹಕಾರ ಪಡೆಯುತ್ತಿದ್ದೇವೆ ಎಂದರು.

ADVERTISEMENT

ಜುಲೈ 16ರಂದು ಹೋರಾಟಗಾರರಿಂದ ವಿದ್ಯಾರ್ಥಿಗಳೊಂದಿಗೆ ಬೃಹತ್ ಪ್ರತಿಭಟನೆ ಮಾಡಲಾಗುವುದು. ಬಜೆಟ್ ಅಧಿವೇಶನದಲ್ಲಿ ಜಿಲ್ಲೆಗೆ ಏಮ್ಸ್ ಮಂಜೂರು ಮಾಡದಿದ್ದರೆ ಆಗಸ್ಟ್ 6ರಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸಲಾಗುವುದು. ನಮ್ಮ ಹೋರಾಟಕ್ಕೆ ದೆಹಲಿಯಲ್ಲಿ ನೆಲೆಸಿದ ಕನ್ನಡಿಗರು ಬೆಂಬಲ ನೀಡುತ್ತಿದ್ದಾರೆ. ರಾಜ್ಯದಿಂದ ಆಯ್ಕೆಯಾದ ಸಂಸದರು ಹಾಗೂ ರಾಜ್ಯದ ಕೇಂದ್ರ ಸಚಿವರು ಅಧಿವೇಶನದಲ್ಲಿ ಪ್ರಸ್ತಾಪಿಸಿ ಬೆಂಬಲ ನೀಡಬೇಕು ಎಂದು ಒತ್ತಾಯಿಸಿದರು.

ಹೋರಾಟ ಸಮಿತಿ ಸಹ ಸಂಚಾಲಕ ಅಶೋಕ ಕುಮಾರ ಜೈನ್, ಜಾನ್ ವೆಸ್ಲಿ, ವಿನಯಕುಮಾರ, ವಿನೋದರೆಡ್ಡಿ, ಕಾಮರಾಜ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.