ADVERTISEMENT

ರಾಯಚೂರು: ಸರ್ಕಾರದ ವೈಫಲ್ಯ ಖಂಡಿಸಿ 18ರಂದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 15:08 IST
Last Updated 15 ಜುಲೈ 2024, 15:08 IST
ಚಾಮರಸ ಮಾಲಿ ಪಾಟೀಲ
ಚಾಮರಸ ಮಾಲಿ ಪಾಟೀಲ   

ರಾಯಚೂರು: ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಹಾಗೂ ರೈತ ವಿರೋಧಿ ನೀತಿ ಖಂಡಿಸಿ ಜುಲೈ 18ರಂದು  ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಹೇಳಿದರು.

ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ಜನಪರವಾದ ಕೆಲಸ ಮಾಡಲು ವಿಫಲವಾಗಿದ್ದ ಕಾರಣ ಜನರು ಅಧಿಕಾರದಿಂದ ದೂರವಿಟ್ಟು ಕಾಂಗ್ರೆಸ್‌ಗೆ ಜನಾದೇಶ ನೀಡಿದ್ದಾರೆ. ಆದರೆ, ಸರ್ಕಾರ ಬದಲಾದರೂ ಆಡಳಿತ ಬದಲಾಗಿಲ್ಲ. ರಾಜ್ಯದಲ್ಲಿ ಮುಡಾ, ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದ ಭ್ರಷ್ಟಾಚಾರ, ಪರಿಶಿಷ್ಟರ ಅನುದಾನ ದುರ್ಬಳಕೆ ಪ್ರಕರಣಗಳು ನಡೆದಿದ್ದು ರಾಜ್ಯಕ್ಕೆ ಉತ್ತಮ ಆಡಳಿತ ನೀಡುವಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ವಿಫಲರಾಗಿದ್ದಾರೆ ಎಂದು ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ದೂರಿದರು.

ಕೃಷಿ ಕ್ಷೇತ್ರ ಉಳಿಬೇಕಾದರೆ ಅನೇಕ ಸವಲತ್ತುಗಳನ್ನು ಕೃಷಿ ಕ್ಷೇತ್ರಕ್ಕೆ ನೀಡಬೇಕು. ರಾಜ್ಯ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ರೈತರು ಪಂಪ್‌ಸೆಟ್ ಅಳವಡಿಸಲು ಹಣ ಖರ್ಚು ಮಾಡಬೇಕಿದೆ. ರೈತ ವಿರೋಧಿ‌ ನೀತಿ ಅನುಸರಿಸುತ್ತಿರುವ ಧೋರಣೆ ಖಂಡಿಸಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಮಾಡಲಾಗುವುದು ಎಂದು ತಿಳಿಸಿದರು.

ADVERTISEMENT

ಜುಲೈ 21ರಂದು ಹುತಾತ್ಮರ ದಿನ: ರೈತ ಸಂಘದಿಂದ ಬೆಳಗಾವಿಯ ಯರಗಟ್ಟಿಯಲ್ಲಿ  ಜುಲೈ 21ರಂದು 45ನೇ ಹುತಾತ್ಮರ ದಿನಾಚರಣೆ ಹಾಗೂ ರಾಜ್ಯ ಮಟ್ಟದ ಪ್ರತಿನಿಧಿಗಳ ಸಮಾವೇಶವನ್ನು ಆಯೋಜಿಸಲಾಗಿದೆ. ರೈತ ಚಳುವಳಿಯನ್ನು ರಾಜ್ಯದ ಮೂಲೆ-ಮೂಲೆಗೂ ವಿಸ್ತರಿಸಲು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ಹೋರಾಟ ರೂಪಿಸಲು ಹಾಗೂ ಜನಪರ ಪರ್ಯಾಯ ರಾಜಕಾರಣನ್ನು ಬಲಗೊಳಿಸಲು ಸಮಾವೇಶದಲ್ಲಿ ಸಮಾಲೋಚನೆ ನಡೆಸಲಾಗುವುದು ಎಂದರು.

ಮುಖಂಡರಾದ ದೇವರಾಜ ನಾಯಕ, ಪ್ರಭಾಕರ್ ಪಾಟೀಲ, ಬೂದೆಯ್ಯಸ್ವಾಮಿ ಗಬ್ಬೂರು, ಗೋವಿಂದ ನಾಯಕ, ಮಲ್ಲಣ್ಣ ದಿನ್ನಿ,  ಬ್ರಹ್ಮಯ್ಯ ಆಚಾರಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.