ರಾಯಚೂರು: ಅವಶ್ಯಕ ವಸ್ತುಗಳ ‘ಸಂಪೂರ್ಣ ಸರ್ಕಾರಿ ವ್ಯಾಪಾರ’ ಜಾರಿಗೊಳಿಸಬೇಕು. ಕನಿಷ್ಠ ಬೆಂಬಲ ಬೆಲೆ ಕಾನೂನು ಬದ್ಧಗೊಳಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ(ಎಐಕೆಕೆಎಂಎಸ್) ಮಂಗಳವಾರ ಪ್ರತಿಭಟನೆ ನಡೆಸಿತು.
ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಎಐಕೆಕೆಎಂಎಸ್ ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಬಳಿಕ ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.
‘ದೇಶದಾದ್ಯಂತ ರೈತರು, ಕೃಷಿ ಕಾರ್ಮಿಕರು ಸಂಕಷ್ಟದಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಕೃಷಿ ಪರಿಕರಗಳು, ಬೀಜ, ರಸಗೊಬ್ಬರ ದುಬಾರಿಯಾಗಿದ್ದು, ಅನೇಕ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೃಷಿ ಚಟುವಟಿಕೆ ನಡೆಸಲು ಆಗದೇ, ಬೆಲೆ ಏರಿಕೆ ಬಿಸಿಯಿಂದ ಅನೇಕ ರೈತರು ಆತ್ಮಹತ್ಯೆಗೆ ಗುರಿಯಾಗುತ್ತಿದ್ದಾರೆ’ ಎಂದು ದೂರಿದರು.
‘ದೇಶದ ಕಾರ್ಪೋರೇಟ್ ಕಂಪನಿಗಳ ₹15 ಲಕ್ಷ ಕೋಟಿ ಕೇಂದ್ರ ಸರ್ಕಾರ ವ್ಯಯಿಸಿದೆ. ಆದರೆ 23 ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಯೋಜನೆಯಡಿ ಖರೀದಿಸಲು ₹2 ಲಕ್ಷ ಕೋಟಿ ಖರ್ಚು ಮಾಡಲು ತಯಾರಿಲ್ಲ. ಕನಿಷ್ಠ ಬೆಂಬಲ ಬೆಲೆಗೆ ರೈತರಿಂದ ಖರೀದಿಸಿದ ಬೆಲೆ ಮರು ಮಾರಾಟ ಮಾಡಿದಾಗ ವಾಪಸ್ ಬರುತ್ತದೆ ಎಂದು ಸರ್ಕಾರಕ್ಕೆ ಮನವಿ ಮಾಡಿದರೂ ಒಪ್ಪಲು ತಯಾರಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕೃಷಿ ಕಾರ್ಮಿಕರಿಗೆ ವರ್ಷ ಪೂರ್ತಿ ಉದ್ಯೋಗ ನೀಡಬೇಕು. ಸಮರ್ಪಕವಾಗಿ ವೇತನ ಪಾವತಿಸಬೇಕು. ವಿದ್ಯುತ್ ಕಾಯ್ದೆ 2023 ಕೂಡಲೇ ಹಿಂಪಡೆಯಬೇಕು. ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವುದನ್ನು ಕೈಬಿಡಬೇಕು. ರೈತರ ಕೃಷಿ ಸಾಲ ಮನ್ನಾ ಮಾಡಬೇಕು. 60 ವರ್ಷ ದಾಟಿದ ರೈತರಿಗೆ ಮಾಸಿಕ ₹10 ಸಾವಿರ ಪಿಂಚಣಿ ನೀಡಬೇಕು’ ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ದುರ್ಗಣ್ಣ ಅಡಕಲಗುಡ್ಡ, ಕಾರ್ಯದರ್ಶಿ ಮಲ್ಲನಗೌಡ ಅಂಚೆಸೂಗೂರು, ರಿಯಾನುದ್ದೀನ್, ಕೆ.ಪಾಂಡುರಂಗ, ಈರೇಶ ಜಕ್ಕಲದಿನ್ನಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.