ಲಿಂಗಸುಗೂರು: ಪಾರಿವಾಳಗಳ ಸಾಕಣೆಗೆ ಪ್ರಾಚೀನ ಕಾಲದಿಂದಲೂ ಪುರಾವೆಗಳು ಸಿಗುತ್ತವೆ. ಸೈನ್ಯ ಹಾಗೂ ರಾಜರ ಆಡಳಿತದಲ್ಲಿ ಸಂದೇಶ ರವಾನೆಗೆ ಪಾರಿವಾಳಗಳೇ ವಾಹಕಗಳಾಗಿದ್ದವು. 19ನೇ ಶತಮಾನದೀಚೆಗೆ ‘ರೇಸಿಂಗ್ ಹೋಮರ್’ (ಮನೆಗೆ ಹಿಂದಿರುಗುವ ಪಾರಿವಾಳ) ಸಾಕಣೆ ಹವ್ಯಾಸವಾಗಿ ಬದಲಾಗಿದೆ.
ರಾಯಚೂರು ಜಿಲ್ಲೆಯಲ್ಲೂ ಇಂಥ ಪಾರಿವಾಳಗಳ ಸಾಕಣೆದಾರರಿದ್ದಾರೆ. ದ್ವಿತೀಯ ಪಿಯುಸಿ ಓದಿರುವ, ಸೆಂಟ್ರಿಂಗ್ ಕೆಲಸ, ಬೀದಿ ಬದಿ ಎಗ್‍ರೈಸ್ ಮಾರುವಂಥ ಕಾಯಕದಲ್ಲಿ ತೊಡಗಿರುವ ಲಿಂಗಸುಗೂರಿನ ರಾಘವೇಂದ್ರ ಭಜಂತ್ರಿ ರೇಸಿಂಗ್ ಹೋಮರ್ ಪಾರಿವಾಳ ಸಾಕಣೆ ಹವ್ಯಾಸದಿಂದ ಗಮನ ಸೆಳೆಯುತ್ತಾರೆ.
ಬಾಲ್ಯದಲ್ಲೇ ಪಾರಿವಾಳ ಸಾಕಣೆ ನಂಟು ಹತ್ತಿಸಿಕೊಂಡ ಭಜಂತ್ರಿ, ದಶಕದೀಚೆಗೆ ರೇಸಿಂಗ್‍ಗಾಗಿ ತರಬೇತುಗೊಳಿಸಿದ ವಿವಿಧ ಬಗೆಯ 60ಕ್ಕೂ ಹೆಚ್ಚು ಪಾರಿವಾಳಗಳನ್ನು ಸಾಕುತ್ತಿದ್ದಾರೆ. ಅವರ ಬಳಿ 35 ಗಂಡು, 25 ಹೆಣ್ಣು ಪಾರಿವಾಳಗಳಿದ್ದು, ತಳಿಗಳ ಅಭಿವೃದ್ಧಿ, ಅವುಗಳಿಗೆ ತರಬೇತಿ ನೀಡುವ ಜೊತೆಗೆ ಸ್ಪರ್ಧೆಗೂ ಬಿಡುತ್ತಿದ್ದಾರೆ.
ಇವುಗಳ ಸಾಕಣೆಗಾಗಿ ಮನೆಯ ಮೇಲೆ ವಿಶೇಷ ಗೂಡು ನಿರ್ಮಿಸಿದ್ದಾರೆ. ಅದರಲ್ಲಿ ವಿಶೇಷ ಮಣ್ಣು ಹಾಗೂ ಬೆಣಚು ಕಲ್ಲು ಹಾಕಿದ್ದಾರೆ. ವಿವಿಧ ಬಗೆ ಕಾಳು–ಕಡಿಗಳ ಆಹಾರ ಪೂರೈಸಿ, ಅವುಗಳಿಗೆ ನೀರುಣಿಸುತ್ತಿದ್ದಾರೆ. ನಿತ್ಯ ಬೆಳಿಗ್ಗೆ 2-3 ತಾಸು ವಿಹಾರ ಮಾಡಿಸುತ್ತಾರೆ.
ರಾಯಚೂರಿನ ಕ್ಲಬ್‍ವೊಂದರಲ್ಲಿ ಸದಸ್ಯತ್ವ ಪಡೆದು 180, 280, 400, 550, 750, 1000 ಕಿ.ಮೀ. ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮೆರೆದಿದ್ದರು. ತಾಂತ್ರಿಕ ಕಾರಣದಿಂದ ಕ್ಲಬ್‍ನಿಂದ ಹೊರಬಂದು 13 ಸದಸ್ಯರ ತಂಡದೊಂದಿಗೆ 2023ರಲ್ಲಿ ಲಿಂಗಸುಗೂರು ಹೋಮಿಂಗ್ ಪಿಜಿಯನ್ಸ್ ಸೊಸೈಟಿ (ಎಲ್‍ಎಚ್‍ಪಿಎಸ್) ನೋಂದಣಿ ಮಾಡಿಕೊಂಡಿದ್ದಾರೆ.
2023ರ ಮಧ್ಯಭಾಗದಲ್ಲಿ ಕಲ್ಯಾಣ ಕರ್ನಾಟಕ ಹೋಮಿಂಗ್ ಪಿಜಿಯನ್ಸ್ ಫೆಡರೇಷನ್ (ಕೆ.ಕೆ.ಎಚ್.ಪಿ.ಎಫ್) ಸ್ಥಾಪಿಸಿ ಈ ಭಾಗದ ಹವ್ಯಾಸಿ ರೇಸಿಂಗ್ ಹೋಮರ್ ಸ್ಪರ್ಧಾಳುಗಳಿಗೆ ಭಾಗವಹಿಸಲು ಅವಕಾಶ ಕಲ್ಪಿಸಿದೆ. ಎಲ್‍ಎಚ್‍ಪಿಎಸ್‌ನ ಎಲ್ಲ ಹಂತದ ಸ್ಪರ್ಧೆಗಳಲ್ಲಿ ಭಜಂತ್ರಿ ಅವರ ಪಾರಿವಾಳಗಳು ಮೊದಲ ಸ್ಥಾನ ಪಡೆದು ಚಾಂಪಿಯನ್ ಎನಿಸಿವೆ. ಕೆಕೆಎಚ್‍ಪಿಎಫ್ ಸಂಸ್ಥೆ ಈಚೆಗೆ ಆಯೋಜಿಸಿದ್ದ 1 ಸಾವಿರ ಕಿ.ಮೀ ರೇಸಿಂಗ್ ಹೋಮರ್ ಸ್ಪರ್ಧೆಯಲ್ಲಿ ಆರು ಪಾರಿವಾಳ ಬಿಡಲಾಗಿತ್ತು. ನಿಗದಿತ ಅವಧಿಯಲ್ಲಿ ಆರು ಪಾರಿವಾಳ ಮರಳಿ ಗೂಡು ಸೇರಿವೆ.
‘ಕಾಳುಕಡಿ, ಔಷಧಿ ಇತರೆ ಖರ್ಚು–ವೆಚ್ಚ ಬರುತ್ತದೆ. ರೇಸಿಂಗ್ ಬಿಡುವುದರಿಂದ ಲಾಭವಿಲ್ಲ. ಹವ್ಯಾಸವಾಗಿ ಪಾರಿವಾಳ ಸಾಕಣೆ ಮಾಡಿದ್ದು, ಸಾವಿರ ಕಿ.ಮೀ ಹಾರಿದ ಪಾರಿವಾಳ ಮಾರಿದರೆ ಹಣ ಕೈ ಸೇರುತ್ತದೆ. ನಾನು ಸ್ವತಃ ಪಾರಿವಾಳ ಬ್ರೀಡಿಂಗ್ ಮಾಡುತ್ತಿದ್ದು, ಮರಿಗಳಿಗೂ ತರಬೇತಿ ನೀಡುತ್ತಿದ್ದೇವೆ’ ಎಂದು ಭಜಂತ್ರಿ ಹೇಳುತ್ತಾರೆ.
ಏನಿದು ರೇಸಿಂಗ್?
ಪಾರಿವಾಳದ ಕಾಲಿಗೆ ನಿರ್ದಿಷ್ಟ ಬ್ಯಾಂಡ್ ಹಾಕಿ ಪೂರ್ವ ನಿಗದಿತ ಸ್ಥಳದಿಂದ ಅದನ್ನು ಸ್ಪರ್ಧೆಗೆ ಬಿಡಲಾಗುತ್ತದೆ. ಪಾರಿವಾಳ ಪ್ರಯಾಣಿಸಿದ ದೂರ ಹಾಗೂ ಅವಧಿಯನ್ನು ಅಂಕಿ ಸಂಖ್ಯೆ ದಾಖಲಿಸಿ ಕಡಿಮೆ ಅವಧಿಯಲ್ಲಿ ಗುರಿ ತಲುಪುವ ಪಾರಿವಾಳಗಳನ್ನು ವಿಜಯಿ ಎಂದು ಘೋಷಿಸುವ ಸ್ಪರ್ಧೆ ಇದಾಗಿದೆ.
ಹವ್ಯಾಸಿಗಳೇ ಒಟ್ಟಾಗಿ ಫೆಡರೇಷನ್ ಸ್ಥಾಪಿಸಿ ಪಾರಿವಾಳಗಳ ಕ್ರೀಡಾ ಸ್ಪರ್ಧೆ ನಡೆಸುತ್ತಿದ್ದೇವೆ. ಸರ್ಕಾರ ಇದನ್ನು ಕ್ರೀಡೆಯಾಗಿ ಗುರುತಿಸಿ ಪ್ರೋತ್ಸಾಹಿಸಲಿಮಣಿಕಂಠ ಬಳ್ಳಾರಿ ಅಧ್ಯಕ್ಷ ಕೆ.ಕೆ.ಎಚ್.ಪಿ.ಎಫ್ ಹೊಸಪೇಟೆ
ಹವ್ಯಾಸಕ್ಕೆ ಆರ್ಥಿಕ ಸಂಕಷ್ಟ ಅಡ್ಡಿಯಾಗದು. ವೈಯಕ್ತಿಕ ಖರ್ಚು ಕಡಿಮೆ ಮಾಡಿ ರೇಸಿಂಗ್ ಹೋಮರ್ ಪಾರಿವಾಳ ಸಾಕುತ್ತಿರುವೆರಾಘವೇಂದ್ರ ಭಜಂತ್ರಿ ಅಧ್ಯಕ್ಷ ಎಲ್‍ಎಚ್‍ಪಿಎಸ್ ಲಿಂಗಸುಗೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.