ADVERTISEMENT

ರಾಘವೇಂದ್ರ ಸ್ವಾಮಿ ಉತ್ತರಾರಾಧನೆ: ಅದ್ಧೂರಿ ಮಹಾ ರಥೋತ್ಸವ

ಹೆಲಿಕಾಪ್ಟರ್‌ ಮೂಲಕ ಪುಷ್ಪವೃಷ್ಟಿ; ಪ್ರಹ್ಲಾದ ರಾಜರ ಪಲ್ಲಕ್ಕಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2023, 18:55 IST
Last Updated 2 ಸೆಪ್ಟೆಂಬರ್ 2023, 18:55 IST
ಮಂತ್ರಾಲಯದ ರಾಜಬೀದಿಯಲ್ಲಿ ನಡೆದ ಮಹಾರಥೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು
ಮಂತ್ರಾಲಯದ ರಾಜಬೀದಿಯಲ್ಲಿ ನಡೆದ ಮಹಾರಥೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು   

ರಾಯಚೂರು: ಮಂತ್ರಾಲಯದ ರಾಯರ ಮಠದಲ್ಲಿ ಗುರು ಸಾರ್ವಭೌಮ ರಾಘವೇಂದ್ರ ಸ್ವಾಮಿಗಳ 352ನೇ ಆರಾಧಾನಾ ಮಹೋತ್ಸವದ ಪ್ರಯುಕ್ತ ಉತ್ತರಾರಾಧನೆ ಸಂಭ್ರಮದಿಂದ ಶನಿವಾರ ನಡೆಯಿತು.

ಗುರುರಾಯರ ಉತ್ಸವ ಮೂರ್ತಿಯನ್ನು ಮಠದ ಆವರಣದಿಂದ ಕಲಾ ತಂಡಗಳ ಮೆರವಣಿಗೆ ಮೂಲಕ ಗುರು ಸಾರ್ವಭೌಮ ವಿದ್ಯಾಪೀಠದ ಆವರಣಕ್ಕೆ ತರಲಾಯಿತು. ವಿದ್ಯಾಪೀಠದ ವಿದ್ಯಾರ್ಥಿಗಳು ರಾಘವೇಂದ್ರ ಅಷ್ಟೋತ್ತರ ಪಠಣ ಮಾಡಿದ ಬಳಿಕ ಮಠಕ್ಕೆ ತಂದು ಮೂಲ ಬೃಂದಾವನ ಪೂಜೆ ಸಲ್ಲಿಸಲಾಯಿತು. ವಸಂತೋತ್ಸವದ ನಂತರ ಮಹಾರಥೋತ್ಸವ ನಡೆಯಿತು.

ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಮಾತನಾಡಿ, ‘ಆರಾಧನಾ ಮಹೋತ್ಸವದ ಉತ್ತರಾರಾಧನೆ ಸಮಯದಲ್ಲಿ ಭಕ್ತರ ಸೇವೆ ಮೆಚ್ಚಿ ಗುರುರಾಯರು ಆನಂದದಿಂದ ಮಹಾರಥದಲ್ಲಿ ವಿರಾಜಮಾನರಾಗಿ ಹರಸಿದ್ದಾರೆ’ ಎಂದರು.

ADVERTISEMENT

‘ಇಂದು ದೇಶ ಜಗದ್ಗುರು ಆಗುವ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ. ಚಂದ್ರಯಾನ ಯಶಸ್ವಿಯಾದ ಬಳಿಕ ಇಂದು ಸೂರ್ಯಯಾನ ಆರಂಭಿಸಿದೆ. ಇದರಲ್ಲೂ ಯಶಸ್ವಿ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ’ ಎಂದು ಹೇಳಿದರು.

ನಂತರ ಹೆಲಿಕಾಪ್ಟರ್ ಮೂಲಕ ರಥಕ್ಕೆ ಶ್ರೀಗಳು ಪುಷ್ಪವೃಷ್ಟಿ ಮಾಡಿದರು. ಮಹಾ ರಥೋತ್ಸವದಲ್ಲಿ ಚಂಡೆ ಮೇಳ, ಡೊಳ್ಳು ಕುಣಿತ, ಬ್ಯಾಂಡ್ ವಾದನ, ಭಜನಾ ಮಂಡಳಿಗಳು ಸೇರಿದಂತೆ ಇತರೆ ಕಲಾ ವಾದ್ಯಗಳು, ಕಲಾ ತಂಡಗಳ ನೃತ್ಯ ಪ್ರದರ್ಶನ ನಡುವೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಹೋತ್ಸವ ಸಂಪನ್ನಗೊಂಡಿತು.

ಗ್ರಂಥಗಳ ಪಾರಾಯಣ:

ಬೆಳಗಿನ ಜಾವ ಮಠದಲ್ಲಿ ಗ್ರಂಥಗಳ ಪಾರಾಯಣ, ಪ್ರವಚನ, ದಾಸವಾಣಿ, ರಾಯರ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ನವರತ್ನ ಒಳಗೊಂಡ ಚಿನ್ನಾಭರಣಗಳಿಂದ ಅಲಂಕಾರ ಮಾಡಲಾಯಿತು.

ಸುಬುಧೇಂದ್ರ ತೀರ್ಥರು ರಘುಪತಿ ವೇದವ್ಯಾಸ ದೇವರಿಗೆ ವಿಶೇಷ ಪೂಜೆ, ಹಸ್ತೋದ ಸಮರ್ಪಣೆ, ಮಹಾ ಮಂಗಳಾರತಿ ಸೇವೆ ಮಾಡಿದರು. ಸಂಸ್ಕೃತ ವಿದ್ಯಾಪೀಠದಲ್ಲಿ ಪ್ರಹ್ಲಾದ ರಾಜರ ಉತ್ಸವ ಮೂರ್ತಿ ಮೆರವಣಿಗೆ ಮಾಡಲಾಯಿತು.

ಶ್ರೀಗಳು ಹಾಗೂ ಮಠದ ಭಕ್ತರು ಪಂಡಿತ, ವಿದ್ವಾಂಸರಿಗೆ ಗುಲಾಲು ಎರಚುವ ಮೂಲಕ ಓಕುಳಿ ಆಡಿದರು.

ಮಠದ ರಾಜಬೀದಿಯಲ್ಲಿ ಮಹಾ ರಥೋತ್ಸವ ಜರುಗಿದ ಬಳಿಕ ಸಪ್ತರಾತ್ರೋತ್ಸವದ ಮುಖ್ಯ ಮೂರು ದಿನಗಳ ಸಂಭ್ರಮಕ್ಕೆ ಶನಿವಾರ ಸಂಜೆ ತೆರೆಬಿತ್ತು. ಸೆ‍ಪ್ಟೆಂಬರ್ 4 ವರೆಗೆ ಸಪ್ತರಾತ್ರೋತ್ಸವ ಮುಂದುವರಿಯಲಿದೆ. ಮಠದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ರಕ್ಷಾ ಕಾರ್ತಿಕ್ ಅವರಿಂದ ಭರತನಾಟ್ಯ ಹಾಗೂ ಪ್ರಭಾತ್ ಕಲಾ ಆರ್ಟ್ಸ್‌ನ ಕಲಾವಿದರು ನೃತ್ಯ ರೂಪಕ ಪ್ರದರ್ಶಿಸಿದರು. ನೀಲಂ ಸುದರ್ಶನ ಕರ್ನಾಟಕ ಸಂಗೀತ ಕಾರ್ಯಕ್ರಮ ನೀಡಿದರು.

ಮಂತ್ರಾಲಯದ ರಾಜಬೀದಿಯಲ್ಲಿ ನಡೆದ ಮಹಾರಥೋತ್ಸವದ ಸಂದರ್ಭದಲ್ಲಿ ಹೆಲಿಕಾಪ್ಟರ್‌ ಮೂಲಕ ರಥಕ್ಕೆ ಶ್ರೀಗಳು ಪುಷ್ಪವೃಷ್ಟಿ ಮಾಡಿದರು
ಮಂತ್ರಾಲಯದಲ್ಲಿ ಶ್ರೀಗಳು ಮಠದ ಭಕ್ತರು ಪಂಡಿತ ವಿದ್ವಾಂಸರಿಗೆ ಗುಲಾಲು ಎರಚುವ ಮೂಲಕ ಓಕುಳಿ ಆಡಿದರು
ಮಂತ್ರಾಲಯ ಮಠದ ಆವರಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶಿಸಿದ ಕಲಾವಿದರು
ಮಂತ್ರಾಲಯದ ರಾಜಬೀದಿಯಲ್ಲಿ ನಡೆದ ಮಹಾರಥೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು
ಮಂತ್ರಾಲಯದ ರಾಜಬೀದಿಯಲ್ಲಿ ನಡೆದ ಮಹಾರಥೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.