ADVERTISEMENT

ರಾಯಚೂರು: ಎಸಿ ಕಚೇರಿ ದಾಖಲೆಗಳ ಸಂಗ್ರಹಾಗಾರಕ್ಕೆ ಹೊಸರೂಪ

ಸುಮಾರು 14 ಲಕ್ಷಕ್ಕೂ ಹೆಚ್ಚು ಪುಟಗಳ ಸ್ಕ್ಯಾನಿಂಗ್‌ ಪೂರ್ಣ

ನಾಗರಾಜ ಚಿನಗುಂಡಿ
Published 11 ಫೆಬ್ರುವರಿ 2022, 19:30 IST
Last Updated 11 ಫೆಬ್ರುವರಿ 2022, 19:30 IST
ರಾಯಚೂರು ಉಪವಿಭಾಗಾಧಿಕಾರಿ ಕಚೇರಿಯ ದಾಖಲೆಗಳ ಸಂಗ್ರಹಾಗಾರ ಕೋಣೆಯಲ್ಲಿ ಮರುವಿಂಗಡಣೆ ಮಾಡಿಟ್ಟಿರುವ ದಾಖಲೆಗಳ ನೋಟ
ರಾಯಚೂರು ಉಪವಿಭಾಗಾಧಿಕಾರಿ ಕಚೇರಿಯ ದಾಖಲೆಗಳ ಸಂಗ್ರಹಾಗಾರ ಕೋಣೆಯಲ್ಲಿ ಮರುವಿಂಗಡಣೆ ಮಾಡಿಟ್ಟಿರುವ ದಾಖಲೆಗಳ ನೋಟ   

ರಾಯಚೂರು: ಶತಮಾನದ ಹಿಂದೆ ಸಿದ್ಧಪಡಿಸಿದ ಭೂ ದಾಖಲೆಗಳನ್ನು ಹಾಳಾಗದಂತೆ ಮೂಲ ರೂಪದಲ್ಲಿ ಸಂರಕ್ಷಿಸುವುದು ನಿಜಕ್ಕೂ ಸವಾಲು. ಈ ಸಮಸ್ಯೆಗೆ ಪರಿಹಾರ ಹುಡುಕಿದ ರಾಯಚೂರು ಉಪವಿಭಾಗಾಧಿಕಾರಿ ಕಚೇರಿಯ ಅಧಿಕಾರಿಗಳು, ದಾಖಲೆಗಳ ಸಂಗ್ರಹಾಗಾರ (ರಿಕಾರ್ಡ್‌ ರೂಂ)ಕ್ಕೆ ಹೊಸ ಮೆರುಗು ನೀಡಿದ್ದಾರೆ.

ಶಹಾಪುರ ತಾಲ್ಲೂಕಿನ ಭೀಮರಾಯನಗುಡಿಯಲ್ಲಿರುವ ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಕಚೇರಿಯಲ್ಲಿ ಭೂ ಸ್ವಾಧೀನದ ಎಲ್ಲ ದಾಖಲೆಗಳನ್ನು ಡಿಜಿಟಲೀಕರಣ ಮಾಡಿರುವುದನ್ನು ನೋಡಿ ಬಂದಿದ್ದ ಈ ಹಿಂದೆ ರಾಯಚೂರು ಉಪ ವಿಭಾಗಾಧಿಕಾರಿಯಾಗಿದ್ದ ಸಂತೋಷ ಕಾಮಗೌಡ ಅವರು ರಾಯಚೂರಿನಲ್ಲೂ ಇದನ್ನು ಅಳವಡಿಸಿಕೊಳ್ಳುವ ಯೋಜನೆ ರೂಪಿಸಿದ್ದರು. ಅದರಂತೆ ಯೋಜನೆ ಕಾರ್ಯರೂಪಕ್ಕೂ ಬಂದಿದೆ.

ಜಿಲ್ಲಾಧಿಕಾರಿಯಾಗಿದ್ದ ಆರ್‌.ವೆಂಕಟೇಶಕುಮಾರ್‌ ಅವರಿಗೆ ಈ ಬಗ್ಗೆ ಮನವರಿಕೆ ಮಾಡಿ ಅನುದಾನ ಬಳಕೆಗೆ ಅನುಮೋದನೆ ಪಡೆದು, ಇ ಟೆಂಡರ್‌ ಮೂಲಕ ಡಿಜಿಟಲೀಕರಣ ಕಾರ್ಯವನ್ನು ಕಂಪೆನಿಯೊಂದಕ್ಕೆ ಗುತ್ತಿಗೆ ವಹಿಸಲಾಗಿತ್ತು. ಸಂತೋಷ ಅವರಿದ್ದಾಗ ಸುಮಾರು ಶೇ 80 ರಷ್ಟು ಡಿಜಿಟಲೀಕರಣ ಆಗಿತ್ತು. ಅವರು ವರ್ಗಾವಣೆ ಆದ ಬಳಿಕ ಸಂಪೂರ್ಣವಾಗಿದೆ. ಸುಮಾರು 18 ಲಕ್ಷ ಪುಟಗಳನ್ನು ಸ್ಕ್ಯಾನಿಂಗ್‌ ಮಾಡಬೇಕಿತ್ತು. ಅದರಲ್ಲಿ ಸುಮಾರು 4 ಲಕ್ಷದವರೆಗೂ ಖಾಲಿ ಪುಟಗಳಿರುವ ಕಾರಣ ಕೈಬಿಡಲಾಗಿದೆ. ಇನ್ನುಳಿದ ಎಲ್ಲ ಪುಟಗಳನ್ನು ಸ್ಕ್ಯಾನಿಂಗ್‌ ಮಾಡಿ, ಡಿಜಿಟೈಜೇಷನ್‌ ಮಾಡಿ, ಸಾಫ್ಟ್‌ ಕಾಪಿ ಕೂಡಾ ಕಂಪ್ಯೂಟರ್‌ಗೆ ಅಳವಡಿಸಲಾಗಿದೆ.

ADVERTISEMENT

ದಾಖಲೆಗಳನ್ನು ಕ್ಲೌಡ್‌ ಸ್ಟೋರೆಜ್‌ (ಆನ್‌ಲೈನ್‌ನಲ್ಲಿ ಉಳಿಸುವುದು) ಮಾಡಲಾಗುತ್ತಿದೆ. ಇದರಿಂದ ಕಚೇರಿಯಲ್ಲಿ ಯಾವುದೇ ಕಂಪ್ಯೂಟರ್‌ ಅಥವಾ ಬಿಡಿಭಾಗ ಹಾಳಾಗಿ ಹೋದರೂ ಕ್ಲೌಡ್‌ ಸ್ಟೋರೆಜ್‌ನಿಂದ ದಾಖಲೆ ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಆಫ್‌ಲೈನ್‌ನಲ್ಲೂ ದಾಖಲೆ ಪಡೆದುಕೊಳ್ಳುವ ಅವಕಾಶ ಇರುತ್ತದೆ. ರೈತರಿಗೆ ಸಂಬಂಧಿಸಿದ ಯಾವುದೇ ದಾಖಲೆ ಕಳೆದು ಹೋಗುವುದಿಲ್ಲ. ಶಾಶ್ವತ ದಾಖಲೆಯಾಗಿ ಉಳಿದುಕೊಳ್ಳುತ್ತದೆ ಎನ್ನುವುದು ಅಧಿಕಾರಿಗಳ ವಿವರಣೆ.

ರೈತರಿಗೆ ಅನುಕೂಲ: ರೈತರು ಈಗ ಭೂ ದಾಖಲೆಗಾಗಿ ಕಾಯುವ ಅಗತ್ಯ ಇರುವುದಿಲ್ಲ. ಯಾವುದೇ ಭೂಮಿಯ ಸರ್ವೇ ಸಂಖ್ಯೆ ಅಥವಾ ಕೇಸ್‌ ಸಂಖ್ಯೆ ಹೇಳಿದರೆ ಸಾಕು ದಾಖಲೆಗಳು ಸಿಗುತ್ತವೆ. ಈ ರೀತಿ ಹಲವು ಭಾಗಗಳಲ್ಲಿ ದಾಖಲೆಗಳನ್ನು ಸಂಗ್ರಹಿಸಲಾಗಿದೆ.

ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಗಳ ರಿಕಾರ್ಡ್‌ ರೂಂಗಳಲ್ಲಿ ಈ ರೀತಿಯ ಕಾರ್ಯ ಮಾಡಲಾಗಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಯಚೂರಿನಲ್ಲಿ ಮೊದಲ ಪ್ರಯತ್ನ ಸಫಲವಾಗಿದೆ. ಇದರೊಂದಿಗೆ ಹರಿದುಹೋದ ದಾಖಲೆಗಳನ್ನು ಮರುಸ್ಥಾಪಿಸುವ ಕೆಲಸವೂ ಆಗಿದೆ. ಮೂಲ ದಾಖಲೆಗಳನ್ನು ವ್ಯವಸ್ಥಿತವಾಗಿ ಬಂಡಲ್‌ಗಳನ್ನು ಮಾಡಿ, ಅವುಗಳಿಗೆ ಸಂಖ್ಯೆಗಳನ್ನು ಕೊಡಲಾಗಿದೆ. ಮುದ್ರಿಸಿಕೊಟ್ಟ ದಾಖಲೆಯನ್ನು ದೃಢೀಕರಣ ಮಾಡುವ ಪ್ರಶ್ನೆ ಎದುರಾದಾಗ, ಮೂಲ ದಾಖಲೆಯನ್ನು ಸುಲಭವಾಗಿ ಹುಡುಕುವುದಕ್ಕೆ ಈಗ ಸಾಧ್ಯವಾಗುತ್ತಿದೆ.

ಪ್ರತಿಯೊಂದು ದಾಖಲೆಗಳನ್ನು ವಿಭಾಗವಾರು, ವಿಷಯವಾರು ವಿಂಗಡಿಸಿ ಇಡಲಾಗಿದೆ. ದಾಖಲೆ ಎಲ್ಲಿದೆ ಎಂಬುದನ್ನು ಕಂಪ್ಯೂಟರ್‌ ನೆರವಿನಿಂದ ಸುಲಭವಾಗಿ ಪತ್ತೆ ಮಾಡಿಕೊಳ್ಳಬಹುದು. ತಕ್ಷಣದಲ್ಲಿ ಮೂಲ ದಾಖಲೆಯನ್ನು ಕೂಡಾ ಪರಿಶೀಲನೆ ಮಾಡಿ ನೋಡುವುದಕ್ಕೆ ಅವಕಾಶವಿದೆ. ಹೊಸ ವ್ಯವಸ್ಥೆಯಿಂದಾಗಿ 100 ವರ್ಷಗಳ ಹಿಂದಿನ ದಾಖಲೆಯನ್ನು ಇನ್ನು 100 ವರ್ಷ ಬಾಳಿಕೆ ಬರುವಂತೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.