ADVERTISEMENT

ರಾಯಚೂರು: ರೇಷ್ಮೆ ಗೂಡಿನಿಂದ ಮಾಲೆ, ಪುಷ್ಪಗುಚ್ಛ ತಯಾರಿಕೆ

ಕೃಷಿ ವಿಶ್ವವಿದ್ಯಾಲಯದಿಂದ ನಿರುಪಯುಕ್ತ ರೇಷ್ಮೆಗೂಡುಗಳ ಮೌಲ್ಯವರ್ಧನೆ

ಚಂದ್ರಕಾಂತ ಮಸಾನಿ
Published 9 ನವೆಂಬರ್ 2024, 5:41 IST
Last Updated 9 ನವೆಂಬರ್ 2024, 5:41 IST
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರೇಷ್ಮೆ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ ಮಾಲೆಗಳು
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರೇಷ್ಮೆ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ ಮಾಲೆಗಳು   

ರಾಯಚೂರು: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ರೇಷ್ಮೆ ವಿಭಾಗವು ನಿರುಪಯುಕ್ತ ರೇಷ್ಮೆ ಗೂಡುಗಳನ್ನು ಮೌಲ್ಯವರ್ಧನೆ ಮಾಡಿ ಹೂವಿನ ಮಾಲೆ, ಪುಷ್ಪಗುಚ್ಛಗಳನ್ನು ಸಿದ್ಧಪಡಿಸುವ ಮೂಲಕ ರೇಷ್ಮೆ ಬೆಳೆಗಾರರ ಆದಾಯವನ್ನು ಮೂರುಪಟ್ಟು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.

ನಿರುಪಯುಕ್ತ ರೇಷ್ಮೆಗೂಡುಗಳು ಪ್ರತಿ ಕೆ.ಜಿಗೆ ₹400ರಿಂದ ₹ 500ರಂತೆ ಮಾರಾಟವಾಗುತ್ತಿವೆ. ಕೃಷಿ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಸಹಾಯಕ ಪ್ರಾಧ್ಯಾಪಕ ಡಿ.ಕೆ.ಹಾದಿಮನಿ ಅವರ ಮಾರ್ಗದರ್ಶನದಲ್ಲಿ ರೇಷ್ಮೆಗೂಡುಗಳಿಗೆ ಹೂವಿನ ಆಕಾರ ನೀಡಿ ನಿರುಪಯುಕ್ತ ರೇಷ್ಮೆ ಗೂಡಿಗೆ ಪ್ರತಿ ಕೆಜಿಗೆ ₹1,500 ಬೆಲೆ ಸಿಗುವಂತೆ ಮಾಡಿದ್ದಾರೆ.

ವಿಶ್ವವಿದ್ಯಾಲಯದ ರೇಷ್ಮೆ ಸಾಕಾಣಿಕೆ ಕೇಂದ್ರದಲ್ಲಿ ವಿದ್ಯಾರ್ಥಿಗಳು ಗೂಡುಗಳನ್ನು ಬಣ್ಣಗಳಲ್ಲಿ ಅದ್ದಿ ಹೂವಿನ ರೂಪ ನೀಡಿದ್ದಾರೆ. ಬಗೆ ಬಗೆಯ ಆಕರ್ಷಕ ಮಾಲೆಗಳನ್ನು ಸಿದ್ಧಪಡಿಸಿ ಮಾರಾಟಕ್ಕೆ ಅಣಿಗೊಳಿಸಿದ್ದಾರೆ. ಇವುಗಳಲ್ಲಿ ಪುಷ್ಪಗುಚ್ಛ, ಹೂವಿನಕುಂಡಗಳೂ ಇವೆ.

ADVERTISEMENT

‘ವಿದ್ಯಾರ್ಥಿಗಳು ಮೂರು ತಿಂಗಳ ಕಾರ್ಯಾನುಭವದ ಅವಧಿಯಲ್ಲಿ ಆಕರ್ಷಕ ಮಾಲೆಗಳನ್ನು ತಯಾರಿಸಿದ್ದಾರೆ. ನಿರುಪಯುಕ್ತ ರೇಷ್ಮೆ ಗೂಡುಗಳನ್ನು ಬಳಸಿಕೊಂಡು ಅವುಗಳ ಮೌಲ್ಯವರ್ಧನೆ ಮಾಡಬಹುದು ಹಾಗೂ ರೇಷ್ಮೆ ಬೆಳೆಗಾರರಿಗೂ ಹೆಚ್ಚಿನ ಆದಾಯ ತಂದುಕೊಡಬಹುದು ಎನ್ನುವುದನ್ನು ನಿರೂಪಿಸಿದ್ದಾರೆ’ ಎಂದು ಸಹಾಯಕ ಪ್ರಾಧ್ಯಾಪಕ ಡಿ.ಕೆ.ಹಾದಿಮನಿ ಹೇಳಿದರು.

‘ಒಂದು ಮಾಲೆಯು ₹ 600ರಿಂದ ₹ 700 ಹಾಗೂ ಪುಷ್ಪಗುಚ್ಛಗಳು ₹200ರಿಂದ ₹300ಕ್ಕೆ ಮಾರಾಟವಾಗುತ್ತವೆ. ಇದಕ್ಕೆ ಮಾರುಕಟ್ಟೆಯಲ್ಲಿ ಬಹುಬೇಡಿಕೆ ಇದೆ. ದೊಡ್ಡ ಪ್ರಮಾಣದಲ್ಲಿ ಗುಲಾಬಿ, ಮಲ್ಲಿಗೆ, ಮುತ್ತಿನ ಮಾದರಿಯ ಹಾರಗಳನ್ನು ಸಿದ್ಧಪಡಿಸಿದರೆ ವಾರ್ಷಿಕ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಬಹುದಾಗಿದೆ’ ಎಂದು ಅವರು ತಿಳಿಸಿದರು.

‘ಕಲ್ಯಾಣ ಕರ್ನಾಟಕದಲ್ಲಿ ಅದರಲ್ಲೂ ರಾಯಚೂರು ಜಿಲ್ಲೆಯಲ್ಲಿ ಗುಣಮಟ್ಟದ ರೇಷ್ಮೆ ಉತ್ಪಾದನೆ ಮಾಡಲು ಸಾಧ್ಯವಿದೆ. ರೇಷ್ಮೆ ಉತ್ಪಾದನೆಗೆ ಪೂರಕವಾದ ವಾತಾವರಣ ಇದೆ. ರೇಷ್ಮೆಗೂಡು ಮಾರಾಟಕ್ಕೆ ರಾಮನಗರಕ್ಕೆ ಹೋಗಬೇಕು ಎನ್ನುವ ಒಂದೇ ಕಾರಣಕ್ಕೆ ರೈತರು ರೇಷ್ಮೆ ಬೆಳೆಗೆ ಹಿಂದೇಟು ಹಾಕುತ್ತಿದ್ದಾರೆ. ಆದರೆ, ಜಿಲ್ಲೆಯಲ್ಲಿ ಒಮ್ಮೆ ರೇಷ್ಮೆ ಬೆಳೆಯಲು ಆರಂಭಿಸಿದ ರೈತರು ಮತ್ತೆ ತಮ್ಮ ಹೆಜ್ಜೆ ಹಿಂದೆ ಇಟ್ಟಿಲ್ಲ ಎನ್ನುವುದು ಸಹ ಅಷ್ಟೇ ಸತ್ಯವಾಗಿದೆ’ ಎಂದು ಹೇಳಿದರು.

ಆದಾಯ ವೃದ್ಧಿಗೆ ಪೂರಕ

ಕಲ್ಯಾಣ ಕರ್ನಾಟಕದ ಬೀದರ್ ಕಲಬುರಗಿ ಕೊಪ್ಪಳ ರಾಯಚೂರು ಯಾದಗಿರಿ ಬಳ್ಳಾರಿ ವಿಜಯನಗರ ಜಿಲ್ಲೆಗಳ ವ್ಯಾಪ್ತಿಯ 885 ಗ್ರಾಮಗಳಲ್ಲಿ 7533 ಬೆಳೆಗಾರರು ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ವಾರ್ಷಿಕ 2595 ಮೆಟ್ರಿಕ್‌ ಟನ್ ಗೂಡು ಉತ್ಪಾದನೆಯಾಗುತ್ತದೆ ಎಂದು ರೇಷ್ಮೆ ಇಲಾಖೆ ದಾಖಲೆಗಳು ಹೇಳುತ್ತವೆ. ಕಲ್ಯಾಣ ಕರ್ನಾಟಕದಲ್ಲಿ ರೇಷ್ಮೆ ಗೂಡು ಉತ್ಪಾದನೆಯಲ್ಲಿ ವಿಜಯನಗರ ಜಿಲ್ಲೆ ಮುಂಚೂಣಿಯಲ್ಲಿದೆ. ನಂತರದ ಸ್ಥಾನಗಳಲ್ಲಿ ಬೀದರ್‌ ಕಲಬುರಗಿ ಹಾಗೂ ಬಳ್ಳಾರಿ ಜಿಲ್ಲೆಗಳು ಬರುತ್ತವೆ. ಈ ಜಿಲ್ಲೆಗಳಲ್ಲಿ ನಿರುಪಯುಕ್ತ ರೇಷ್ಮೆ ಗೂಡುಗಳನ್ನು ಬಳಸಿ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಹೂಮಾಲೆ ಪುಷ್ಪಗುಚ್ಛ ತಯಾರಿಸಿದರೆ ಆದಾಯ ಹೆಚ್ಚುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಕೃಷಿ ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.

ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರೇಷ್ಮೆ ವಿಭಾಗದ ವಿದ್ಯಾರ್ಥಿಗಳು ಸಿದ್ಧಪಡಿಸಿದ ಗುಲಾಬಿ ಹೂವಿನ ಮಾದರಿಯ ಪುಷ್ಪಗುಚ್ಛ
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರೇಷ್ಮೆ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ ಗುಲಾಬಿ ಮಾದರಿ ಮಾಲೆ
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರೇಷ್ಮೆ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ ಮಾಲೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.